ಕಾರವಾರ: ರಾಜ್ಯದ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಕಳೆದ 10ರಿಂದ 15 ವರ್ಷಗಳಿಂದ ಅನ್‌ಸ್ಕಿಲ್ಡ್, ಸಿಡಿಸಿ ಹಾಗೂ ಡಿ ಗ್ರೂಪ್ ಹುದ್ದೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಾರು 1000 ನೌಕರರನ್ನು ಅ. 31, 2026ರಂದು ಸೇವೆಯಿಂದ ಬಿಡುಗಡೆಗೊಳಿಸಲು ಉನ್ನತ ಶಿಕ್ಷಣ ಇಲಾಖೆ ಆದೇಶಿಸಿದೆ. ಈ ಆದೇಶದಿಂದ ಸಾವಿರಾರು ಕುಟುಂಬಗಳ ಜೀವನೋಪಾಯಕ್ಕೆ ತೊಂದರೆಯಾಗುವ ಆತಂಕ ವ್ಯಕ್ತವಾಗಿದೆ.ನೌಕರರ ಸೇವೆಯನ್ನು ಮುಂದುವರಿಸುವಂತೆ ಮುಖ್ಯಮಂತ್ರಿಗಳಿಗೆ ಶಿಫಾರಸು ಮಾಡಬೇಕೆಂದು ಒತ್ತಾಯಿಸಿ, ಉನ್ನತ ಶಿಕ್ಷಣ ಇಲಾಖೆಯ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಘಟಕದ ವತಿಯಿಂದ ಸೋಮವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಕಳೆದ 10ರಿಂದ 15 ವರ್ಷಗಳಿಂದ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಆಡಳಿತಾತ್ಮಕ ಹಾಗೂ ದೈನಂದಿನ ಕಾರ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿರುವ ನೌಕರರನ್ನು ಏಕಾಏಕಿ ಸೇವೆಯಿಂದ ಬಿಡುಗಡೆಗೊಳಿಸುವುದರಿಂದ ಸುಮಾರು 1000 ಬಡ ಕುಟುಂಬಗಳ ಜೀವನೋಪಾಯಕ್ಕೆ ತೀವ್ರ ತೊಂದರೆಯಾಗಲಿದೆ. ಆದ್ದರಿಂದ ಮಾನವೀಯ ದೃಷ್ಟಿಯಿಂದ ನೌಕರರ ಸೇವೆಯನ್ನು ಮುಂದುವರಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಂಘದ ಪದಾಧಿಕಾರಿಗಳು ಮನವಿಯಲ್ಲಿ ಒತ್ತಾಯಿಸಿದ್ದಾರೆ.ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಅಮಿತಕುಮಾರ ನಾಗರಾಜ ಜೋಗಳೇಕರ, ರೇಣುಕಾ ಕುಡಾಳ್ಕರ್, ಸಹನಾ ದುರ್ಗೇಕರ್, ಪ್ರಹ್ಲಾದ್ ಜೋಗಳೇಕರ, ಸುರೇಶ್ ಕೊರವರ, ಶಹನಾಜ ರಾಮಾಪುರ, ಪರಶುರಾಮ ಬಿ. ಚಲವಾದಿ, ಶಿವರಂಜನ ಆಗೇರ, ರಾಘವೇಂದ್ರ ಮುರುಡೇಶ್ವರ ಹಾಗೂ ಜಯಾ ಕಾರವಾರ ಉಪಸ್ಥಿತರಿದ್ದರು. ರಾಷ್ಟ್ರೀಯ ಹೆದ್ದಾರಿ- 66ರಲ್ಲಿ ದ್ವಿಮುಖ ಸಂಚಾರಕ್ಕೆ ಅವಕಾಶ
ಕಾರವಾರ: ಮಳೆ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಕಾರವಾರ ತಾಲೂಕಿನ ಬಿಣಗಾ ಕರಿದೇವಸ್ಥಾನದಿಂದ ಅರಗಾ ಮಹಾದೇವಸ್ಥಾನ ಕ್ರಾಸ್‌ವರೆಗಿನ ರಾಷ್ಟ್ರೀಯ ಹೆದ್ದಾರಿ- 66ರಲ್ಲಿ ದ್ವಿಮುಖ ಸಂಚಾರಕ್ಕೆ ಮುಕ್ತಗೊಳಿಸಿ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಆದೇಶ ಹೊರಡಿಸಿದ್ದಾರೆ.ಮಳೆಗಾಲದಲ್ಲಿ ಗುಡ್ಡದ ಮೇಲಿನಿಂದ ನೀರು ರಭಸವಾಗಿ ಹರಿದು ಕಲ್ಲು ಹಾಗೂ ಮಣ್ಣು ರಸ್ತೆಗೆ ಬೀಳುವ ಅಪಾಯವಿದ್ದ ಕಾರಣ, ಮುಂಜಾಗ್ರತಾ ಕ್ರಮವಾಗಿ ಜು. 4ರಿಂದ ಮಳೆಗಾಲ ಮುಗಿಯುವವರೆಗೆ ಕಾರವಾರದಿಂದ ಅಂಕೋಲಾ ಕಡೆಗೆ ತೆರಳುವ ರಸ್ತೆಯಲ್ಲಿ ವಾಹನ ಹಾಗೂ ಸಾರ್ವಜನಿಕ ಸಂಚಾರವನ್ನು ನಿರ್ಬಂಧಿಸಿ, ಅಂಕೋಲಾದಿಂದ ಕಾರವಾರಕ್ಕೆ ತೆರಳುವ ರಸ್ತೆಯಲ್ಲಿ ಮಾತ್ರ ಏಕಮುಖ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು.