ರೈಲ್ವೆ ಬೇಡಿಕೆ ಈಡೇರಿಕೆಗೆ ಬಳ್ಳಾರಿ ಸಂಸದ ತುಕಾರಾಂಗೆ ಮನವಿ ಸಲ್ಲಿಕೆ

KannadaprabhaNewsNetwork |  
Published : Oct 26, 2025, 02:00 AM IST
25ಎಚ್‌ಪಿಟಿ3- ಹೊಸಪೇಟೆಯಲ್ಲಿ ಶನಿವಾರ ಬಳ್ಳಾರಿ ಸಂಸದ ಈ. ತುಕಾರಾಂ ಅವರಿಗೆ ವಿಜಯನಗರ ರೈಲ್ವೆ ಬಳಕೆದಾರರ ಸಂಘದ ವತಿಯಿಂದ ನಗರದಲ್ಲಿ ಶನಿವಾರ ಮನವಿ ಪತ್ರ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಮೇಲ್ಸೇತುವೆ ನಿರ್ಮಾಣಕ್ಕಾಗಿ ರಸ್ತೆ ಅಗಲೀಕರಣದಿಂದ ತಮ್ಮ ಮನೆ ಕಳೆದುಕೊಳ್ಳುತ್ತಿರುವ ನಿವಾಸಿಗಳಿಗೆ ರೈಲ್ವೆ ಇಲಾಖೆಯಿಂದ ಮಂಜೂರು ಆಗಿರುವ ಪರಿಹಾರ ಮೊತ್ತವನ್ನು ಬೇಗನೆ ವಿತರಣೆ ಮಾಡಿ ಕಾಮಗಾರಿ ಪೂರ್ಣಗೊಳಿಸಬೇಕು.

ಹೊಸಪೇಟೆ: ಈ ಭಾಗದ ರೈಲ್ವೆ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಬಳ್ಳಾರಿ ಸಂಸದ ಈ. ತುಕಾರಾಂ ಅವರಿಗೆ ವಿಜಯನಗರ ರೈಲ್ವೆ ಬಳಕೆದಾರರ ಸಂಘದಿಂದ ನಗರದಲ್ಲಿ ಶನಿವಾರ ಮನವಿ ಸಲ್ಲಿಸಲಾಯಿತು.ನೈರುತ್ಯ ರೈಲ್ವೆ ವಲಯ ಸಲಹಾ ಸಮಿತಿಯ ಸದಸ್ಯ ಬಾಬುಲಾಲ್ ಜೈನ್ ಅವರ ನೇತೃತ್ವದಲ್ಲಿ ಮನವಿಪತ್ರ ಸಲ್ಲಿಸಿದ ರೈಲ್ವೆ ಬಳಕೆದಾರರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು, ಕಳೆದ ಆರು ತಿಂಗಳಿನಿಂದ ಮಂದಗತಿಯಲ್ಲಿ ಸಾಗುತ್ತಿರುವ ಎಲ್.ಸಿ.ಗೇಟ್ ಸಂಖ್ಯೆ: 85, ಅನಂತಶಯನಗುಡಿ ರೈಲ್ವೆ ಮೇಲ್ಸೇತುವೆ ಕಾಮಗಾರಿಯ ನಿರ್ಮಾಣ ಕಾರ್ಯ ವಿಳಂಬದಿಂದ ಪ್ರವಾಸಿಗರು ಮತ್ತು ಸಾರ್ವಜನಿಕರಿಗೆ ವಿಪರೀತ ಅನಾನುಕೂಲ ಆಗುತ್ತಿದೆ. ಮೇಲ್ಸೇತುವೆ ನಿರ್ಮಾಣಕ್ಕಾಗಿ ರಸ್ತೆ ಅಗಲೀಕರಣದಿಂದ ತಮ್ಮ ಮನೆ ಕಳೆದುಕೊಳ್ಳುತ್ತಿರುವ ನಿವಾಸಿಗಳಿಗೆ ರೈಲ್ವೆ ಇಲಾಖೆಯಿಂದ ಮಂಜೂರು ಆಗಿರುವ ಪರಿಹಾರ ಮೊತ್ತವನ್ನು ಬೇಗನೆ ವಿತರಣೆ ಮಾಡಿ ಕಾಮಗಾರಿ ಪೂರ್ಣಗೊಳಿಸಬೇಕು. ಹೊಸಪೇಟೆ ಅಂತರಾಷ್ಟ್ರೀಯ ಪ್ರವಾಸಿ ತಾಣವಾಗಿದ್ದು, ದೇಶ, ವಿದೇಶದಿಂದ ಅಸಂಖ್ಯಾತ ಪ್ರವಾಸಿಗರು ರೈಲ್ವೆ ಮೂಲಕ ಆಗಮಿಸುತ್ತಿದ್ದಾರೆ. ಆದ್ದರಿಂದ ಹೊಸಪೇಟೆ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ ಹೆಚ್ಚುವರಿಯಾಗಿ ನೂತನ ಪ್ಲಾಟ್ ಫಾರಂಗಳನ್ನು ನಿರ್ಮಿಸಿ ರೈಲ್ವೆ ಟರ್ಮಿನಲ್ ಸೌಲಭ್ಯ ಒದಗಿಸಬೇಕು.

ಹೊಸಪೇಟೆ ಮಾರ್ಗವಾಗಿ ವಾರದಲ್ಲಿ ಎರಡು ದಿನ ಸಂಚರಿಸುತ್ತಿರುವ ಹುಬ್ಬಳ್ಳಿ-ಹೊಸಪೇಟೆ-ಚೆನೈ ರೈಲನ್ನು ಪ್ರತಿನಿತ್ಯ ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕು. ಉತ್ತರ ಕರ್ನಾಟಕದಿಂದ ಮಂತ್ರಾಲಯ, ರಾಯಚೂರು ಕಡೆಗೆ ತೆರಳುವ ಭಕ್ತಾದಿಗಳು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ರದ್ದುಪಡಿಸಿರುವ ಬೆಳಗಾವಿ-ಹೈದರಾಬಾದ್-ಮಣಗೂರು ರೈಲನ್ನು ಪುನರ್ ಆರಂಭಿಸಬೇಕು ಎಂದು ಒತ್ತಾಯಿಸಿದರು.

ಕರಾವಳಿ ಹಾಗೂ ಕಲ್ಯಾಣ ಕರ್ನಾಟಕದ ನಡುವೆ ನೇರ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಕೊಟ್ಟೂರು-ದಾವಣಗೆರೆ ಮಾರ್ಗವಾಗಿ ಹೊಸಪೇಟೆಯಿಂದ ಮಂಗಳೂರಿಗೆ ನೇರ ರೈಲು ಸಂಪರ್ಕ ಕಲ್ಪಿಸುವ ಅಗತ್ಯ ಇದೆ. ಇದರಿಂದ ವಿಶ್ವ ಪಾರಂಪರಿಕ ತಾಣವಾದ ಹಂಪಿ-ಬೇಲೂರು- ಹಳೆಬೀಡು-ಶ್ರವಣ ಬೆಳಗೋಳ-ಧರ್ಮಸ್ಥಳ-ಹಾಗೂ ಕುಕ್ಕೆಸುಬ್ರಮಣ್ಯ ನಡುವೆ ಸಂಪರ್ಕ ಉಂಟಾಗಿ ಪ್ರವಾಸೋದ್ಯಮದ ಬೆಳವಣಿಗೆ ಆಗುತ್ತದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಉನ್ನತ ವ್ಯಾಸಂಗಕ್ಕೆ ತೆರಳುವ ಕಲ್ಯಾಣ ಕರ್ನಾಟಕ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಹೊಸಪೇಟೆ-ಮುಂಬಯಿ ಹಳೇ ಕೋಚ್‌ಗಳನ್ನು ಬದಲಾಯಿಸಿ, ಪೂರ್ಣ ಪ್ರಮಾಣದ ಎಲ್.ಎಚ್.ಬಿ.ಕೋಚ್‌ಗಳಾಗಿ ಪರಿವರ್ತಿಸಬೇಕು ಎಂದು ಆಗ್ರಹಿಸಿದರು.

ಈ ವೇಳೆ ಸಂಡೂರಿ ಶಾಸಕಿ ಅನ್ನಪೂರ್ಣ, ವಿಜಯನಗರ ರೈಲ್ವೆ ಬಳಕೆದಾರರ ಸಂಘದ ವೈ.ಯಮುನೇಶ್, ಮಹೇಶ್‌ ಕುಡುತಿನಿ, ನಗರಸಭೆ ಸದಸ್ಯ ಮಂಜುನಾಥ, ಮುಖಂಡರಾದ ದಿವಾಕರ್, ಆಶಾಲತಾ ಸೋಮಪ್ಪ, ಮಗನ್‌ಲಾಲ್‌, ಕೇಸರಿಲಾಲ್‌, ಮಹೇಂದ್ರಕುಮಾರ್, ಕಾಂತಿಲಾಲ್, ನವರತನ್‌ಮಲ್, ಮಹೇಂದರ್‌ಕಾನುಂಗಾ, ಮಹಾಂಗಿಲಾಲ್, ಅಶೋಕ್‌ ಜೈನ್ ಮತ್ತಿತರರಿದ್ದರು.

PREV

Recommended Stories

ನವೆಂಬರ್‌ ಕ್ರಾಂತಿ ಬಗ್ಗೆ ಚರ್ಚಿಸಿ ದಣಿವು ಮಾಡ್ಕೊಬೇಡಿ - ಶಿವಕುಮಾರ್‌ ಸಲಹೆ
ಹಣೆಯಲ್ಲಿ ಬರೆದಿದ್ದರೆ ಡಿಕೆಶಿ ಸಿಎಂ ಆಗ್ತಾರೆ ಇಲ್ದಿದ್ರೆ ಇಲ್ಲ : ಡಿಕೆಸು