ವಿಶೇಷ ಜಾತಿ ಗಣತಿಯಲ್ಲಿ ಉಪ ಜಾತಿ ‘ಆದಿ ದ್ರಾವಿಡ’ ಎಂದೇ ನಮೂದಿಸಲು ವಿನಂತಿ

KannadaprabhaNewsNetwork | Published : Apr 11, 2025 12:31 AM

ಸಾರಾಂಶ

ಮೂರು ಉಪ ಜಾತಿಗಳ ವಿಶೇಷ ಜಾತಿ ಗಣತಿ ನಡೆಯಲಿದೆ. ಈ ವೇಳೆ ಆದಿ ದ್ರಾವಿಡ ಸಮುದಾಯದವರು ಜಾತಿ ಸಮೀಕ್ಷೆ ಕಲಂನಲ್ಲಿ ಜಾತಿ-ಪರಿಶಿಷ್ಟ ಜಾತಿ, ಉಪಜಾತಿ-ಆದಿ ದ್ರಾವಿಡ(ತುಳು ಭಾಷಿಕರು), ಕುಲದೇವರು-ಸತ್ಯಸಾರಮಾನಿ-ಕಾನದ-ಕಟದ ಎಂದು ನಮೂದಿಸಬೇಕು ಎಂದು ಜಿಲ್ಲಾ ಆದಿ ದ್ರಾವಿಡ ಸಮಾಜ ಸೇವಾ ಸಂಘದ ವಕ್ತಾರ ರಾಮ್‌ಕುಮಾರ್‌ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ರಾಜ್ಯ ಸರ್ಕಾರದ ಆದೇಶ, ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ಆಯೋಗದ ನಿರ್ದೇಶನದಂತೆ ಮೀಸಲಾತಿ, ಒಳಮೀಸಲಾತಿಗಾಗಿ ಪರಿಶಿಷ್ಟ ಜಾತಿಯ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಎಂಬ ಮೂರು ಉಪ ಜಾತಿಗಳ ವಿಶೇಷ ಜಾತಿ ಗಣತಿ ನಡೆಯಲಿದೆ. ಈ ವೇಳೆ ಆದಿ ದ್ರಾವಿಡ ಸಮುದಾಯದವರು ಜಾತಿ ಸಮೀಕ್ಷೆ ಕಲಂನಲ್ಲಿ ಜಾತಿ-ಪರಿಶಿಷ್ಟ ಜಾತಿ, ಉಪಜಾತಿ-ಆದಿ ದ್ರಾವಿಡ(ತುಳು ಭಾಷಿಕರು), ಕುಲದೇವರು-ಸತ್ಯಸಾರಮಾನಿ-ಕಾನದ-ಕಟದ ಎಂದು ನಮೂದಿಸಬೇಕು ಎಂದು ಜಿಲ್ಲಾ ಆದಿ ದ್ರಾವಿಡ ಸಮಾಜ ಸೇವಾ ಸಂಘದ ವಕ್ತಾರ ರಾಮ್‌ಕುಮಾರ್‌ ಹೇಳಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿಯಲ್ಲಿ 101 ಉಪ ಜಾತಿಗಳಿವೆ. ಅದರಲ್ಲೂ ಪಂಚ ದ್ರಾವಿಡದಲ್ಲಿ ಆದಿ ದ್ರಾವಿಡ ತುಳು ಭಾಷಿಕರಾಗಿದ್ದಾರೆ. ಮೂಲತಃ ಭಾರತದ ಮೂಲನಿವಾಸಿಗಳಾಗಿದ್ದು, ಕರ್ನಾಟಕದಲ್ಲಿ ಆದಿ ದ್ರಾವಿಡ ಹೆಸರಲ್ಲಿ ಗುರುತಿಸಿಕೊಂಡಿದ್ದೇವೆ. ತಮಿಳು, ತೆಲುಗು, ಮಲೆಯಾಳಿ, ಕನ್ನಡಿಗರು ಇತರೆ ಮಾತೃ ಭಾಷೆ ಮಾತನಾಡುವವರು ಅವರವರ ಆಚಾರ ವಿಚಾರ, ಕುಲದೇವರು ಇತ್ಯಾದಿ ಪರಸ್ಪರ ಸಾಮ್ಯತೆ ಇಲ್ಲದಂತೆ ಇದ್ದಾರೆ. ಹೀಗಾಗಿ ಆದಿ ದ್ರಾವಿಡರ ಮಾತೃ ಯಾ ಕೇಂದ್ರ ಸ್ಥಾನ ದಕ್ಷಿಣ ಕನ್ನಡವೇ ಆಗಿದೆ. ಜೀವನೋಪಾಯಕ್ಕಾಗಿ ಕೆಲವರು ವಲಸೆ ಹೋಗಿದ್ದು, ವಿವಾಹವಾಗಿ ಬೇರೆ ಕಡೆ ನೆಲೆಸಿದವರಿದ್ದಾರೆ. ಕರಾವಳಿ, ಮಲೆನಾಡು, ಬಯಲು ಪ್ರದೇಶ ಸೇರಿ ಸುಮಾರು 12 ಲಕ್ಷದಷ್ಟು ಆದಿ ದ್ರಾವಿಡರು ವಾಸ್ತವ್ಯ ಹೊಂದಿದ್ದಾರೆ. ಸ್ವಾತಂತ್ರ್ಯ ಪೂರ್ವದಿಂದ ಇತ್ತೀಚಿನವರೆಗೂ ರಾಜ್ಯಾದ್ಯಂತ ಪರಿಶಿಷ್ಟ ಜಾತಿಯಡಿ ಆದಿ ದ್ರಾವಿಡ ಎಂಬ ಉಪ ಜಾತಿಯಲ್ಲಿ ಪ್ರಮಾಣ ಪತ್ರದೊಂದಿಗೆ ಗುರುತಿಸಲಾಗುತ್ತಿತ್ತು. ಈಗ ಉಪ ಜಾತಿಯಲ್ಲಿ ಆದಿ ದ್ರಾವಿಡ ಬದಲು ಆದಿ ಕರ್ನಾಟಕ, ಆದಿ ಆಂಧ್ರ ಇತ್ಯಾದಿ ನಮೂದಿಸುವ ಮೂಲಕ ಗೊಂದಲಕ್ಕೆ ಕಾರಣವಾಗುತ್ತಿದೆ. ಆದ್ಗರಿಂದ ರಾಜ್ಯಾದ್ಯಂತ ಏಕಪ್ರಕಾರವಾಗಿ ಉಪ ಜಾತಿ ಕಲಂನಲ್ಲಿ ಆದಿ ದ್ರಾವಿಡ ಎಂದೇ ನಮೂದಿಸುವಂತೆ ಕೋರುವುದಾಗಿ ಹೇಳಿದರು.

ಸಂಘದ ಗೌರವಾಧ್ಯಕ್ಷ ರಘುನಾಥ ಅತ್ತಾವರ, ಕೋಶಾಧಿಕಾರಿ ಈಶ್ವರ್‌, ಪದಾಧಿಕಾರಿಗಳಾದ ಕೃಷ್ಣ ಸೂಟರ್‌ಪೇಟೆ, ಪ್ರಶಾಂತ್‌ ಗಿರಿಧರ್‌ ಇದ್ದರು.

Share this article