ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿಗೆ ಅಗತ್ಯ ಸೌಲಭ್ಯ ನೀಡಲು ಶಾಸಕ ಎಚ್.ಟಿ.ಮಂಜುಗೆ ಮನವಿ

KannadaprabhaNewsNetwork | Published : Jan 9, 2024 2:00 AM

ಸಾರಾಂಶ

ರಾಜ್ಯದ 14 ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳ ಪಟ್ಟಿಯಲ್ಲಿ ಪ್ರತಿಷ್ಠಿತ ಸ್ಥಾನದಲ್ಲಿದೆ. ಕಾಲೇಜಿನ ಸಿವಿಲ್ ಮತ್ತು ಮೆಕ್ಯಾನಿಕಲ್ ವಿಭಾಗದ ವಿವಿಧ ಅವಶ್ಯಕತೆಗಳ ಪೂರೈಕೆ ಸೇರಿದಂತೆ ಕಾಲೇಜಿನ ಸಮಗ್ರ ಅಭಿವೃದ್ಧಿಗೆ 2 ಕೋಟಿ ರುಗಳ ಅಗತ್ಯವಿದೆ. ಶಾಸಕರು ಕಾಲೇಜಿನ ಅವಶ್ಯಕತೆ ಪೂರೈಸಿ ಕೊಡಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪಟ್ಟಣದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿಗೆ ಅಗತ್ಯ ಸೌಲಭ್ಯ ಒದಗಿಸಿಕೊಡುವಂತೆ ಪ್ರಾಂಶುಪಾಲ ಕೆ.ಆರ್.ದಿನೇಶ್ ಶಾಸಕ ಎಚ್ .ಟಿ.ಮಂಜು ಅವರಿಗೆ ಮನವಿ ಮಾಡಿದರು.

ಪಟ್ಟಣದ ಕಾಲೇಜು ಆವರಣದಲ್ಲಿ ನಡೆದ ಕಾಲೇಜು ಅಭಿವೃದ್ಧಿ ಸಮಿತಿ ಸಭೆಯಲ್ಲಿ ಶಾಸಕರಿಗೆ ಮನವಿ ಪತ್ರ ಅರ್ಪಿಸಿ ಮಾತನಾಡಿ, ರಾಜ್ಯದ 14 ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳ ಪಟ್ಟಿಯಲ್ಲಿ ಪ್ರತಿಷ್ಠಿತ ಸ್ಥಾನದಲ್ಲಿದೆ. ಅಧ್ಯಾಪಕರು ಹೆಚ್ಚಿನ ಆಸಕ್ತಿಯಿಂದ ಗ್ರಾಮೀಣ ವಿದ್ಯಾರ್ಥಿಗಳ ಕಲಿಕೆಗೆ ಶ್ರಮಿಸುತ್ತಿದ್ದಾರೆ ಎಂದರು.

ಸಂಸ್ಥೆ ವಿದ್ಯಾರ್ಥಿಗಳು ರ್‍ಯಾಂಕ್‌ಗಳ ಪಟ್ಟಿಯಲ್ಲಿದ್ದಾರೆ. ತಾಂತ್ರಿಕ ಶಿಕ್ಷಣದ ಜೊತೆಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೂ ನಾವು ಆದ್ಯತೆ ನೀಡುತ್ತಿದ್ದೇವೆ. ಸಂಸ್ಥೆಗೆ 120 ಸಿಬ್ಬಂದಿ ಅಗತ್ಯವಿದ್ದರೂ ಕೇವಲ 32 ಜನ ಮಾತ್ರ ಸೇವೆಯಲ್ಲಿದ್ದಾರೆ ಎಂದರು.

ಭೋದಕರ ಕೊರತೆಯಿಂದ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತಿದೆ. 2011ರಲ್ಲಿ ಕಾಲೇಜು ಆರಂಭವಾಗಿದ್ದರೂ ಮಕ್ಕಳಿಗೆ ಲ್ಯಾಬ್ ಸೌಲಭ್ಯವಿಲ್ಲ. ಇನ್‌ಫೋಸಿಸ್‌ನವರು ಕಾಲೇಜಿಗೆ 150 ಕಂಪ್ಯೂಟರ್ ನೀಡಿದ್ದಾರೆ. ಆದರೆ, ಅವುಗಳನ್ನು ಅಳವಡಿಸಲು ಅಗತ್ಯ ಕಂಪ್ಯೋಟರ್ ಟೇಬಲ್ ಮತ್ತು ಮಕ್ಕಳು ಕುಳಿತು ಕೆಲಸ ಮಾಡಲು ಖುರ್ಚಿಗಳಿಲ್ಲ ಎಂದರು.

ಕಂಪ್ಯೂಟರ್ ನಿರ್ವಹಣೆಗೆ ಹಣಕಾಸಿನ ಕೊರತೆಯಿದೆ. ಮಕ್ಕಳ ಶುಲ್ಕವನ್ನು ನಾವು ಸರ್ಕಾರಕ್ಕೆ ಪಾವತಿಸಿ ಆ ನಂತರ ಅದನ್ನು ವಾಪಸ್ ಪಡೆಯಬೇಕು. ಸಕಾಲಕ್ಕೆ ಸರ್ಕಾರದಿಂದ ವಿದ್ಯಾರ್ಥಿಗಳ ಶುಲ್ಕದ ಹಣ ವಾಪಸ್ ಬರದಿರುವುದರಿಂದ ಮೂಲ ಸೌಲಭ್ಯಗಳ ನಿರ್ವಹಣೆಗೆ ಅಡ್ಡಿಯಾಗಿದೆ ಎಂದು ಶಾಸಕರ ಗಮನಕ್ಕೆ ತಂದರು.

ಕಾಲೇಜು ಶುಲ್ಕದ ಹಣವನ್ನು ಸರ್ಕಾರಕ್ಕೆ ಕಟ್ಟಿ ಆನಂತರ ಹಿಂಪಡೆಯಬೇಕೆಂಬ ನಿಯಮವನ್ನು ರಾಜ್ಯ ಸರ್ಕಾರ ಇದೀಗ ಹಿಂಪಡೆದಿದೆ. ಆದರೆ, ಆದೇಶ ಜಾರಿಗೆ ಬಂದಿಲ್ಲ. ಈ ಬಗ್ಗೆ ಉನ್ನತ ಶಿಕ್ಷಣ ಸಚಿವರೊಂದಿಗೆ ಶಾಸಕರು ಮಾತನಾಡಿ ಆದೇಶವನ್ನು ಜಾರಿಗೊಳಿಸುವಂತೆ ಮನವಿ ಮಾಡಿದರು.

ಕಾಲೇಜಿನ ಶೌಚಾಲಯವನ್ನು ದುರಸ್ಥಿ ಮಾಡಿಸಿ ಕುಡಿಯುವ ನೀರು ಪೂರೈಕೆಗೆ ಕ್ರಮ ವಹಿಸಬೇಕು. ಕೊಠಡಿಗಳಿಗೆ ಕಿಟಕಿ ಗಾಜುಗಳು ಮತ್ತು ಅಲ್ಯುಮೀನಿಯಂ ಪಟ್ಟಿ ಅಳವಡಿಸಿಕೊಡಬೇಕು. 300 ವಿದ್ಯಾರ್ಥಿಗಳು ಆಸೀನರಾಗಲು ಅಗತ್ಯವಾದ ಸಭಾಂಗಣವನ್ನು ನಿರ್ಮಿಸಿಕೊಡಬೇಕು ಎಂದರು.

ಪ್ರಾಂಶುಪಾಲರ ವಸತಿ ಗೃಹ, ಅತಿಥಿ ಗೃಹ ಮತ್ತು ವಾಹನಗಳ ಪಾರ್ಕಿಂಗ್ ತಾಣವನ್ನು ನಿರ್ಮಿಸಿಕೊಡಬೇಕು. ಬಾಲಕ, ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಅಗತ್ಯವಾದ ಮಂಚಗಳು, ಟೇಬಲ್, ಚೇರ್, ಸೋಲಾರ್ ಮತ್ತು ಗೀಸರ್ ಅಳವಡಿಕೆಗೆ ಹಣಕಾಸಿನ ನೆರವು ಒದಗಿಸಿಕೊಡಬೇಕು ಎಂದು ಕೋರಿದರು.

ಕಾಲೇಜಿನ ಸಿವಿಲ್ ಮತ್ತು ಮೆಕ್ಯಾನಿಕಲ್ ವಿಭಾಗದ ವಿವಿಧ ಅವಶ್ಯಕತೆಗಳ ಪೂರೈಕೆ ಸೇರಿದಂತೆ ಕಾಲೇಜಿನ ಸಮಗ್ರ ಅಭಿವೃದ್ದಿಗೆ 2 ಕೋಟಿ ರೂಗಳ ಅಗತ್ಯವಿದೆ. ಕಾಲೇಜಿನ ಅವಶ್ಯಕತೆಗಳನ್ನು ಪೂರೈಸಿ ಕೊಡುವಂತೆ ಕಾಲೇಜಿನ ಉಪನ್ಯಾಸಕ ವೃಂದ ಶಾಸಕರಿಗೆ ಮನವಿ ಮಾಡಿತು.

ಮನವಿ ಸ್ವೀಕರಿಸಿದ ಶಾಸಕರು, ತಾಂತ್ರಿಕ ವಿದ್ಯಾರ್ಥಿಗಳಿಗೆ ಉದ್ಯೋಗವಕಾಶಗಳು ಹೆಚ್ಚಿವೆ. ಗ್ರಾಮಿಣ ಮಕ್ಕಳು ತಾಂತ್ರಿಕ ಕ್ಷೇತ್ರದಲ್ಲಿ ಮುನ್ನಡೆಯಲಿ ಎನ್ನುವ ಕಾರಣಕ್ಕೆ ಇಲ್ಲಿಗೆ ಕಾಲೇಜು ಕೊಡಲಾಗಿದೆ. ಮಕ್ಕಳ ಕಲಿಕೆಗೆ ಉತ್ತಮ ಕ್ಯಾಂಪಸ್ ಇದೆ. ಆದರೆ, ಇದಕ್ಕೆ ತಕ್ಕಂತೆ ಭೋದಕರು ಮತ್ತು ಲ್ಯಾಬ್ ಸೌಲಭ್ಯ ಇಲ್ಲದಿರುವುದು ದುರದೃಷ್ಟಕರ ಎಂದರು.

ರಾಜ್ಯದಲ್ಲಿ ಒಳ್ಳೆಯ ಉನ್ನತ ಶಿಕ್ಷಣ ಸಚಿವರಿದ್ದಾರೆ. ಅವರನ್ನು ಕ್ಷೇತ್ರಕ್ಕೆ ಕರೆತಂದು ಎಂಜಿನಿಯರಿಂಗ್ ಮತ್ತು ಪ್ರಥಮ ದರ್ಜೆ ಕಾಲೇಜುಗಳ ಸಮಸ್ಯೆಗಳನ್ನು ಪರಿಚಯಿಸಿ ಬಗೆಹರಿಸುವ ಕೆಲಸ ಮಾಡುತ್ತೇನೆ ಎಂದರು.

ಈ ವೇಳೆ ಮುಖಂಡರಾದ ಕಿಕ್ಕೇರಿ ಮಧು, ಬಲರಾಂ, ರವಿ ಹಾಗೂ ಕಾಲೇಜಿನ ಉಪನ್ಯಾಸಕ ವೃಂದ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Share this article