ರಾಜ್ಯ ಬಜೆಟ್‌ನಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳ ಆಹಾರ ಭತ್ಯೆಯನ್ನು ₹4500ಕ್ಕೆ ಏರಿಸಬೇಕು ಎಂದು ಎಸ್‌ಎಫ್‌ಐ ನೇತೃತ್ವದಲ್ಲಿ ವಿದ್ಯಾರ್ಥಿನಿಯರು ಬುಧವಾರ ರಾಣಿಬೆನ್ನೂರಿನ ಎಸ್‌ಆರ್‌ಕೆ ನಗರದ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ಮೇಲ್ವಿಚಾರಕರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ರಾಣಿಬೆನ್ನೂರು: ರಾಜ್ಯ ಬಜೆಟ್‌ನಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳ ಆಹಾರ ಭತ್ಯೆಯನ್ನು ₹4500ಕ್ಕೆ ಏರಿಸಬೇಕು ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಬಜೆಟ್‌ನ ಶೇ. 30 ಹಣವನ್ನು ಮೀಸಲಿಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಸ್‌ಎಫ್‌ಐ ನೇತೃತ್ವದಲ್ಲಿ ವಿದ್ಯಾರ್ಥಿನಿಯರು ಬುಧವಾರ ಇಲ್ಲಿನ ಎಸ್‌ಆರ್‌ಕೆ ನಗರದ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ಮೇಲ್ವಿಚಾರಕರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಎಸ್‌ಎಫ್‌ಐ ಹಾಸ್ಟೆಲ್ ವಿದ್ಯಾರ್ಥಿಗಳ ರಾಜ್ಯ ಸಂಚಾಲಕ ಅರುಣ್ ನಾಗವತ್ ಮಾತನಾಡಿ, ವಿದ್ಯಾರ್ಥಿಗಳ ಮಾಸಿಕ ಆಹಾರ ಭತ್ಯೆಯನ್ನು ಕನಿಷ್ಠ ₹4500ಕ್ಕೆ ಹೆಚ್ಚಿಸಬೇಕು. ರಾಜ್ಯದಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಪ್ರತಿದಿನದ ಮೂರೊತ್ತಿನ ಊಟಕ್ಕೆ ಕೇವಲ ₹50-60ಗಳಂತೆ ತಿಂಗಳಿಗೆ ₹1850 ರಿಂದ ₹1750 ಮಾತ್ರ ನೀಡಲಾಗುತ್ತಿದೆ. ಅಗತ್ಯ ವಸ್ತುಗಳ ಬೆಲೆ ವಿಪರೀತವಾಗಿ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸರ್ಕಾರ ನೀಡುತ್ತಿರುವ ಹಣದಲ್ಲಿ ಗುಣಮಟ್ಟದ ಪೌಷ್ಟಿಕ ಆಹಾರ ಒದಗಿಸಲಾಗುತ್ತಿಲ್ಲ. ಎಲ್ಲ ಆಹಾರ ಪದಾರ್ಥಗಳು, ಗ್ಯಾಸ್, ತರಕಾರಿ ಬೆಲೆ ಏರಿಕೆ ಆಗಿದೆ. ಆದರೂ ಹಾಸ್ಟೆಲ್ ವಿದ್ಯಾರ್ಥಿಗಳ ಆಹಾರ ಭತ್ಯೆಯನ್ನು ರಾಜ್ಯ ಸರ್ಕಾರ ಹೆಚ್ಚಿಸಿಲ್ಲ. ಇದರಿಂದ ರಾಜ್ಯದ ವಿದ್ಯಾರ್ಥಿಗಳು ಪೌಷ್ಟಿಕ ಆಹಾರದಿಂದ ವಂಚಿತರಾಗಿ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದರು. ರಾಜ್ಯ ಬಜೆಟ್‌ನಲ್ಲಿ ಶಿಕ್ಷಣಕ್ಕಾಗಿ ಕೊಠಾರಿ ಆಯೋಗದ ಶಿಫಾರಸ್ಸಿನಂತೆ ಶೇ. 30ರಷ್ಟು ಹಣ ಮೀಸಲಿಡಬೇಕು. ರಾಜ್ಯಾದ್ಯಂತ ಸರಕಾರಿ ವಸತಿ ನಿಲಯಗಳನ್ನು ಬಲಪಡಿಸಬೇಕು. ಹೆಚ್ಚುವರಿಯಾಗಿ ಕನಿಷ್ಠ 500 ಹಾಸ್ಟೆಲ್ ಮಂಜೂರು ಮಾಡಬೇಕು. ಪ್ರತಿಯೊಂದು ಹಾಸ್ಟೆಲ್‌ಗಳಿಗೆ ಉಚಿತ ವೈಫೈ ನೀಡಬೇಕು. ಹಾಸ್ಟೆಲ್‌ಗಳಿಗೆ ಪ್ರತ್ಯೇಕವಾಗಿ ಗ್ರಂಥಾಲಯ ಮತ್ತು ಕಂಪ್ಯೂಟರ್ ಲ್ಯಾಬ್ ಮಂಜೂರ ಮಾಡಬೇಕು. ಗ್ರಂಥಪಾಲಕರು ಹಾಗೂ ಕಂಪ್ಯೂಟರ್ ಶಿಕ್ಷಕರ ನೇಮಕ ಮುಂತಾದ ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.