ಬಜೆಟ್‌ನಲ್ಲಿ ಎಂಡಿಎಂಗೆ ಅನುದಾನ ಹೆಚ್ಚಳ, ಕನಿಷ್ಠ ವೇತನ ಘೋಷಿಸಲು ಆಗ್ರಹ

KannadaprabhaNewsNetwork | Published : Jan 24, 2024 2:04 AM

ಸಾರಾಂಶ

ಫೆಬ್ರವರಿ ಬಜೆಟ್‌ನಲ್ಲಿ ಎಂಡಿಎಂಗೆ ಅನುದಾನ ಹೆಚ್ಚಳ ಮತ್ತು ಕನಿಷ್ಠ ವೇತನವನ್ನು ಘೋಷಿಸುವಂತೆ ಒತ್ತಾಯಿಸಿ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಜಿಲ್ಲಾ ಸಮಿತಿ ವತಿಯಿಂದ ಸಂಸದರ ಆಪ್ತ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಯಿತು.

ಗದಗ: ಫೆಬ್ರವರಿ ಬಜೆಟ್‌ನಲ್ಲಿ ಎಂಡಿಎಂಗೆ ಅನುದಾನ ಹೆಚ್ಚಳ ಮತ್ತು ಕನಿಷ್ಠ ವೇತನವನ್ನು ಘೋಷಿಸುವಂತೆ ಒತ್ತಾಯಿಸಿ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಜಿಲ್ಲಾ ಸಮಿತಿ ವತಿಯಿಂದ ಸಂಸದರ ಆಪ್ತ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಯಶೋದಾ ಬೆಟಗೇರಿ ಮಾತನಾಡಿ, ಬಡವರ ಮತ್ತು ಜನ ಸಾಮಾನ್ಯರ ಮೇಲೆ ತೆರಿಗೆ ಹಾಕುವ ಸರ್ಕಾರ, ಶ್ರೀಮಂತರ ಮೇಲೆ ಹಿಂದು ಮಹಿಳೆಯರ ಬಗ್ಗೆ ಮಾತಾನಾಡುವ ಕೇಂದ್ರ ಸರ್ಕಾರ ಬಿಸಿಯೂಟ ನೌಕರರಿಗೆ ರು. ೬೦೦, ಆಶಾ ಕಾರ್ಯಕರ್ತೆಯರಿಗೆ ರು. ೨೦೦೦, ಅಂಗನವಾಡಿ ನೌಕರರಿಗೆ ೪೫೦೦ ರು. ಕೊಟ್ಟು ದುಡಿಸುವುದು ಸಾಮಾಜಿಕ ನ್ಯಾಯವೇ? ಹಲವು ವರ್ಷಗಳಿಂದ ಕೇಂದ್ರ ಸರ್ಕಾರ ಈ ನೌಕರರಿಗೆ ಒಂದೂ ರುಪಾಯಿಯನ್ನು ಹೆಚ್ಚಳ ಮಾಡದೆ ಚುನಾವಣೆಗಳು, ಮಾತ್ರವಲ್ಲದೆ ಈಗ ಕ್ಷೀರ ಭಾಗ್ಯ, ಮೊಟ್ಟೆ ಕೊಡುವುದು. ಗೋಧಿ ಉತ್ಪನ್ನಗಳಿಂದ ತಯಾರು ಮಾಡುವ ಆಹಾರ, ವಿಶೇಷ ಭೋಜನ ಎಂಬ ಸುತ್ತೋಲೆಯನ್ನು ತಂದು ತಿಂಗಳಲ್ಲಿ ಎರಡು ಬಾರಿ ಸಾಮೂಹಿಕ ಊಟ ಮಾತ್ರವಲ್ಲದೇ ಮಕ್ಕಳು ಶಾಲಾ ಪ್ರವಾಸಗಳನ್ನು ಮಾಡುವಾಗ ಅಡುಗೆಯವರು ಕೂಡಾ ಭಾಗವಹಿಸಿ ಅಲ್ಲಿಯೂ ಅಡುಗೆ ಮಾಡಬೇಕು, ಚುನಾವಣೆಗಳಲ್ಲಿ, ಕೊರೋನಾ ಸಂದರ್ಭಗಳಲ್ಲಿ, ಗ್ರಾಮ ಸಭೆಗಳು ನಡೆದಾಗ, ಗ್ರಾಮಗಳಲ್ಲಿ ಏನೇ ಕಾರ್ಯಕ್ರಮಗಳು ನಡೆದರೂ ಇವರು ಅಡುಗೆ ಮಾಡಬೇಕು. ಗೌರವಧನ ಎಂಬ ಪಟ್ಟ ಕಟ್ಟಿ ಎಲ್ಲ ಸವಲತ್ತುಗಳಿಂದ ವಂಚನೆ ಮಾಡುವುದು ಧರ್ಮವೇ?

೫ ಟ್ರಿಲಿಯನ್ ಆರ್ಥಿಕತೆಯನ್ನು ಸಾಧಿಸಲು ಹೊರಟಿರುವ ಭಾರತ ಹಸಿವಿನ ಸೂಚ್ಯಂಕದಲ್ಲಿ ೧೧೧ ಸ್ಥಾನ ಏಕೆ? ೧೦೦ಕ್ಕೆ ೫೦ ರಷ್ಟು ಗರ್ಭಿಣಿ ಬಾಣಂತಿಯರ ರಕ್ತಹೀನತೆ ಏಕೆ? ಇದಾಗ್ಯೂ ೫ ವರ್ಷದ ಮಕ್ಕಳ ಸಾಯುತ್ತಿರುವುದೇಕೆ? ಸರ್ಕಾರ ಈ ಕೂಡಲೇ ಎಲ್ಲಾ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ ಕೇಂದ್ರ ಸರ್ಕಾರದ ಹಕ್ಕೋತ್ತಾಯಗಳಾದ ಆಹಾರ, ಆರೋಗ್ಯ, ಶಿಕ್ಷಣಕ್ಕಾಗಿ ಇರುವ ಯೋಜನೆಗಳಾದ ಎಂಡಿಎಂ, ಎನ್‌ಎಚ್‌ಎಂ,ಐಸಿಪಿಎಸ್, ಎಸ್‌ಎಸ್‌ಎ, ಮನ್ನರೇಗಾ ಮುಂತಾದ ಯೋಜನೆಗಳನ್ನು ಕಾಯಂ ಮಾಡುವ ಮುಖಾಂತರ ಈ ಹಕ್ಕುಗಳನ್ನು ಸಾರ್ವತ್ರಿಕಗೊಳಿಸಬೇಕು.

ಭಾರತೀಯ ಕಾರ್ಮಿಕ ಸಮ್ಮೇಳನ ಶಿಫಾರಸ್ಸಿನಂತೆ ಈ ಯೋಜನೆಗಳಲ್ಲಿ ದುಡಿಯುತ್ತಿರುವ ಸಿಬ್ಬಂದಿಗಳು ಸೇರಿದಂತೆ ೧ ಕೋಟಿ ನೌಕರರಿಗೆ ಕನಿಷ್ಠ ವೇತನ, ನಿವೃತ್ತಿ ಸೌಲಭ್ಯಗಳನ್ನು ಕೊಟ್ಟು ನೌಕರರು ಎಂದು ಪರಿಗಣಿಸಬೇಕು. ಕೆಲಸದ ಅವಧಿಯನ್ನು ೪ ಗಂಟೆಯಿಂದ ೬ ಗಂಟೆಗೆ ಅಕ್ಷರ ದಾಸೋಹ ಕೈ ಪಿಡಿಯನ್ನು ಬದಲಾಯಿಸಬೇಕು. ಅಕ್ಷರ ದಾಸೋಹ ಯೋಜನೆಯನ್ನು ಸಂಪೂರ್ಣವಾಗಿ ಶಿಕ್ಷಣ ಇಲಾಖೆಯಡಿಯಲ್ಲಿಯೇ ನಡೆಯಬೇಕು. ಕೇಂದ್ರ ಸರ್ಕಾರವು ಹಲವು ವಷರ್ಗಳಿಂದ ಈ ನೌಕರರಿಗೆ ವೇತನ ಹೆಚ್ಚಳ ಮಾಡಿರುವುದಿಲ್ಲ. ಕೂಡಲೇ ವೇತನ ಹೆಚ್ಚಳ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನ ಈಡೇರಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಹೇಶ ಹಿರೇಮಠ, ಯಶೋಧಾ ಬೆಟಗೇರಿ, ಪೀರು ಠಾಠೋಡ, ಮಂಜುಳಾ ಮುಳ್ಳೂರು,

ನಾಗರತ್ನ ಬಡಿಗಣ್ಣವರ, ವಿಜಯಲಕ್ಷ್ಮೀ ಚಲವಾದಿ, ರೇಣುಕಾ ತಳವಾರ, ಪ್ರೇಮಾ ಪೂಜಾರ, ಗಿರಿಜಾ ಗಾಣಿಗೇರ, ಕೇಶಮ್ಮ ರಾಠೋಡ, ವಿಜಯಲಕ್ಷ್ಮೀ ಕುಂದಗೋಳ, ನೀಲಂಬಿಕಾ ಯಚ್ಚಲಗಾರ, ಲಕ್ಷ್ಮವ್ವ ಚಿಲಕವಾಡ ಸೇರಿದಂತೆ ಅನೇಕ ಅಕ್ಷರ ದಾಸೋಹ ನೌಕರರು ಉಪಸ್ಥಿತರಿದ್ದರು.

Share this article