ಕಾರಟಗಿ: ತಾಲೂಕಿನ ಚೆಳ್ಳೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮೈದಾನವನ್ನು ಅತಿಕ್ರಮಣಕಾರರಿಂದ ಉಳಿಸಿಕೊಡುವಂತೆ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.ತಾಲೂಕಿನ ಚೆಳ್ಳೂರು-ಹಗೇದಾಳ ಗ್ರಾಮಗಳಿಗೆ ಮಂಗಳವಾರ ಸಂಜೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ನಲಿನ್ ಅತುಲ್, ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆ, ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡೆ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಅವರನ್ನು ಗ್ರಾಮಸ್ಥರು ಸನ್ಮಾನಿಸಿ, ಗ್ರಾಮದ ಸರ್ಕಾರಿ ಶಾಲೆ ಉಳಿಸಿಕೊಡುವಂತೆ ಒತ್ತಾಯಿಸಿದರು.ನಾಲ್ಕೈದು ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಶಾಲೆ ಅತಿಕ್ರಮಣಕಾರರು ಪ್ರಭಾವ ಬಳಸಿಕೊಂಡು ಸ್ಥಳೀಯ ಅಧಿಕಾರಿಗಳಿಗೆ ದಾರಿ ತಪ್ಪಿಸುತ್ತಿದ್ದಾರೆ. ೧೫ ದಿನಗಳ ಹಿಂದೆ ಶಾಲೆ ಕಾಂಪೌಂಡ್ ಕಡವಿದ್ದು, ಎರಡು ದಿನಗಳ ಹಿಂದೆ ಹಿಂಬದಿಯ ಗೋಡೆ ತೆರವುಗೊಳಿಸಿದ್ದಾರೆ. ಶಾಲೆಯ ಮುಂದಿನ ಮೈದಾನವನ್ನು ಅತಿಕ್ರಮಣ ಮಾಡಿಕೊಂಡು ವ್ಯಾಪಾರ ಮಳಿಗೆ ಕಟ್ಟಲು ಹುನ್ನಾರ ನಡೆದಿದೆ. ವಿದ್ಯಾರ್ಥಿಗಳ ಆಟ-ಪಾಠಕ್ಕೆ ತೊಂದರೆಯಾಗಿದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿ, ಜಿಲ್ಲಾಡಳಿತದ ಬಳಿ ಇರುವ ದಾಖಲೆಗಳನ್ನೆಲ್ಲ ಪರಿಶೀಲಿಸಿ ಶಾಲೆಯನ್ನು ಸರ್ಕಾರದ ಪರವಾಗಿ ಉಳಿಸಿಕೊಡಬೇಕು ಎಂದು ನಾಗರಿಕರು ಒತ್ತಾಯಿಸಿದರು.
ಐವತ್ತು ವರ್ಷಗಳ ಹಿಂದೆ ಶಾಲೆಗೆ ಭೂಮಿ ನೀಡಿದ ದಾನಿಗಳ ಕುಟಂಬಸ್ಥರು, ಈಗ ಭೂಮಿ ತಮ್ಮದೆಂದು ಹೇಳುತ್ತಿದ್ದಾರೆ. ಅಲ್ಲದೆ ಶಾಲೆಯ ಮೈದಾನವನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಜತೆಗೆ ಗ್ರಾಪಂನಲ್ಲಿ ಆಸ್ತಿ ನೊಂದಣೆಗೆ ಮುಟೇಷನ್ ಮಾಡಿಸಿಕೊಂಡಿದ್ದಾರೆ. ಇದು ಅಕ್ರಮ. ಈ ಹಿಂದಿನ ಜಿಪಂ ಸಿಇಒ ಈ ಮ್ಯುಟೇಶನ್ ರದ್ದುಪಡಿಸಿದ್ದರು. ಆದರೆ ಶಾಲೆಯನ್ನು ಶಿಕ್ಷಣ ಇಲಾಖೆ ಆಗಲಿ, ಶಾಲೆ ಮುಖ್ಯಗುರುಗಳಾಗಲಿ ತಮ್ಮ ಸುಪರ್ದಿಗೆ ಪಡೆದಿಲ್ಲ. ಹಲವು ದಿನಗಳಿಂದ ಹೋರಾಟ ನಡೆಯುತ್ತಿದ್ದರೂ ಶಿಕ್ಷಣ ಇಲಾಖೆ ಅಧಿಕಾರಿಗಳು, ಮುಖ್ಯಗುರುಗಳ ಶಾಲೆ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಕೂಡಲೇ ಜಿಲ್ಲಾಧಿಕಾರಿಗಳೆ ಈ ಕುರಿತು ಪರಿಶೀಲಿಸಿ ಬಡವರು, ಪರಿಶಿಷ್ಟರು, ದಲಿತರ ಮಕ್ಕಳು ಓದುವ ಸರ್ಕಾರಿ ಶಾಲೆಯನ್ನು ಉಳಿಸಿಕೊಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.ಎಲ್ಲ ಸರ್ಕಾರಿ ಶಾಲೆಗಳ ಸ್ಥಿತಿಗತಿ ಬಗ್ಗೆ ಮಾಹಿತಿ ನೀಡುವಂತೆ ಶಿಕ್ಷಣ ಇಲಾಖೆಗೆ ಸೂಚಿಸಲಾಗಿದೆ. ಚೆಳ್ಳೂರು ಸರ್ಕಾರಿ ಪ್ರಾಥಮಿಕ ಶಾಲೆಗೆ ಮುಂದಿನ ದಿನಗಳಲ್ಲಿ ಭೇಟಿ ನೀಡಿ ಸಮಸ್ಯೆ ಇತ್ಯರ್ಥ ಪಡಿಸುವೆ ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.ಗ್ರಾಮಸ್ಥರ ಸಮ್ಮತಿ: ಹಗೇದಾಳ ಗ್ರಾಮದಲ್ಲಿ ನನೆಗುದಿಗೆ ಬಿದ್ದಿದ್ದ ಪಶು ಆಸ್ಪತ್ರೆ ಕಟ್ಟಡ ಪರಿಶೀಲನೆಗೆ ಜಿಲ್ಲೆಯ ಅಧಿಕಾರಿಗಳ ತಂಡ ಹಗೇದಾಳ-ಚೆಳ್ಲೂರು ಗ್ರಾಮಕ್ಕೆ ಭೇಟಿ ನೀಡಿತ್ತು. ಪಶು ಆಸ್ಪತ್ರೆ ಕಟ್ಟಡ ಪರಿಶೀಲಿಸಿದ ಅಧಿಕಾರಿಗಳು, ಈ ಕಟ್ಟಡ ನಿರ್ಮಾಣದಿಂದ ಸ್ಮಶಾನ ಜಾಗಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮಕೈಗೊಂಡು ಗ್ರಾಮಸ್ಥರ ಅವಶ್ಯಕತೆ ತಕ್ಕಂತೆ ಜಾಗ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು. ಬಳಿಕ ಹಗೇದಾಳ ಗ್ರಾಮಸ್ಥರು ಆಸ್ಪತ್ರೆ ನಿರ್ಮಾಣಕ್ಕೆ ಒಪ್ಪಿದರು. ಹಗೇದಾಳ ಗ್ರಾಮದ ಸ್ಮಶಾನ ಭೂಮಿಯಲ್ಲಿ ಪಶು ಆಸ್ಪತ್ರೆ ನಿರ್ಮಾಣ ವಿರೋಧಿಸಿ ಹಿಂದೆ ಗ್ರಾಮಸ್ಥರು ಹೈಕೋಟ್ ಮೆಟ್ಟಿಲು ಏರಿದ್ದರು.
ಸನ್ಮಾನ: ಚೆಳ್ಳೂರು-ಹಗೇದಾಳ ಮಧ್ಯದ ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಪಂ ಸಿಇಒ ಮತ್ತು ವಿಭಾಗಾಧಿಕಾರಿ ಏಕಕಾಲಕ್ಕೆ ಭೇಟಿ ನೀಡಿದ್ದರು. ಈ ಅಧಿಕಾರಿಗಳ ತಂಡ ಭೇಟಿ ನೀಡಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಖುಷಿಯಿಂದ ಅಧಿಕಾರಿಗಳನ್ನು ಸನ್ಮಾನಿಸಿದರು.ಪಿಕಾಡ್ ಬ್ಯಾಂಕ್ ಅಧ್ಯಕ್ಷ ದೊಡ್ಡಪ್ಪ ದೇಸಾಯಿ, ಶಿವಣ್ಣ ಹುಡೇದ್, ಶ್ಯಾಮೀದ್ ಸಾಬ್, ಗ್ರಾಪಂ ಸದಸ್ಯರಾದ ಬೋಗೇಸ್ ಕಬ್ಬೇರ್, ನಾಗಪ್ಪ ಹರಿಜನ್, ಹನುಮಂತರಾಯಪ್ಪ, ಲಿಂಗೇಶ ಚೆಳ್ಳೂರು, ಮಲ್ಲಣ್ಣ ನಾಯಕ್ ಚೆಳ್ಳೂರು, ಶರಣಪ್ಪ ಕರಡೋಣಿ, ತಿಪ್ಪಣ್ಣ, ದೇವರೆಡ್ಡಿ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯರೂ ಇದ್ದರು.