ಕನ್ನಡಪ್ರಭ ವಾರ್ತೆ ಚಾಮರಾಜನಗರ
ತಾಲೂಕಿನ ಗೋವಿಂದವಾಡಿ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಗಿರೀಶ್ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕೆಂದು ಗ್ರಾಪಂ ಅಧ್ಯಕ್ಷೆ, ಉಪಾಧ್ಯಕ್ಷೆ ಸೇರಿದಂತೆ ಪಂಚಾಯಿತಿಯ ಏಳು ಮಂದಿ ಸದಸ್ಯರು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾರೋತ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಗ್ರಾಮ ಪಂಚಾಯಿತಿ ಪಿಡಿಒ ಅಗಿರುವ ಗಿರೀಶ್ ಮಹಿಳಾ ಸದಸ್ಯರಿಗೆ ಗೌರವ ನೀಡುತ್ತಿಲ್ಲ. ಗ್ರಾಪಂ ಅಧ್ಯಕ್ಷರು ಎಂಬ ಗೌರವವನ್ನು ನೀಡದೇ ಏಕವಚನದಲ್ಲಿ ಮಾತನಾಡುತ್ತಾರೆ. ಗ್ರಾಪಂನಲ್ಲಿ 8 ಮಂದಿ ಸದಸ್ಯರಿದ್ದು, ನಮ್ಮನ್ನು ಗ್ರಾಮದ ಅಭಿವೃದ್ಧಿ ವಿಚಾರದಲ್ಲಿ ಗಮನಕ್ಕೆ ತೆಗೆದುಕೊಳ್ಳುತ್ತಿಲ್ಲ. ಏಕ ಪಕ್ಷೀಯ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದಾರೆ. ಪಂಚಾಯಿತಿಯಲ್ಲಿ ಯಾವುದೇ ಕೆಲಸ ಕಾರ್ಯಗಳು ಆಗಬೇಕಾದರೆ ಪಿಡಿಒ ಹಾಗು ಸಿಬ್ಬಂದಿಗೆ ಲಂಚ ಕೊಡಬೇಕಾದ ಪರಿಸ್ಥಿತಿ ನಿರ್ಮಾಣ ಮಾಡಿಕೊಂಡಿದ್ದಾರೆ ಎಂದು ಸದಸ್ಯರು ದೂರಿದರು. ಬೆಳಗ್ಗೆಯಿಂದ ಪಿಡಿಒ ವರ್ಗಾವಣೆ ಮಾಡುವಂತೆ ಗ್ರಾಪಂ ಅಧ್ಯಕ್ಷೆ ನಾಗಲಾಂಬಿಕೆ, ಉಪಾಧ್ಯಕ್ಷೆ ನೀಲಮ್ಮ ಹಾಗೂ ಸದಸ್ಯರು ತಾಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿ, ಜಿಪಂ ಉಪ ಕಾರ್ಯದರ್ಶಿಗಳ ಕಚೇರಿಗೆ ಸುತ್ತಾಡುತ್ತಿದ್ದಾರೆ. ಅಧಿಕಾರಿಗಳು ಮೀಟಿಂಗ್‌ನಲ್ಲಿದ್ದಾರೆ ಎಂಬ ವಿಷಯ ತಿಳಿದು ಸಾಯಂಕಾಲದವರೆಗೆ ಕಾದು ನಂತರ ಮೂವರು ಮಹಿಳಾ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಗ್ರಾಪಂ ಪಿಡಿಒ ಗಿರೀಶ್ ನಮ್ಮ ಪಂಚಾಯಿತಿಗೆ ಬಂದ ದಿನದಿಂದ ಯಾವುದೇ ಅಭಿವೃದ್ಧಿ ಕಾರ್ಯಕ್ರಮ ಮಾಡಿಲ್ಲ. ಇ-ಸ್ವತ್ತು ನೀಡಲು ನೇರವಾಗಿ ೧೦ ಸಾವಿರ ಲಂಚ ಕೇಳುತ್ತಿದ್ದಾರೆ. ಅಲ್ಲದೇ ಕಲ್ಪುರ, ದೇಶಿಗೌಡನಪುರ, ಹಳೇಪುರ ಗ್ರಾಮದ ಸ್ವಚ್ಛತೆ, ಕುಡಿಯುವ ನೀರು, ವಿದ್ಯುತ್ ದೀಪ ಆಳವಡಿಕೆ, ಚರಂಡಿಗಳಲ್ಲಿ ಹೂಳು ತೆಗೆಸುವ ಯಾವುದೇ ಕಾಮಗಾರಿ ಕೈಗೊಳ್ಳುತ್ತಿಲ್ಲ. ಈ ಹಿಂದೆ ೮ ತಿಂಗಳಲ್ಲಿ ಗ್ರಾಮಗಳಲ್ಲಿ ಹೂಳು ತೆಗೆಸಿರುವ ಹಣವನ್ನು ಡ್ರಾ ಮಾಡಿ ಕೊಟ್ಟಿಲ್ಲ. ಎಲ್ಲದನ್ನು ಪಂಚಾಯಿತಿ ಸದಸ್ಯರ ಮೇಲೆ ಹೇಳಿ, ಗ್ರಾಮದ ಜನರನ್ನು ನಮ್ಮಗಳ ವಿರುದ್ಧ ಎತ್ತಿಕಟ್ಟುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ. ಹೀಗಾಗಿ ಈತನನ್ನು ತಕ್ಷಣ ವರ್ಗಾವಣೆ ಮಾಡಿ ಬೇರೊಬ್ಬ ಅಧಿಕಾರಿಯನ್ನು ಕಾಯಂ ಆಗಿ ನೇಮಕ ಮಾಡಿಕೊಡಬೇಕೆಂದು ಜಿಪಂ ಸಿಇಒಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದ್ದಾರೆ.ಮನವಿ ಸ್ವೀಕರಿಸಿ ಪ್ರತಿಕ್ರಿಯೆ ನೀಡಿದ ಸಿಇಒ, ಪಿಡಿಒ ಗಿರೀಶ್ ನಿಮ್ಮ ಪಂಚಾಯಿತಿಗೆ ಕಾಯಂ ಅಧಿಕಾರಿಯಾಗಿದ್ದಾರೆ. ಅವರನ್ನು ವರ್ಗಾವಣೆ ಮಾಡುವ ಅಧಿಕಾರ ನಮಗೆ ಇಲ್ಲ. ಹೀಗಾಗಿ ನಾಳೆಯೇ ನಾನು ಸರ್ಕಾರಕ್ಕೆ ಇವರ ವಿರುದ್ಧ ಪತ್ರ ಬರೆಯುತ್ತೇನೆ ಎಂದು ತಿಳಿಸಿದರು. ಗ್ರಾಪಂ ಅಧ್ಯಕ್ಷೆ ನಾಗಲಾಂಬಿಕಾ, ಉಪಾಧ್ಯಕ್ಷ ನೀಲಮ್ಮ, ಸದಸ್ಯರಾದ ಎಂ.ಮಂಜುನಾಥ್, ಬಸವಣ್ಣ, ಎಸ್. ಉಮೇಶ್, ಗೌರಮ್ಮ, ನಾಗಮಣಿ ಇತರರು ಇದ್ದರು.