ಸಮರ್ಪಕ ವಿದ್ಯುತ್‌ ಪೂರೈಸಲು ರೈತ ಸಂಘದಿಂದ ಮನವಿ

KannadaprabhaNewsNetwork |  
Published : Feb 18, 2025, 12:31 AM IST
ಹಾವೇರಿಯ ಪ್ರವಾಸಿ ಮಂದಿರದಲ್ಲಿ ರೈತ ಸಂಘದ ಮುಖಂಡರು ಸಚಿವ ಕೆ.ಜೆ. ಜಾರ್ಜ್‌ ಅವರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಈಗಾಗಲೇ ಇರುವ ೧೧೦ ಕೆವಿ ಗ್ರಿಡ್‌ಗಳನ್ನು ೨೨೦ ಕೆವಿಗೆ ಮತ್ತು ೩೩ ಕೆವಿ ಇರುವ ಗ್ರಿಡ್‌ಗಳನ್ನು ೧೧೦ ಕೆವಿಗೆ ಅಪ್‌ಗ್ರೇಡ್ ಮಾಡಬೇಕು.

ಹಾವೇರಿ: ಹೆಸ್ಕಾಂ ಇಲಾಖೆಗೆ ಸಂಬಂಧಿಸಿದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಾಮೂಹಿಕ ನಾಯಕತ್ವದ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಮುಖಂಡರು ಸೋಮವಾರ ಪ್ರವಾಸಿ ಮಂದಿರದ ಬಳಿ ಪ್ರತಿಭಟಿಸಿ ಬಳಿಕ ಇಂಧನ ಸಚಿವ ಕೆ.ಜೆ. ಜಾರ್ಜ್‌ ಅವರಿಗೆ ಮನವಿ ಸಲ್ಲಿಸಿದರು.ಇಂಧನ ಸಚಿವರ ಪ್ರವಾಸದ ಹಿನ್ನೆಲೆಯಲ್ಲಿ ಇಲ್ಲಿನ ಪ್ರವಾಸಿ ಮಂದಿರದ ಬಳಿ ಜಮಾಯಿಸಿದ್ದ ರೈತ ಸಂಘದ ಮುಖಂಡರು ಸಮರ್ಪಕ ವಿದ್ಯುತ್ ಪೂರೈಕೆ, ಶೀಘ್ರ ಸಂಪರ್ಕ ಯೋಜನೆ ಆರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟಿಸಿದರು. ಈ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ಕಳೆದ ೩- ೪ ವರ್ಷಗಳಿಂದ ಅತಿವೃಷ್ಟಿ ಹಾಗೂ ಬರಗಾಲದಿಂದ ಜಿಲ್ಲೆಯ ಜನತೆ ತತ್ತರಿಸಿದ್ದಾರೆ. ಕಳೆದ ವರ್ಷ ಬರಗಾಲ ಆವರಿಸಿ ನೀರಿನ ಸಮಸ್ಯೆ ಎದುರಾಗಿತ್ತು. ಈ ವರ್ಷ ಮಳೆಯಾಗಿದೆ. ಆದರೆ ವಿದ್ಯುತ್ ಕಣ್ಣಾಮುಚ್ಚಾಲೆ ಹೆಚ್ಚಾಗಿದೆ. ಇನ್ನಾದರೂ ಸಮರ್ಪಕ ವಿದ್ಯುತ್ ಪೂರೈಸಬೇಕು. ಶೀಘ್ರ ಸಂಪರ್ಕ ಯೋಜನೆ, ಅಕ್ರಮ- ಸಕ್ರಮ, ಹಳೆಯ ಕಂಬ ಹಾಗೂ ವೈರ್ ಬದಲಾವಣೆ, ಒವರ್‌ಲೋಡ್ ಟಿಸಿಗಳನ್ನು ಅಪ್‌ಗ್ರೇಡ್ ಮಾಡುವುದು ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವ ಮೂಲಕ ಸಂಕಷ್ಟದಿಂದ ಪಾರು ಮಾಡಬೇಕೆಂದು ಒತ್ತಾಯಿಸಿದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ ಇರುವ ೧೧೦ ಕೆವಿ ಗ್ರಿಡ್‌ಗಳನ್ನು ೨೨೦ ಕೆವಿಗೆ ಮತ್ತು ೩೩ ಕೆವಿ ಇರುವ ಗ್ರಿಡ್‌ಗಳನ್ನು ೧೧೦ ಕೆವಿಗೆ ಅಪ್‌ಗ್ರೇಡ್ ಮಾಡಬೇಕು. ರೈತರ ಬೋರ್‌ವೆಲ್‌ಗಳಿಗೆ ಹೊಸದಾಗಿ ಆರ್‌ಆರ್ ನಂಬರ್ ಒದಗಿಸಿ ಕೊಡುವಂತೆ ಆಗಬೇಕು.

ಹೊಸದಾಗಿ ಮಂಜೂರಾದ ಗ್ರಿಡ್‌ಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಹಾವೇರಿ ತಾಲೂಕು ಹೊಂಬರಡಿ ಗುಡ್ಡದಲ್ಲಿ ೧೧೦ ಕೆವಿ ವಿದ್ಯುತ್ ವಿತರಣಾ ಕೇಂದ್ರ ನಿರ್ಮಾಣ ಮಾಡಬೇಕು. ಹಲವೆಡೆ ದೊಡ್ಡದಿರುವ ವಿದ್ಯುತ್ ಸೆಕ್ಷನ್‌ನ್ನು ಇಬ್ಭಾಗಿಸಿ ೨ ಸೆಕ್ಷನ್‌ಗಳಾಗಿ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.ರೈತರ ಮನವಿ ಸ್ವೀಕರಿಸಿ ಮಾತನಾಡಿದ ಇಂಧನ ಸಚಿವ ಕೆ.ಜೆ. ಜಾರ್ಜ್, ರಾಜ್ಯ ಸರ್ಕಾರ ರೈತರ ಪರವಾಗಿದೆ. ಪ್ರತಿದಿನ ೭ತಾಸು ಕರೆಂಟ್ ಕೊಡಲು ವ್ಯವಸ್ಥೆ ಮಾಡಿದ್ದೇವೆ. ನಿರಂತರ ಜ್ಯೋತಿ ಮಾಡಿರುವುದರಿಂದ ಹಲವು ಕಡೆ ವೋಲ್ಟೇಜ್ ಸಮಸ್ಯೆ ಆಗುತ್ತಿದ್ದು, ಇದನ್ನು ಸರಿಪಡಿಸುತ್ತೇವೆ. ಫಾರ್ಮ್ ಹೌಸ್‌ನಲ್ಲಿ ಸಿಂಗಲ್ ಫೇಸ್ ಕೊಡಲು ಮುಂದಾಗಿದ್ದು, ನೀರಾವರಿ ಮಾಡುವ ರೈತರಿಗೆ ಅನುಕೂಲವಾಗಲಿದೆ ಎಂದರು.ಆರ್‌ಆರ್ ನಂಬರ್ ಪಡೆಯಲು ನಿಗದಿಪಡಿಸಿದ ಬಿಲ್‌ನ್ನು ಪಾವತಿಸಿದರೆ ವಿದ್ಯುತ್ ಟ್ರಾನ್ಸ್‌ಫಾರ್ಮರ್ ೫೦೦ ಮೀಟರ್ ಒಳಗಡೆ ಇದ್ದರೆ, ಇಲಾಖೆಯೇ ಕಂಬ, ತಂತಿ ಸೌಲಭ್ಯ ಕೊಡುತ್ತೇವೆ. ೫೦೦ ಮೀಟರ್‌ಕ್ಕಿಂತ ದೂರವಿದ್ದರೆ ಕುಸುಮ್- ಬಿ ಯೋಜನೆಯಡಿ ಕೇಂದ್ರ ಸರ್ಕಾರದ ಪಾಲು ಶೇ. ೫೦, ರಾಜ್ಯ ಸರ್ಕಾರದ್ದು ಶೇ. ೩೦ ಹಾಗೂ ರೈತರು ಶೇ. ೨೦ರಷ್ಟು ವಂತಿಕೆ ಪಾವತಿಸಿದರೆ ಎಲ್ಲ ಸೌಲಭ್ಯ ಕಲ್ಪಿಸುತ್ತೇವೆ ಎಂದರು.ಈ ವೇಳೆ ಹೆಸ್ಕಾಂ ಅಧ್ಯಕ್ಷ ಅಜೀಮ್‌ಪೀರ್‌ ಖಾದ್ರಿ, ಶಾಸಕರಾದ ಬಸವರಾಜ ಶಿವಣ್ಣನವರ, ರುದ್ರಪ್ಪ ಲಮಾಣಿ, ಯು.ಬಿ. ಬಣಕಾರ, ಶ್ರೀನಿವಾಸ ಮಾನೆ, ಪ್ರಕಾಶ ಕೋಳಿವಾಡ, ಯಾಸೀರ್‌ಖಾನ್ ಪಠಾಣ, ಡಿಸಿ ವಿಜಯಮಹಾಂತೇಶ ದಾನಮ್ಮನವರ, ಜಿಪಂ ಸಿಇಒ ಅಕ್ಷಯ ಶ್ರೀಧರ, ಎಸ್‌ಪಿ ಅಂಶುಕುಮಾರ, ಹೆಸ್ಕಾಂ ಎಂಡಿ ವೈಶಾಲಿ ಎಂ.ಎಸ್., ರೈತರಾದ ಅಡಿವೆಪ್ಪ ಆಲದಕಟ್ಟಿ, ದಿಳ್ಳೆಪ್ಪ ಮಣ್ಣೂರ, ಸುರೇಶ ಚಲವಾದಿ, ಶಿವಯೋಗಿ ಹೊಸಗೌಡ್ರ, ರುದ್ರಗೌಡ ಕಾಡನಗೌಡ್ರ, ಶಿವಬಸಪ್ಪ ಗೋವಿ, ಗಂಗನಗೌಡ ಮುದಿಗೌಡ್ರ, ಪ್ರಭುಗೌಡ ಪ್ಯಾಟಿ, ಶಂಕರಗೌಡ ಶಿರಗಂಬಿ, ಸುರೇಶ ಹೊನ್ನಪ್ಪನವರ, ಸಿದ್ದಪ್ಪ ಕುಪ್ಪೆಲೂರ, ಚೆನ್ನಪ್ಪ ಮರಡೂರ, ಮುತ್ತು ಗುಡಗೇರಿ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾನೂನಿನ ಜ್ಞಾನ ಪಡೆಯುವುದು ಅರಣ್ಯವಾಸಿಯ ಮೂಲಭೂತ ಕರ್ತವ್ಯ: ರಂಜಿತಾ
ನೋಂದಾಯಿಸಿದ ಎಲ್ಲ ರೈತರ ಮೆಕ್ಕೆಜೋಳ ಖರೀದಿ: ಸೋಮಣ್ಣ ಉಪನಾಳ