ಕನ್ನಡಪ್ರಭ ವಾರ್ತೆ ಮಂಗಳೂರು
ಯಾವುದೇ ರೀತಿಯಿಂದಾದರೂ ಅಧಿಕಾರಕ್ಕೆ ಬರಬೇಕು ಎಂಬ ರಾಜಕಾರಣದ ಮನಸ್ಥಿತಿಯನ್ನು ಹೋಗಲಾಡಿಸಲು, ಪ್ರತಿಯೊಂದು ಪ್ರಜೆಗಳು ಯೋಚಿಸಿ ಮತದಾನ ಮಾಡಬೇಕು ಎಂದು ಜಿಲ್ಲಾ ಪ್ರಧಾನ ನ್ಯಾಯಾಧೀಶರಾದ ರವೀಂದ್ರ ಎಂ. ಜೋಶಿ ಹೇಳಿದ್ದಾರೆ.ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಗುರುವಾರ ರಾಷ್ಟ್ರೀಯ ಮತದಾನ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಪ್ರಜಾಪ್ರಭುತ್ವದ ಅಡಿಪಾಯ ನಿಂತಿರುವುದೇ ಪ್ರಜೆಗಳ ಹಕ್ಕು ಮತ್ತು ಕರ್ತವ್ಯಗಳನ್ನು ನಿರ್ವಹಿಸುವುದರ ಮೇಲೆ. ದೇಶದ ಒಳಿತಿಗಾಗಿ ಪ್ರಜೆಗಳು ತಮ್ಮ ಮತ ಚಲಾಯಿಸುವ ಮುನ್ನ ಸಾಕಷ್ಟು ಯೋಚಿಸಿ ಮತದಾನ ಮಾಡಬೇಕು, ಇದು ಮುಂದಿನ ಉತ್ತಮ ಆಡಳಿತ ನಿರ್ವಹಣೆಗೆ ಸಹಕಾರಿಯಾಗಬಲ್ಲದು ಎಂದು ಅವರು ಕಿವಿಮಾತು ಹೇಳಿದರು.ಪ್ರಜಾಪ್ರಭುತ್ವ ಸ್ಥಾಪಿಸಲು ನಮ್ಮ ಹಿರಿಯರು ಮಾಡಿದ ತ್ಯಾಗ ಹಾಗೂ ಶ್ರಮವನ್ನು ಅರಿತುಕೊಳ್ಳಬೇಕು. ದೇಶದ ವೈವಿಧ್ಯಮಯ ಪರಂಪರೆ, ಆಚರಣೆಗಳನ್ನು ಅಧ್ಯಯನ ಮಾಡಿ ಸಂವಿಧಾನ ರೂಪಿಸಲಾಗಿದೆ. ನಾವು ಕೇವಲ ವಿದ್ಯಾವಂತರಾದರೆ ಸಾಲದು ಪ್ರಜ್ಞಾವಂತರು ಆಗಬೇಕು ಎಂದು ರವೀಂದ್ರ ಜೋಶಿ ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾತನಾಡಿ, ದೇಶ ಸ್ವತಂತ್ರಗೊಂಡ ಆರಂಭದಲ್ಲೇ ಸಾರ್ವತ್ರಿಕ ಮತದಾನದ ಹಕ್ಕು ನೀಡಿದ ದೇಶ ನಮ್ಮದು. ಹಿಂದೆ ಉಳ್ಳವರಿಗೆ ಮಾತ್ರ ಮತದಾನದ ಹಕ್ಕು ಇತ್ತು, ಆದರೆ ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಮತ ಚಲಾಯಿಸುವ ಹಕ್ಕು ದೊರೆತಿದೆ. ಯಾವುದೇ ಆಮಿಷಕ್ಕೆ ಒಳಗಾಗದೆ ಸಮಾಜದ ಬಗ್ಗೆ ಕಾಳಜಿ ವಹಿಸಿ ಮತದಾನ ಮಾಡಬೇಕು ಎಂದು ಕರೆ ನೀಡಿದರು.ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಆನಂದ್ ಕೆ. ಮಾತನಾಡಿ, ಸ್ವೀಪ್ ಕಾರ್ಯ ಚಟುವಟಿಕೆಗಳ ವಿವರ ನೀಡಿದರು. ಈ ಸಂದರ್ಭದಲ್ಲಿ ಬಿತ್ತಿ ಪತ್ರ ಹಾಗೂ ಸ್ವೀಪ್ ಕ್ರಿಯಾಯೋಜನೆ ಪುಸ್ತಕ ಬಿಡುಗಡೆ ಮಾಡಲಾಯಿತು. ಮತದಾನ ಮತ್ತು ಚುನಾವಣೆ ಪ್ರಕ್ರಿಯೆ ಕುರಿತು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮತದಾರರ ಪ್ರತಿಜ್ಞಾವಿಧಿ ಭೋದಿಸಲಾಯಿತು. ಸ್ವೀಪ್ ಚಟುವಟಿಕೆಯಲ್ಲಿ ಅತ್ಯುನ್ನತ ಸಾಧನೆಗೈದ ಉಪನ್ಯಾಸಕಿ ಪ್ರಮೀಳ ರೈ ಅವರನ್ನು ಸನ್ಮಾನಿಸಲಾಯಿತು.ಅಪರ ಜಿಲ್ಲಾಧಿಕಾರಿ ಡಾ.ಜಿ. ಸಂತೋಷ್ ಕುಮಾರ್, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಆನಂದ್ ಸಿ.ಎಲ್, ಉಪ ಆಯುಕ್ತ ಗಿರೀಶ್ ನಂದನ್, ಸರ್ಕಾರಿ ಪದವಿ ಕಾಲೇಜು ಪ್ರಾಂಶುಪಾಲ ಡಾ. ಜಯಕರ್ ಭಂಡಾರಿ ಇದ್ದರು.