ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ಇಲ್ಲಿನ ನಗರಸಭೆ ವ್ಯಾಪ್ತಿಯ ಸಿದ್ದೇನಾಯಕನಹಳ್ಳಿಯಲ್ಲಿ ಶಂಕುಸ್ಥಾಪನೆಗೊಂಡ ಬೆಂಗಳೂರು ಗ್ರಾಮಾಂತರ ಜಿಲ್ಲಾಸ್ಪತ್ರೆ ಕಾಮಗಾರಿಯನ್ನು ಶೀಘ್ರ ಆರಂಭಿಸಬೇಕು ಎಂದು ಜಿಲ್ಲಾಸ್ಪತ್ರೆ ಉಳಿವಿಗಾಗಿ ಹೋರಾಟ ಸಮಿತಿ ಆಗ್ರಹಿಸಿದೆ.ಇಲ್ಲಿನ ಕನ್ನಡ ಜಾಗೃತ ಭವನದಲ್ಲಿ ಶುಕ್ರವಾರ ಸಂಜೆ ನಡೆದ ಸಭೆಯಲ್ಲಿ ಹಲವು ಸಂಘಟನೆಗಳ ಮುಖಂಡರು ಪಾಲ್ಗೊಂಡು ಮಾತನಾಡಿ, 11 ಮಾರ್ಚ್ 2024 ರಲ್ಲಿ ತಾಲೂಕಿನ ಕಸಬಾ ಹೋಬಳಿಯ ಸಿದ್ದನಾಯಕನಹಳ್ಳಿ ಗ್ರಾಮದ ಸರ್ವೆ ನಂಬರ್ 20 ರಲ್ಲಿ ಸುಮಾರು 9 ಎಕರೆ 38 ಗುಂಟೆ ಜಮೀನಿನಲ್ಲಿ 192 ಕೋಟಿ ವೆಚ್ಚದ ಜಿಲ್ಲಾಸ್ಪತ್ರೆಗೆ ಸಂಬಂಧಿಸಿದ ಕಾಮಗಾರಿಗಳಿಗಾಗಿ ಶಂಕುಸ್ಥಾಪನೆ ಮಾಡಲಾಗಿದೆ. ಆದರೆ ಆರ್ಥಿಕ ಅನುದಾನದ ಕೊರತೆ, ರಾಜಕೀಯ ಪ್ರಭಾವದ ಮೇಲಾಟಗಳಿಂದ ಕಾಮಗಾರಿ ಇನ್ನೂ ಆರಂಭವಾಗದೆ ನೆನೆಗುದಿಗೆ ಬಿದ್ದಿದೆ ಎಂದು ಆರೋಪಿಸಿದರು.ಜಿಲ್ಲಾ ಹಂತದ ಅಧಿಕಾರಿ ವರ್ಗ ಹಾಗೂ ಸ್ಥಳೀಯ ರಾಜಕಾರಣಿಗಳು ಸದರಿ 250 ಹಾಸಿಗೆಯ ಜಿಲ್ಲಾಸ್ಪತ್ರೆಯನ್ನು ನಿರ್ಮಿಸಲು ಒತ್ತಾಸೆಯಾಗಿ ನಿಲ್ಲುವ ಬದಲು, ಈಗಿರುವ ತಾಲೂಕು ತಾಯಿ-ಮಗು ಆಸ್ಪತ್ರೆಯ ಜಾಗದಲ್ಲಿಯೇ 100 ಹಾಸಿಗೆ ಆಸ್ಪತ್ರೆಯನ್ನು 50 ಕೋಟಿ ಅನುದಾನದಲ್ಲಿ ನಿರ್ಮಿಸಲು ಮುಂದಾಗುತ್ತಿರುವ ವಿಷಯ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಈ ರೀತಿ ಆದಲ್ಲಿ ಜಿಲ್ಲಾ ಆರೋಗ್ಯ ಕೇಂದ್ರಕ್ಕೆ ₹192.00 ಕೋಟಿ ಮೊತ್ತದ ಅನುದಾನದಲ್ಲಿ ಬ್ಲಡ್ ಬ್ಯಾಂಕ್ ಸ್ಥಾಪನೆ, ಟ್ರಾಮ ಕೇರ್ ಸೆಂಟರ್ ಸ್ಥಾಪನೆ, ನರ್ಸಿಂಗ್, ಫಾರ್ಮಸಿ ಅಂಡ್ ಅಲೈಡ್ ಸೈನ್ಸ್ ಕಾಲೇಜು ಮಂಜೂರು ಮಾಡುವುದು ಜಿಲ್ಲೆಯಿಂದ ಕೈತಪ್ಪಿ ಹೋಗಬಹುದು ಅಥವಾ ಇನ್ನೊಂದಷ್ಟು ವರ್ಷಗಳಿಗೆ ಕಾಮಗಾರಿ ಮುಂದೂಡಬಹುದು. ಇದರಿಂದ ಸಾಮಾನ್ಯ ಜನರಿಗೆ ಆಗಬಹುದಾದಂತಹ ತೊಂದರೆ ಅತ್ಯಂತ ಹೆಚ್ಚು. ಹಾಗಾಗಿ ಈ ಒಳಸಂಚನ್ನು ವಿಫಲಗೊಳಿಸಲು ಹಾಗೂ ಜಿಲ್ಲಾ ಆಸ್ಪತ್ರೆಯ ತ್ವರಿತ ಕಾಮಗಾರಿಗೆ ಒತ್ತಾಯಿಸಲು, ಪ್ರಶ್ನಿಸಲು ಸಂಘಟಿತ ಹೋರಾಟ ಅಗತ್ಯ ಎಂದರು.
ಸೋಮವಾರ ಜಿಲ್ಲಾಧಿಕಾರಿಗೆ ಮನವಿ:ಸಂಘ-ಸಂಸ್ಥೆಗಳ ನೇತೃತ್ವದಲ್ಲಿ ಸೋಮವಾರ ಏ. 11ರಂದು ಬೆಳಗ್ಗೆ 10 ಗಂಟೆಗೆ ಇಲ್ಲಿನ ಕನ್ನಡ ಜಾಗೃತ ಭವನದಿಂದ ಸಂಘಟನೆಗಳ ಕಾರ್ಯಕರ್ತರು, ಮುಖಂಡರು ಜಿಲ್ಲಾಡಳಿತ ಭವನಕ್ಕೆ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ತ.ನ.ಪ್ರಭುದೇವ್, ಸಂಜೀವನಾಯಕ್, ಚಿದಾನಂದಮೂರ್ತಿ, ರಾಜಘಟ್ಟ ರವಿ, ಚಂದ್ರತೇಜಸ್ವಿ, ಸು.ನರಸಿಂಹಮೂರ್ತಿ, ವಿ.ಪರಮೇಶ್, ಡಾ.ಎ.ಓ.ಆವಲಮೂರ್ತಿ, ಪ್ರೊ.ಕೆ.ಆರ್.ರವಿಕಿರಣ್, ರುದ್ರಾರಾಧ್ಯ, ಪಿ.ಎ.ವೆಂಕಟೇಶ್, ಮಾಳವ ನಾರಾಯಣ್, ಕನ್ನಡ ಪಕ್ಷ ವೆಂಕಟೇಶ್, ತೂಬಗೆರೆ ಷರೀಫ್, ಟಿ.ಜಿ.ಮಂಜುನಾಥ್, ಹಮಾಮ್ ವೆಂಕಟೇಶ್, ಅಮ್ಮು, ಜೆ.ಆರ್.ರಮೇಶ್, ಡಿ.ಸಿ.ಚೌಡರಾಜು, ಮುನಿಪಾಪಯ್ಯ, ಜನಪರ ಮಂಜು, ಪ್ರಕಾಶ್‌ರಾವ್, ಮಂಜುನಾಥ್,ನಾಗರತ್ನಮ್ಮ, ನಟರಾಜ್, ನಾಗರಾಜ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.ಫೋಟೋ-8ಕೆಡಿಬಿಪಿ5- ದೊಡ್ಡಬಳ್ಳಾಪುರದ ಜಿಲ್ಲಾಸ್ಪತ್ರೆ ಉಳಿವಿಗಾಗಿ ಹೋರಾಟ ಸಮಿತಿಯಿಂದ ಶುಕ್ರವಾರ ಕನ್ನಡ ಜಾಗೃತ ಭವನದಲ್ಲಿ ವಿವಿಧ ಸಂಘಟನೆಗಳ ಸಭೆ ನಡೆಯಿತು.