ಹುಬ್ಬಳ್ಳಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕರೆಕೊಟ್ಟಿರುವ ಮತದಾರರಿಗೆ ಉತ್ತರಿಸಿ ಅಭಿಯಾನದ ಅಂಗವಾಗಿ ಬಿಜೆಪಿ ಕಾರ್ಯಕರ್ತರು ಶನಿವಾರ ಹು-ಧಾ ಪೂರ್ವ ವಿಧಾನಸಭಾ ಮತಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯಗೆ ಮನವಿ ಸಲ್ಲಿಸಿದರು.
ಈ ವೇಳೆ ಹು-ಧಾ ಪೂರ್ವ ಕ್ಷೇತ್ರಕ್ಕೆ ಪ್ರಸಕ್ತ ಸಾಲಿನಲ್ಲಿ ತಾವು ತಂದಿರುವ ಅನುದಾನ, ಸರ್ಕಾರದಿಂದ ಬಿಡುಗಡೆ ಮಾಡಿರುವ ಅನುದಾನ ಹಾಗೂ ತಾವು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ವಿವರ ನೀಡುವಂತೆ ಮನವಿ ಮೂಲಕ ಕೋರಲಾಯಿತು.
ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ತಮ್ಮ ಮೇಲೆ ಭರವಸೆಯಿಟ್ಟು ಆಯ್ಕೆ ಮಾಡಿ ಕಳುಹಿಸಿದ್ದಾರೆ. ಇದೀಗ ಮೇ 13, 2023ಕ್ಕೆ ಚುನಾಯಿತರಾಗಿ ಒಂದು ವರ್ಷ ಪೂರೈಸುವ ಹೊಸ್ತಿಲಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಆರಂಭವಾಗಿಲ್ಲ, ಈ ಕಾರಣ ತಾವುಗಳು ಶಾಸಕರಾದ ಬಳಿಕ ಕ್ಷೇತ್ರಕ್ಕೆ ತಂದ ಹಣವೆಷ್ಟು? ಬಿಡುಗಡೆಯಾದ ಅನುದಾನವೆಷ್ಟು? ಅನುದಾನ ಬಿಡುಗಡೆಗೊಂಡ ನಂತರ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಯಾವವು? ಎಂಬುದು ಸೇರಿದಂತೆ ಇನ್ನಿತರ ಮತದಾರರ ಪ್ರಶ್ನೆಗೆ ಉತ್ತರಿಸಿ ಎಂದು ಒತ್ತಾಯಿಸಿದರು.
ಮನವಿ ಸಲ್ಲಿಸಿದ ಬಳಿಕ ಬಿಜೆಪಿ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ ಮಾತನಾಡಿ, ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ. ಇದನ್ನು ಸ್ವತಃ ಕಾಂಗ್ರೆಸ್ ಶಾಸಕರೇ ಪರೋಕ್ಷವಾಗಿ ಹೇಳಿಕೊಂಡಿದ್ದಾರೆ.
ಈ ನಿಟ್ಟಿನಲ್ಲಿ ಬಿಜೆಪಿಯಿಂದ ಮತದಾರರಿಗೆ ಉತ್ತರಿಸಿ ಎಂಬ ಅಭಿಯಾನ ಆರಂಭಿಸಿದ್ದು, ಇದರಿಂದ ಶಾಸಕರು ತಂದಿರುವ ಅನುದಾನವೆಷ್ಟು? ಎಂಬುದನ್ನು ಮತದಾರರಿಗೆ ತಿಳಿಸುತ್ತಿದ್ದೇವೆ.
ಬಿಜೆಪಿ ಸರ್ಕಾರ ಇದ್ದಾಗ ಅಭಿವೃದ್ಧಿ ದೃಷ್ಟಿಯಿಂದ ತಾರತಮ್ಯ ಮಾಡದೇ ಹಣ ಬಿಡುಗಡೆ ಮಾಡಿದ್ದೇವೆ. ಆದರೆ, ಇದೀಗ ಬಿಜೆಪಿಯ ಯಾವೊಬ್ಬ ಶಾಸಕರಿಗೆ ಕಾಂಗ್ರೆಸ್ ಅನುದಾನ ನೀಡಿಲ್ಲ. ಇದು ಕಾಂಗ್ರೆಸ್ ಧೋರಣೆ ಎಂದು ಕಿಡಿಕಾರಿದರು.
ಬಿಜೆಪಿ ಮತದಾರರಿಗೆ ಉತ್ತರಿಸಿ ಅಭಿಯಾನದ ಕುರಿತು ಶಾಸಕ ಪ್ರಸಾದ್ ಅಬ್ಬಯ್ಯ ಮಾತನಾಡಿ, ಇದು ಬಿಜೆಪಿಯವರು ಕಾಂಗ್ರೆಸ್ ಶಾಸಕರು ಮಾಡಿರುವ ಅಭಿವೃದ್ಧಿ ಬಗ್ಗೆ ಮನವಿ ಮೂಲಕ ಕೇಳಿದ್ದಾರೆ.
ಇದನ್ನು ಸ್ವಾಗತಿಸುವೆ. ಆದರೆ, ಇದು ಚುನಾವಣೆ ಗಿಮಿಕ್ ಆಗಿದೆ. ಈ ಹಿಂದೆ ಬಿಜೆಪಿ 4 ವರ್ಷಗಳಲ್ಲಿ ನೀಡಿದ ಅನುದಾನವನ್ನು ಕಾಂಗ್ರೆಸ್ ಸರ್ಕಾರ ಒಂದೇ ವರ್ಷದಲ್ಲಿ ನೀಡಿದೆ. ನಮ್ಮ ಕಾರ್ಯಗಳ ಕುರಿತು ಮಾತನಾಡುವ ನೈತಿಕತೆ ಬಿಜೆಪಿಯವರಿಗಿಲ್ಲ ಎಂದು ಹರಿಹಾಯ್ದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಅಶೋಕ ಕಾಟವೆ, ಬಿಜೆಪಿ ಮುಖಂಡರಾದ ರಂಗಾ ಬದ್ದಿ, ಪ್ರಭು ನವಲಗುಂದಮಠ, ಶಿವು ಮೆಣಸಿನಕಾಯಿ, ಲಕ್ಷ್ಮೀಕಾಂತ ಘೋಡಕೆ ಮುಂತಾದವರು ಉಪಸ್ಥಿತರಿದ್ದರು.