ಹೊಸದುರ್ಗಕ್ಕೆ 2ಟಿಎಂಸಿ ನೀರು ಕಾಯದಿರಿಸಲು ಮನವಿ

KannadaprabhaNewsNetwork | Published : Aug 6, 2024 12:33 AM

ಸಾರಾಂಶ

ಬೆಲಗೂರಿನಲ್ಲಿ ಜಲ್ ಜೀವನ್ ಮಿಷನ್ ಯೋಜನೆಯ ಕಾರ್ಯಕ್ರಮವನ್ನು ಶಾಸಕ ಬಿಜಿ ಗೋವಿಂದಪ್ಪ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ವಾಣಿವಿಲಾಸ ಸಾಗರ ಜಲಾಶಯದ ಹಿನ್ನೀರಿನ ವ್ಯಾಪ್ತಿಯಲ್ಲಿ ಬರುವ 5 ಗ್ರಾಮ ಪಂಚಾಯಿತಿಯ ಹಳ್ಳಿಗಳಿಗೆ ಕುಡಿಯುವ ನೀರು ಹಾಗೂ ಕೃಷಿ ಭೂಮಿಗೆ ನೀರು ಒದಗಿಸಲು ಜಲಾಶಯದಿಂದ 2 ಟಿಎಂಸಿ ನೀರು ಕಾಯ್ದಿರಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಶಾಸಕ ಬಿ.ಜಿ. ಗೋವಿಂದಪ್ಪ ಹೇಳಿದರು.

ತಾಲೂಕಿನ ಬೆಲಗೂರು ಗ್ರಾಮದಲ್ಲಿ ಜಲಜೀವನ್ ಮಿಷನ್‌ ಯೋಜನೆಯಡಿ ಕುಡಿಯುವ ನೀರು ಯೋಜನೆಗೆ ಶಂಕು ಸ್ಥಾಪನೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿವಿ ಸಾಗರದ ಹಿನ್ನೀರಿನ ಲಕ್ಕಿಹಳ್ಳಿ, ಅತ್ತಿಮಗೆ, ಜಿ.ಎನ್.ಕೆರೆ, ಮತ್ತೋಡು ಸೇರಿದಂತೆ ಐದಾರು ಗ್ರಾಪಂ ಗ್ರಾಮದ ರೈತರು ಸಮುದ್ರದ ನೆಂಟಸ್ತನ ಉಪ್ಪಿಗೆ ಬರ ಅನ್ನುವ ಹಾಗೆ ನೀರು ಪಕ್ಕದಲ್ಲಿದ್ದರು ಕೊಳವೆ ಬಾವಿಯಲ್ಲಿ ಅಂತರ್ಜಲವಿಲ್ಲದೆ ಕುಡಿಯುವ ನೀರು, ಹಾಗೆಯೇ ರೈತರಿಗೂ ಸಹ ಕೃಷಿಗೆ ಬೋರ್‌ವೆಲ್‌ನಲ್ಲಿ ನೀರಿಲ್ಲದೆ ಕಂಗಾಲಾಗಿದ್ದಾರೆ. ಆ ರೈತರ ಸಂಕಷ್ಟಗಳನ್ನು ಹಿರಿಯೂರಿನ ರೈತರು ಜನಪ್ರತಿನಿಧಿಗಳಿಗೆ ಮನವರಿಕೆ ಮಾಡಿ ಸಿಎಂ ಸಿದ್ದರಾಮಯ್ಯ ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದರು.

ಹೊಸದುರ್ಗ ತಾಲೂಕಿನಲ್ಲಿ ಭದ್ರಾ ಮೇಲ್ದಂಡೆ ಯೋಜನೆಯ ಅಡಿಯಲ್ಲಿ ಚಿತ್ರದುರ್ಗ ನಾಲೆ 65 ಕಿಮೀ. ತುಮಕೂರು 29 ಕಿಮೀ ನಾಲೆಗಳ ಮುಖಾಂತರ ತಾಲೂಕಿನ 101 ಕೆರೆಗಳನ್ನು ನೀರು ತುಂಬಿಸುವ, 1.33 ಲಕ್ಷ ಎಕರೆ ಜಮೀನಿಗೆ ನೀರುಣಿಸುವ ಕೆಲಸದ ಜೊತೆಗೆ ಹೊಸದುರ್ಗ ಪಟ್ಟಣಕ್ಕೆ ಮಾರ್ಚ್ ಒಳಗೆ ಭದ್ರಾ ಜಲಾಶಯದಿಂದ ಶುದ್ಧ ಕುಡಿಯುವ ನೀರು ಒದಗಿಸಲಾಗುವುದು ಎಂದು ತಿಳಿಸಿದರು.

ಬಿಜೆಪಿ ಅಧಿಕಾರ ಇದ್ದಾಗ 20ಕ್ಕೂ ಅಧಿಕ ಹಗರಣದಲ್ಲಿ ಸಿಲುಕಿದ್ದು ಇದೀಗ ಕಾಂಗ್ರೆಸ ಸರ್ಕಾರದ ಮೇಲೆ ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ವಾಲ್ಮೀಕಿ ಹಗರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷೆ ಸವಿತ ವಹಿಸಿದ್ದರು. ತಾಪಂ ಕಾರ್ಯನಿರ್ವಹಣಾಧಿಕಾರಿ ಸುನಿಲ್, ಅಧಿಕಾರಿಗಳಾದ ಪ್ರಕಾಶ್, ಪ್ರಸನ್ನ ಕುಮಾರ್, ಕೆಪಿಸಿಸಿ ಸದಸ್ಯರಾದ ಎಂಪಿ.ಶಂಕರ್, ಅಲ್ತಾಫ್, ಕಾಂಗ್ರೆಸ ಅಧ್ಯಕ್ಷರಾದ ಲೋಕೇಶ್ವರಪ್ಪ, ರಾಜಪ್ಪ, ಪದ್ಮನಾಭ, ಮುಖಂಡರಾದ ಕೆ.ಸಿ.ನಿಂಗಪ್ಪ, ಆಗ್ರೋ ಶಿವಣ್ಣ, ಪಿಡಿಒ ವಿಶ್ವನಾಥ್, ಗ್ರಾಪಂ ಸದಸ್ಯರು ಹಾಜರಿದ್ದರು.

Share this article