ಹರಿಹರದಲ್ಲಿ ಗೃಹರಕ್ಷಕ ದಳ ಕಚೇರಿ ದುರಸ್ತಿ, ವ್ಯವಸ್ಥೆ ಕಲ್ಪಿಸಲು ಮನವಿ

KannadaprabhaNewsNetwork | Published : Apr 12, 2025 12:50 AM

ಸಾರಾಂಶ

ನಗರದ ಗೃಹರಕ್ಷಕ ದಳದ ಕಚೇರಿ ಶಿಥಿಲಗೊಂಡಿದ್ದು ಗೃಹರಕ್ಷಕ ದಳದ ಕಚೇರಿಯ ದುರಸ್ತಿ ಅಥವಾ ತಾತ್ಕಾಲಿಕವಾಗಿ ಬೇರೆ ಕಡೆ ವ್ಯವಸ್ಥೆ ಮಾಡಿಕೊಡಬೇಕೆಂದು ಕೋರಿ ಗೃಹರಕ್ಷಕ ದಳ ಘಟಕದ ಸದಸ್ಯರು ಶಾಸಕ ಬಿ.ಪಿ.ಹರೀಶ್ ಅವರಿಗೆ ಮನವಿ ಸಲ್ಲಿಸಿದರು.

ಗೃಹರಕ್ಷಕ ದಳ ಘಟಕದ ಸದಸ್ಯರಿಂದ ಶಾಸಕ ಬಿ.ಪಿ.ಹರೀಶ್‌ಗೆ ಮನವಿ । ಕ್ರಮದ ಭರವಸೆ

ಕನ್ನಡಪ್ರಭ ವಾರ್ತೆ ಹರಿಹರ

ನಗರದ ಗೃಹರಕ್ಷಕ ದಳದ ಕಚೇರಿ ಶಿಥಿಲಗೊಂಡಿದ್ದು ಗೃಹರಕ್ಷಕ ದಳದ ಕಚೇರಿಯ ದುರಸ್ತಿ ಅಥವಾ ತಾತ್ಕಾಲಿಕವಾಗಿ ಬೇರೆ ಕಡೆ ವ್ಯವಸ್ಥೆ ಮಾಡಿಕೊಡಬೇಕೆಂದು ಕೋರಿ ಗೃಹರಕ್ಷಕ ದಳ ಘಟಕದ ಸದಸ್ಯರು ಶಾಸಕ ಬಿ.ಪಿ.ಹರೀಶ್ ಅವರಿಗೆ ಮನವಿ ಸಲ್ಲಿಸಿದರು.

ನಗರದ ಪತ್ರಿಕಾ ಭವನದ ಸಮೀಪದಲ್ಲಿರುವ ನಗರದ ಗೃಹರಕ್ಷಕ ದಳದ ಕಚೇರಿಗೆ ಶಾಸಕ ಬಿ.ಪಿ.ಹರೀಶ್ ಭೇಟಿ ನೀಡಿ ಇತ್ತೀಚಿಗೆ ಸುರಿದ ಮಳೆ ಗಾಳಿಗೆ ಶಿಥಿಲಗೊಂಡಿರುವ ಕಚೇರಿಯನ್ನು ವೀಕ್ಷಿಸಿದರು.

ಈ ವೇಳೆ ಗೃಹರಕ್ಷಕ ದಳದ ಎಸ್.ಕೇಶವ ಅವರು ಶಾಸಕರಿಗೆ ಮನವಿ ಸಲ್ಲಿಸಿ ಮಾತನಾಡಿ, ನಗರದ ಹಳೇ ಕೋರ್ಟ್ ಹಿಂಭಾಗದಲ್ಲಿರುವ ಗೃಹ ರಕ್ಷಕ ದಳದ ಕಚೇರಿಯು ಬಹಳ ವರ್ಷಗಳ ಹಳೆಯ ಕಟ್ಟಡವಾಗಿದ್ದು, ಬಹುತೇಕ ಶಿಥಿಲವಾಗಿದೆ ಕಳೆದ ಕೆಲ ದಿನಗಳ ಹಿಂದೆ ಬಂದ ಮಳೆಯಿಂದಾಗಿ ಅನೇಕ ದಾಖಲೆಗಳು ಹಾಳಾಗಿವೆ ಎಂದು ಅಳಲು ತೋಡಿಕೊಂಡರು.

ಕಚೇರಿಯು ಬೀಳುವ ಹಂತದಲ್ಲಿದ್ದು, ಗೃಹ ರಕ್ಷಕ ದಳದ ದಾಖಲೆಗಳ ಶೇಖರಣೆ ಮತ್ತು ಮಳೆಗಾಲದಲ್ಲಿ ನಮಗೆ ರಕ್ಷಣೆ ಇಲ್ಲದೇ ಹಾಲಿ ಇರುವ ಕಟ್ಟಡದಲ್ಲಿಯೇ ಕಚೇರಿಯನ್ನು ನಡೆಸಬೇಕಾದ ಪರಸ್ಥಿತಿ ಇದೆ. ಚುನಾವಣೆ ಕರ್ತವ್ಯ, ಕವಾಯತ್ ಮಾಡಲು ಭಾಗವಹಿಸಲು ಆಗಮಿಸುವ ಮಹಿಳೆಯರಿಗೆ ಸಮವಸ್ತ್ರ ಬದಲಿಸಲು ಜಾಗವಿಲ್ಲ ಹಾಗೂ ಶೌಚಾಲಯ ಇಲ್ಲದಾಗಿದೆ ಎಂದು ವಿವರಿಸಿದರು.

ಪ್ರಸ್ತುತ ಮಳೆಗಾಲ ಪ್ರಾರಂಭವಾಗಿದ್ದು, ಮನವಿಯನ್ನು ಪರಿಗಣಿಸಿ ಗೃಹರಕ್ಷಕ ದಳದ ಕಚೇರಿಯನ್ನು ದುರಸ್ತಿ ಮಾಡಿಸಿ ಕೊಡಬೇಕು ಅಥವಾ ತಾತ್ಕಾಲಿಕವಾಗಿ ನಮಗೆ ಬೇರೆಡೆ ಸ್ಥಳಾವಕಾಶ ಮಾಡಿ ಕೊಡಬೇಕೆಂದು ಕೋರಿಕೊಂಡ ಅವರು, ಈಗಾಗಲೇ ಗೃಹ ರಕ್ಷಕದಳ ಕಚೇರಿಗೆ ನಗರದಲ್ಲೊಂದು ನಿವೇಶನ ಒದಗಿಸುವಂತೆ ಜಿಲ್ಲಾಧಿಕಾರಿಗಳಿಗೂ ಹಾಗೂ ನಗರಸಭೆ ಆಯುಕ್ತರಿಗೂ ಈ ಹಿಂದಿನ ಶಾಸಕರಿಗೂ ಮನವಿ ಪತ್ರವನ್ನು ನೀಡಿದ್ದು, ಇದುವರೆಗೂ ಯಾವುದೇ ಕ್ರಮ ಜರುಗಿಸಿರುವುದಿಲ್ಲ ಎಂದರು.

ಗೃಹ ರಕ್ಷಕ ದಳದ ಸ್ವಂತ ಕಟ್ಟಡಕ್ಕೆ ನಗರಸಭೆಯಿಂದ ಒಂದು ನಿವೇಶನ ಕೊಡಿಸುವುದು ಹಾಗೂ ಈಗಿರುವ ಕಟ್ಟಡ ದುರಸ್ತಿ ಮಾಡಿಸುವುದು ಅಥವಾ ತಾತ್ಕಾಲಿಕವಾಗಿ ಬೇರೆಡೆ ಸ್ಥಳಾಂತರಿಸಬೇಕು ಎಂದು ಕೋರಿದರು.

ಶಾಸಕ ಹರೀಶ್ ಮಾತನಾಡಿ, ನಗರದಲ್ಲಿರುವ ಸರ್ಕಾರಿ ಕಟ್ಟಡಗಳು ಖಾಲಿ ಇದ್ದಲ್ಲಿ ತಾತ್ಕಾಲಿಕವಾಗಿ ತಮ್ಮ ಕಚೇರಿ ತೆರೆಯಲು ಅವಕಾಶ ಮಾಡಿಕೊಡುವ ಪ್ರಯತ್ನ ಮಾಡಲಾಗುವುದು. ಎಂದಾಗ ಸ್ಥಳದಲ್ಲಿದ್ದ ಹಲವರು ತಾಲೂಕು ಆರೋಗ್ಯ ಇಲಾಖೆಯ ಕಚೇರಿಯ ಆವರಣದಲ್ಲಿ ಹಲವು ಕೊಠಡಿಗಳಿವೆ ಎಂದು ತಿಳಿಸಿದರು.

ತಕ್ಷಣ ಆ ಸ್ಥಳಕ್ಕೆ ತೆರಳಿ ಕೊಠಡಿಗಳನ್ನು ಪರಿಶೀಲನೆ ನಡೆಸಿದರು. ಆದರೆ ಅಲ್ಲಿನ ಅವ್ಯವಸ್ಥೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ. ಜಿಲ್ಲಾಧಿಕಾರಿಗಳಿಗೊಂದು ಮನವಿ ಸಲ್ಲಿಸಿ. ನಾನು ಕೂಡ ಮಾತನಾಡುತ್ತೇನೆ. ಶೀಘ್ರ ಕೊಠಡಿ ಕೊಡಿಸುವ ಕಾರ್ಯ ಮಾಡಲಾಗುವುದು ಎಂದು ಗೃಹರಕ್ಷಕ ದಳದವರಿಗೆ ಭರವಸೆ ನೀಡಿದರು.

Share this article