ಶಿವಮೊಗ್ಗ ವಿಮಾನ ನಿಲ್ದಾಣವನ್ನು ಕೇಂದ್ರ ಸರ್ಕಾರಕ್ಕೆ ಹಸ್ತಾಂತರ ಮಾಡುವಂತೆ ಮನವಿ

KannadaprabhaNewsNetwork |  
Published : May 01, 2026, 01:30 AM IST
ಪೊಟೋ: 30ಎಸ್‌ಎಂಜಿಕೆಪಿ04ಶಿವಮೊಗ್ಗದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಬಿ.ಎಸ್. ಯಡಿಯೂರಪ್ಪನವರ ಅಭಿನಂದನಾ  ಕಾರ್ಯಕ್ರಮದ ಸ್ಟಿಕ್ಕರ್ ಅನ್ನು ಸಂಸದ ಬಿ.ವೈ.ರಾಘವೇಂದ್ರ ಅವರು ದ್ವಿಚಕ್ರ ವಾಹನ ಹಾಗೂ ಕಾರುಗಳಿಗೆ ಅಂಟಿಸುವುದರ ಮೂಲಕ ಬಿಡುಗಡೆಗೊಳಿಸಿದರು.  | Kannada Prabha

ಸಾರಾಂಶ

ಶಿವಮೊಗ್ಗ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಕೇಂದ್ರ ಸರ್ಕಾರಕ್ಕೆ ಹಸ್ತಾಂತರ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದೇನೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.

ಸಂಸದ ಬಿ.ವೈ. ರಾಘವೇಂದ್ರ । ಎರಡು ಪ್ರಮುಖ ವಿಚಾರಗಳನ್ನು ರಾಜ್ಯ ಸರ್ಕಾರ ಪ್ರಸ್ತಾಪ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶಿವಮೊಗ್ಗ ವಿಮಾನ ನಿಲ್ದಾಣವನ್ನು ಕೇಂದ್ರ ಸರ್ಕಾರಕ್ಕೆ ಹಸ್ತಾಂತರ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದೇನೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಮಾನ ನಿಲ್ದಾಣವನ್ನು ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾಗೆ ಹಸ್ತಾಂತರಿಸುವ ಪ್ರಕ್ರಿಯೆ ಸಂಬಂಧ ಹಿರಿಯ ಐಎಎಸ್ ಅಧಿಕಾರಿ ವಿಶಾಲ್ ಅವರನ್ನು ರಾಜ್ಯ ಸರ್ಕಾರ ಚರ್ಚೆಗೆ ದೆಹಲಿಗೆ ಕಳುಹಿಸಿತ್ತು. ಚರ್ಚೆ ವೇಳೆ ಎರಡು ಪ್ರಮುಖ ವಿಚಾರಗಳನ್ನು ರಾಜ್ಯ ಸರ್ಕಾರ ಪ್ರಸ್ತಾಪ ಮಾಡಿದೆ. ವಿಮಾನ ನಿಲ್ದಾಣಕ್ಕೆ ಈವರೆಗೂ ಆಗಿರುವ ಖರ್ಚು ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸುತ್ತದೆಯೆ ಮತ್ತು ವಿಮಾನ ನಿಲ್ದಾಣವನ್ನು ಖಾಸಗಿ ನಿರ್ವಹಣೆಗೆ ವಹಿಸಬಹುದೆ ಎಂದು ಚರ್ಚಿಸಿದ್ದಾರೆ ಎಂದು ಮಾಹಿತಿ ನೀಡಿದರು.ರಾಜ್ಯ ಸರ್ಕಾರದಿಂದ ನೀಡಲಾಗುತ್ತಿದ್ದ ವಯಬಿಲಿಟಿ ಗ್ಯಾಪ್ ಫಂಡಿಂಗ್(ವಿಜಿಎಫ್) ಯೋಜನೆ ಜು. 2025ಕ್ಕೆ ಕೊನೆಗೊಂಡಿದೆ. ಇದನ್ನು ಮುಂದುವರಿಸುವ ಕುರಿತು ರಾಜ್ಯ ಸರ್ಕಾರ ಪತ್ರ ನೀಡಲು ವಿಳಂಬ ಮಾಡುತ್ತಿದೆ. ಈ ಕುರಿತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ರಾಜ್ಯದ ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ಅವರೊಂದಿಗೆ ಮಾತನಾಡಿದ್ದಾರೆ. ಆದರೆ ಈತನಕ ಪತ್ರ ನೀಡಿಲ್ಲ. ಬೀದರ್ ವಿಮಾನ ನಿಲ್ದಾಣಕ್ಕೆ ವಿಜಿಎಫ್ ಪತ್ರ ನೀಡಲಾಗಿದೆ ಎಂದರು.ಇಂಡಿಗೋ ವಿಮಾನ ಸೇವೆ ತಾತ್ಕಾಲಿಕ ಸ್ಥಗಿತ ಬಗ್ಗೆ ರಾಜ್ಯದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರೊಂದಿಗೆ ಮಾತುಕತೆ ನಡೆಸಿದೆ. ಅವರು ಕೂಡ ವಿಮಾನ ಸೇವೆಗಳ ಪುನಾರಂಭಕ್ಕೆ ಪರ್ಯಾಯ ಮಾರ್ಗ ಹುಡುಕುವ ಭರವಸೆ ನೀಡಿದ್ದಾರೆ ಎಂದರು ತಿಳಿಸಿದರು.ನಮ್ಮ ವಿಮಾನ ನಿಲ್ದಾಣ ಮಧ್ಯ ಕರ್ನಾಟಕದ ಅತ್ಯಂತ ಪ್ರಮುಖವಾದದ್ದು. ಈಚೆಗೆ ಗಾಂಧಿ ಬಜಾರ್‌ನ ಯುವತಿ ಯೊಬ್ಬರನ್ನು ತುರ್ತು ಚಿಕಿತ್ಸೆಗೆ ಮುಂಬೈಗೆ ಕರೆದೊಯ್ಯಬೇಕಿತ್ತು. ಶಿವಮೊಗ್ಗ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಏರ್‌ಲಿಫ್ಟ್ ಮಾಡಲಾಯಿತು. ಇದೇ ರೀತಿ ಹಲವು ಕಾರಣಕ್ಕೆ ಈ ವಿಮಾನ ನಿಲ್ದಾಣ ಪ್ರಾಮುಖ್ಯ ಪಡೆದುಕೊಂಡಿದೆ ಎಂದರು.ನೈಟ್ ಲ್ಯಾಂಡಿಂಗ್ ಆರಂಭವಾದರೆ ವಿಮಾನ ನಿಲ್ದಾಣಕ್ಕೆ ಮತ್ತಷ್ಟು ಅನುಕೂಲ ಆಗಲಿದೆ. ಅದರೆ ಕಾಮಗಾರಿ ವಿಳಂಬ ವಾಯಿತು. ನೈಟ್ ಲ್ಯಾಂಡಿಂಗ್ ಟೆಂಡರ್‌ಗೆ ಮೂರು ತಿಂಗಳಾಯಿತು. ಕಾಮಗಾರಿ ಆರಂಭಕ್ಕೆ 6 ತಿಂಗಳಾಯಿತು. ಇಷ್ಟು ಹೊತ್ತಿಗೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ, ಈತನಕ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ರಾಜಧಾನಿಗೆ ವಿಮಾನಯಾನ ಸೇವೆ ನೀಡುವುದು ಉಡಾನ್ ಯೋಜನೆ ವ್ಯಾಪ್ತಿಗೆ ಬರುವುದಿಲ್ಲ. ಆದ್ದರಿಂದ ಯಡಿಯೂರಪ್ಪ ಅವರ ಸರ್ಕಾರ ಶಿವಮೊಗ್ಗ - ಬೆಂಗಳೂರು ವಿಮಾನಕ್ಕೆ ರಾಜ್ಯ ಸರ್ಕಾರದ ವಿಜಿಎಫ್ ಯೋಜನೆ ಮೂಲಕ ಪ್ರತಿ ಟಿಕೆಟ್‌ಗೆ ₹500 ಸಹಾಯಧನ ನೀಡುತ್ತಿತ್ತು. ಈ ಯೋಜನೆ ಮುಕ್ತಾಯವಾಗಿ ಒಂದು ವರ್ಷವಾಗಿದೆ. ಯೋಜನೆ ಮುಂದುವರಿಸುವ ಕುರಿತು ಮನವಿ ಮಾಡಿದರು ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.--- ಲೀಡ್ ಬಾಕ್ಸ್‌--

ಬೆಳೆ ಹಾನಿ ಪ್ರದೇಶಕ್ಕೆ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕುಶಿವಮೊಗ್ಗ: ಹೊಳೆಹೊನ್ನೂರು ಮತ್ತು ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ ಕಳೆದ ವಾರ ಬಿರುಗಾಳಿ ಮತ್ತು ಮಳೆಯಿಂದ ಸುಮಾರು 10 ಸಾವಿರ ಹೆಕ್ಟೇರ್‌ನಷ್ಟು ಬೆಳೆ ಹಾನಿ ಪ್ರದೇಶಕ್ಕೆ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಹೋಬಳಿಯಲ್ಲಿ ಬಿರುಗಾಳಿ ಸಹಿತ ಮಳೆ ಯಾದ ಹಿನ್ನೆಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ. ಈ ಸಂಬಂಧ ಮಾಜಿ ಶಾಸಕ ಕೆ.ಬಿ.ಅಶೋಕ್ ನಾಯ್ಕ್, ವಿಧಾನ ಪರಿಷತ್ ಸದಸ್ಯ ಧನಂಜಯ ಸರ್ಜಿ, ಅಧ್ಯಕ್ಷ ಮಲ್ಲೇಶಪ್ಪ ನೇತೃತ್ವದ ತಂಡ ಭೇಟಿ ನೀಡಿತ್ತು. ನಾನು ಕೂಡ ಕೆಲವು ಗ್ರಾಮಗಳಿಗೆ ಭೇಟಿ ನೀಡಿದ್ದೆ. ಸುಮಾರು 35 ಹಳ್ಳಿಗಳಲ್ಲಿ ಹಾನಿಯಾಗಿದೆ. ಹೊಳಲೂರು, ಹಾರನಹಳ್ಳಿ ಭಾಗದಲ್ಲಿ ಸುಮಾರು 25 ಗ್ರಾಮಗಳಿಗೆ ಹಾನಿಯಾಗಿದೆ ಎಂದರು.ಬೆಳೆದು ನಿಂತ ಅಡಕೆ ಮರಗಳಲ್ಲಿ ಕೊಯ್ಲಿಗೆ ಬಂದಿದ್ದ ಫಸಲು ಇತ್ತು. ಅವೆಲ್ಲ ಗೊನೆ ಸಹಿತ ಮುರಿದು ಬಿದ್ದಿವೆ. ಮನೆಗಳಿಗೆ ಭಾರಿ ಪ್ರಮಾಣದ ಹಾನಿಯಾಗಿದೆ. ಗೃಹೋಪಯೋಗಿ ವಸ್ತುಗಳು ಕೂಡ ಕೊಚ್ಚಿ ಹೋಗಿವೆ. ಒಬ್ಬ ವ್ಯಕ್ತಿ ಪ್ರಾಣ ಕಳೆದು ಕೊಂಡಿರುವುದು ವರದಿಯಾಗಿದೆ. ಇದರಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ರೈತರಿಗೆ ದಿಕ್ಕು ತೋಚ ದಂತಾಗಿದೆ. ಸುಮಾರು 10,000 ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 5 ರಿಂದ 6 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ತೋಟ ನಾಶವಾಗಿವೆ ಎಂದರು.ಇದಕ್ಕೆ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್‌ನಿಂದ ಪ್ರತಿ ಹೆಕ್ಟೇರ್‌ಗೆ ₹33,000 ಪರಿಹಾರ ನೀಡಬೇಕು ಎಂಬ ನಿಯಮವಿದೆ. ಪರಿಹಾರದ ಮೊತ್ತದಲ್ಲಿ ಕೇಂದ್ರ ಸರ್ಕಾರ ಶೇ.75ರಷ್ಟು, ರಾಜ್ಯ ಸರ್ಕಾರ ಶೇ.25ರಷ್ಟು ಪಾಲು ನೀಡಬೇಕು ಎಂಬ ನಿಯಮವಿದೆ. ಆದರೆ, ಹಾನಿ ಗಮನಿಸಿದಾಗ ಈ ಮೊತ್ತದ ಪರಿಹಾರ ಸಾಕಾಗುವುದಿಲ್ಲ. ಮನೆ ಹಾನಿಗೆ ಎನ್‌ಡಿಆರ್‌ಎಫ್ ನಿಯಮದ ಪ್ರಕಾರ ಪ್ರತಿ ಮನೆಗೆ ₹1,50,000 ಪರಿಹಾರ ನೀಡಲು ಅವಕಾಶವಿತ್ತು. ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ₹5 ಲಕ್ಷ ಪರಿಹಾರ ನೀಡಿದ್ದರು. ರಾಜ್ಯ ಸರ್ಕಾರ ತನ್ನ ವಿಶೇಷ ಅಧಿಕಾರ ಬಳಸಿ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಈ ಭಾಗದ ಬೆಳೆ ಹಾನಿಗೆ ಪ್ರತಿ ಹೆಕ್ಟೇರ್‌ಗೆ ₹1 ಲಕ್ಷ ಪರಿಹಾರ ನೀಡಬೇಕು.ಇದೇ ಸಂದರ್ಭದಲ್ಲಿ ಬಿ.ಎಸ್. ಯಡಿಯೂರಪ್ಪ ಅಭಿಮಾನೋತ್ಸವದ ಸ್ಟಿಕ್ಕರ್ ಬಿಡುಗಡೆಗೊಳಿಸಲಾಯಿತು.ಗೋಷ್ಠಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ, ಮಾಜಿ ಶಾಸಕ ಕೆ.ಬಿ.ಅಶೋಕ್ ನಾಯ್ಕ್, ಪ್ರಮುಖರಾದ ಎಸ್.ದತ್ತಾತ್ರಿ, ಎಸ್.ಎಸ್.ಜ್ಯೋತಿಪ್ರಕಾಶ್, ಮಾಲತೇಶ್ ಸೇರಿದಂತೆ ಹಲವರು ಇದ್ದರು.--ಬಾಕ್ಸ್ಬಿಎಸ್‌ವೈ “ಅಭಿಮಾನೋತ್ಸವ " ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಜೀವನಕ್ಕೆ 50 ವರ್ಷ ತುಂಬಿದ ಸವಿ ನೆನಪಿಗೆ ಮೇ 9 ರಂದು ಚಿತ್ರದುರ್ಗದಲ್ಲಿ ಸಂಸದ ಗೋವಿಂದ ಕಾರಜೋಳ ಅಧ್ಯಕ್ಷತೆಯಲ್ಲಿ “ಅಭಿಮಾನೋತ್ಸವ " ಆಯೋಜಿಸಲಾಗಿದೆ. ಸಂಸದ ಬಿ.ವೈ.ರಾಘವೇಂದ್ರ ನೇತೃತ್ವದಲ್ಲಿ, ಜಿಲ್ಲೆಯ ಎಲ್ಲ ಬಿ.ಜೆ.ಪಿ.ಶಾಸಕರ ಮುಂದಾಳತ್ವದಲ್ಲಿ ಜಿಲ್ಲೆಯಿಂದ ಸುಮಾರು 50 ಸಾವಿರ ಕಾರ್ಯಕರ್ತರು ಸಮಾವೇಶಕ್ಕೆ ತೆರಳಲಿದ್ದಾರೆ.-ಎನ್.ಕೆ.ಜಗದೀಶ್, ಬಿಜೆಪಿ ಜಿಲ್ಲಾಧ್ಯಕ್ಷ.

-

: 30ಎಸ್‌ಎಂಜಿಕೆಪಿ04

ಶಿವಮೊಗ್ಗದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಬಿ.ಎಸ್. ಯಡಿಯೂರಪ್ಪನವರ ಅಭಿನಂದನಾ ಕಾರ್ಯಕ್ರಮದ ಸ್ಟಿಕ್ಕರ್ ಅನ್ನು ಸಂಸದ ಬಿ.ವೈ.ರಾಘವೇಂದ್ರ ದ್ವಿಚಕ್ರ ವಾಹನ ಹಾಗೂ ಕಾರುಗಳಿಗೆ ಅಂಟಿಸುವುದರ ಮೂಲಕ ಬಿಡುಗಡೆಗೊಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

66/11 ಕೆವಿ ವಿದ್ಯುತ್ ವಿತರಣಾ ಉಪಕೇಂದ್ರಕ್ಕೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಚಾಲನೆ
ರಂಗಪಟ್ಟಣದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ: ಮನೆಗಳು ಜಖಂ