-ಬಿಜಿಕೆರೆ ಗ್ರಾಮ ಪಂಚಾಯಿತಿ ಸದಸ್ಯರಿಂದ ಅಧ್ಯಕ್ಷ ಎಸ್. ಜಯಣ್ಣ ಅವರಿಗೆ ಮನವಿ
-----ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು
ಸೋಲಾರ್ ಕಂಪನಿಯಿಂದ ತೆರಿಗೆ ವಸೂಲಿ ಮಾಡುವವರೆಗೂ ಕಂಪನಿಯ ಕಾಮಗಾರಿಗೆ ತಡೆ ನೀಡುವಂತೆ ಆಗ್ರಹಿಸಿ ತಾಲೂಕಿನ ಬಿಜಿಕೆರೆ ಗ್ರಾಮ ಪಂಚಾಯಿತಿ ಸದಸ್ಯರು ಅಲ್ಲಿನ ಅಧ್ಯಕ್ಷರಿಗೆ ಮನವಿ ಸಲ್ಲಿಸಿದ್ದಾರೆ.ಗ್ರಾಮ ಪಂಚಾಯಿತಿ ಆವರಣದಲ್ಲಿ ಮನವಿ ಸಲ್ಲಿಸಿದ ಸದಸ್ಯರು, ಮುತ್ತಿಗಾರಹಳ್ಳಿ ಸಮೀಪದಲ್ಲಿ ಅಶ್ವಮೇಧ ಸೋಲಾರ್ ಕಂಪನಿಯ ಕಾಮಗಾರಿ ನಡೆಯುತ್ತಿದೆ. ಇವರು 2017-18 ರಂದು ಕಾಮಗಾರಿ ನಡೆಸಲು ಪಂಚಾಯಿಯಿಂದ ಅನುಮತಿ ಪಡೆದಿದ್ದಾರೆ. ಆದರೆ, ಇಲ್ಲಿಯವರೆಗೆ ತೆರಿಗೆ ಪಾವತಿಸದೆ ಉದ್ಧ ಟತನ ಪ್ರದರ್ಶಿಸುತ್ತಿದ್ದಾರೆ ಎಂದು ದೂರಿದರು.
ಕಂಪನಿಯವರಿಗೆ ತೆರಿಗೆ ಕಟ್ಟುವಂತೆ ಈಗಾಗಲೇ ಮೂರು ಬಾರಿ ನೋಟಿಸ್ ನೀಡಿದರೂ ಕ್ರಮ ವಹಿಸುತ್ತಿಲ್ಲ. ಸಂಬಂಧಿಸಿದ ಸೋಲಾರ್ ಕಂಪನಿಯ ಅಧಿಕಾರಿಗಳಿಗೆ ಮೌಖಿಕವಾಗಿ ಸೂಚಿಸಿದರೂ ಪ್ರಯೋಜನವಾಗಿಲ್ಲ ಎಂದರು.ಸೋಲಾರ್ ಕಂಪನಿ ತೆರಿಗೆ ಕಟ್ಟುವ ವಿಚಾರವಾಗಿ ಪಂಚಾಯತಿಯಲ್ಲಿ ಸಭೆ ನಡೆಸಿ, ಎಂಟು ವರ್ಷಗಳ ತೆರಿಗೆ ಕಟ್ಟಬೇಕೆಂದು ಕಡ್ಡಾಯವಾಗಿ ತೀರ್ಮಾನಿಸಿದ್ದರೂ ಕಂಪನಿಯವರು ಈವರೆಗೂ ತೆರಿಗೆ ಕಟ್ಟದೆ ದಿನ ದೂಡುತ್ತಿದ್ದಾರೆ. ಈಗಾಗಲೇ ಕಾಮಗಾರಿ ಮುಕ್ತಾಯ ಹಂತಕ್ಕೆ ಬಂದಿದ್ದರೂ ಒಂದು ರು. ಕಂದಾಯ ಪಾವತಿಸಿಲ್ಲ.
ಸಂಬಂಧಿಸಿದ ಗ್ರಾಪಂ ಅಧಿಕಾರಿಗಳು ಕಾಮಗಾರಿಗೆ ತಡೆ ನೀಡಿ, ಮೂರು ದಿನಗಳ ಒಳಗಾಗಿ ತೆರಿಗೆ ವಸೂಲಿ ಮಾಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿ ಗ್ರಾಪಂ ಅಧ್ಯಕ್ಷ ಎಸ್. ಜಯಣ್ಣ ಅವರಿಗೆ ಮನವಿ ಸಲ್ಲಿಸಿದರು.ಪಂಚಾಯಿತಿ ಸದಸ್ಯರಾದ ಮಹೇಶ್ ಕೇಶವ ಮೂರ್ತಿ, ಜಿ. ಮಹೇಶ, ಬೊಮ್ಮಣ್ಣ, ರುದ್ರಮುನಿ, ತಿಪ್ಪೇಸ್ವಾಮಿ, ಮುಖಂಡರಾದ ಎಂ.ಪಿ. ನಾಗರಾಜ, ರಮೇಶ ಬಾಬು, ಡಿ.ಪಿ. ಬಸವರಾಜ, ಕೊಲ್ಲಣ್ಣ, ರಾಜ, ನಿಂಗಣ್ಣ ಗುಂಡಣ್ಣ, ನಾಗಯ್ಯ, ಬಿ . ಬಸವರಾಜ, ಎಲ್. ನಾಗರಾಜ, ಸಿದ್ದಣ್ಣ ಇದ್ದರು.