- ಸಮುದಾಯದ ಬೇಡಿಕೆಗಳ ಈಡೇರಿಸಲು ಆಗ್ರಹಿಸುತ್ತೇವೆ: ಸ್ವಾಮೀಜಿ
ಕನ್ನಡಪ್ರಭ ವಾರ್ತೆ ಹರಿಹರ
ನಿಷ್ಠುರ ಸ್ವಭಾವದ ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರನ್ನು ಸಂಪುಟಕ್ಕೆ ಮರುಸೇರ್ಪಡೆ ಮಾಡಿಕೊಳ್ಳುವುದು ಸೇರಿದಂತೆ ಸಮುದಾಯದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದೆಂದು ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಶ್ರೀ ನುಡಿದರು.ತಾಲೂಕಿನ ರಾಜನಹಳ್ಳಿಯ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ಸೋಮವಾರ ನಡೆದ ವಾಲ್ಮೀಕಿ ಸಮಾಜದ ರಾಜ್ಯ ಮಟ್ಟದ ಜ್ವಲಂತ ಸಮಸ್ಯೆ ಕುರಿತ ಸಭೆ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಪಕ್ಷದ ಮುಖಂಡರಿಗೆ ಸಂಬಂಧಿಸಿ ಒಂದು ಹೇಳಿಕೆ ನೀಡಿದ್ದಾರೆಂಬ ಸಬೂಬಿನಿಂದ ಸಚಿವ ಸ್ಥಾನದಿಂದ ಬಿಟ್ಟಿರುವುದು ಸರಿಯಲ್ಲ ಎಂದರು.
ನಾಳೆ ಬೆಂಗಳೂರಿನಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ರಾಜ್ಯಮಟ್ಟದ ಅಧಿಕಾರಿಗಳ ಸಭೆ ಕರೆದಿದ್ದು, ಸಮುದಾಯದವರಿಗೆ ಬರುವ ಯೋಜನೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಸಮಾಜಕ್ಕೆ ತಿಳಿಸುವ ಕಾರ್ಯ ನಡೆಯಲಿದೆ ಎಂದ ಅವರು, ಮಠದ ನಿರ್ಣಯ, ಕಾರ್ಯ, ಕಲಾಪಗಳ ಬಗ್ಗೆ ಸಮುದಾಯದ ಜನರಿಗೆ ತಿಳಿಸಲು ರಾಜ್ಯದ ಪ್ರತಿ ತಾಲೂಕಿಗೆ ಒಬ್ಬರಂತೆ ಮಠದ ವಿಶೇಷ ಪ್ರತಿನಿಧಿಯನ್ನು ನೇಮಿಸಲಾಗುವುದು ಎಂದರು.
ಸಭೆಯಲ್ಲಿ ಧರ್ಮದರ್ಶಿಗಳಾದ ಕೆ.ಬಿ.ಮಂಜುನಾಥ್, ಎಂ.ಎಸ್. ಬಸವರಾಜಪ್ಪ, ಮಲ್ಲಪ್ಪ ಕೌಲಗಿ, ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷರಾದ ಮೋಹನ್ ಗುಡಿಸಲಮನಿ, ರಾಜಶೇಖರ ತಳವಾರ, ದಶರಥ ಜಮಾದರ, ಗೋವಿಂದಪ್ಪ, ಪುರುಷೋತ್ತಮ ರಾಜಶೇಖರ ತಳವಾರ, ರಾಜ್ಯದ ವಿವಿಧ ತಾಲೂಕಿನ ಸಮಾಜದ ಅಧ್ಯಕ್ಷರು, ಮಠದ ಪ್ರತಿನಿಧಿಗಳು, ಭಕ್ತರು ಭಾಗವಹಿಸಿದ್ದರು.
-೨೪ಎಚ್‌ಆರ್‌ಆರ್‌೦೪: