ಸಮರ್ಪಕ ನೀರು ಪೂರೈಸುವಂತೆ ಲಕ್ಷ್ಮೇಶ್ವರ ಪಟ್ಟಣದ ಬಸವೇಶ್ವರ ನಗರದಲ್ಲಿನ ನಿವಾಸಿಗಳು ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಲಕ್ಷ್ಮೇಶ್ವರ: ಸಮರ್ಪಕ ನೀರು ಪೂರೈಸುವಂತೆ ಪಟ್ಟಣದ ಬಸವೇಶ್ವರ ನಗರದಲ್ಲಿನ ನಿವಾಸಿಗಳು ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಈ ವೇಳೆ ನಿವೃತ್ತ ಎಎಸ್‌ಐ ಎಸ್.ಆರ್. ಈಳಗೇರ ಮಾತನಾಡಿ, ೩೩ ವರ್ಷಗಳ ಹಿಂದೆ ಪಟ್ಟಣದ ಹೊಸ ಬಸ್ ನಿಲ್ದಾಣದ ಪಕ್ಕದಲ್ಲಿರುವ ಬಸವೇಶ್ವರ ಲೇಔಟ್ ನಿರ್ಮಾಣ ಮಾಡಿದ್ದರೂ ರಸ್ತೆ, ಚರಂಡಿ, ಸೇರಿದಂತೆ ಯಾವುದೇ ಮೂಲ ಸೌಲಭ್ಯ ಕಲ್ಪಿಸಿಲ್ಲ. ಬಸವೇಶ್ವರ ನಗರಕ್ಕೆ ಕಳೆದ ೧ ತಿಂಗಳಿಂದ ಕುಡಿಯುವ ನೀರು ಸಮರ್ಪಕವಾಗಿ ಬರುತ್ತಿಲ್ಲ. ನೀರಿಗಾಗಿ ಪುರಸಭೆಗೆ ಹಿಡಿಶಾಪ ಹಾಕುವಂತಾಗಿದೆ. ಪಟ್ಟಣದ ಪುರಸಭೆಗೆ ಅತಿ ಹೆಚ್ಚು ತೆರಿಗೆ ಕಟ್ಟುವ ಬಸವೇಶ್ವರ ನಗರದ ನಿವಾಸಿಗಳು ಯಾವ ತಪ್ಪು ಮಾಡಿದ್ದಾರೆ ಎಂದು ಪ್ರಶ್ನಿಸಿದರು. ಬಸ್ ನಿಲ್ದಾಣದ ಪಕ್ಕದ ರಸ್ತೆಗೆ ಡಾಂಬರು ಹಾಕಲಾಗಿದೆ. ಉಳಿದ ರಸ್ತೆಗಳು ೩೩ ವರ್ಷಗಳಿಂದ ಡಾಂಬರು ಕಂಡಿಲ್ಲ. ನಗರದ ಚರಂಡಿಗಳು ಗಲೀಜಿನಿಂದ ತುಂಬಿ ತುಳುಕುತ್ತಿದ್ದರೂ ಕಸದ ತೆಗೆದುಕೊಂಡು ಹೋಗುವ ವಾಹನಗಳು ಬರುತ್ತಿಲ್ಲ. ಅಲ್ಲದೆ ಬಸ್ ನಿಲ್ದಾಣದ ಪಕ್ಕದಲ್ಲಿನ ಹೋಟೆಲ್, ಅಂಗಡಿಯ ತ್ಯಾಜ್ಯಗಳನ್ನು ತಂದು ಬಸವೇಶ್ವರ ನಗರಕ್ಕೆ ಹೋಗುವ ರಸ್ತೆಯ ಅಕ್ಕಪಕ್ಕದಲ್ಲಿ ತಂದು ಹಾಕುತ್ತಾರೆ. ಇದರಿಂದ ಬಸವೇಶ್ವರ ನಗರಕ್ಕೆ ಹೋಗುವ ಮತ್ತು ಬರುವ ಜನರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಆರೋಪಿಸಿದರು.
ಸಿ.ಎ. ಹುಡೇದ ಮಾತನಾಡಿ, ಕುಡಿಯುವ ನೀರು ಇಲ್ಲದೆ ಜೀವನ ಸಾಗಿಸುವುದು ಅಸಾಧ್ಯದ ಮಾತಾಗಿದೆ. ಬಸವೇಶ್ವರ ನಗರದಲ್ಲಿ ಹೆಚ್ಚಾಗಿ ನೌಕರಿ ಮಾಡುವವರು ಹಾಗೂ ನಿವೃತ್ತ ನೌಕರರು ವಾಸ ಮಾಡುತ್ತಿದ್ದಾರೆ. ಕಳೆದ ಹಲವು ತಿಂಗಳಿಂದ ಕುಡಿಯುವ ನೀರಿಗಾಗಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಬಸವೇಶ್ವರ ನಗರಕ್ಕೆ ಮೂಲ ಸೌಲಭ್ಯ ಕಲ್ಪಿಸುವ ಕಾರ್ಯವಾಗಬೇಕು. ಇಲ್ಲದೆ ಹೋದಲ್ಲಿ ಪ್ರತಿಭಟನೆ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಅವರು ಹೇಳಿದರು.
ಈ ವೇಳೆ ಬಿ.ಎಫ್. ಉಪ್ಪಾರ, ಎಸ್.ಎಸ್. ಪ್ರಸಾದ, ರಿಯಾಜ್ ಲಕ್ಷ್ಮೇಶ್ವರ, ಎಂ.ಎ. ಬಳ್ಳಾರಿ, ಗುರುನಾಥ ಗಜೇಂದ್ರಗಡ, ಸಿದ್ದಣ್ಣ ಬಣಕಾರ, ಕಲಾವತಿ ಮುದಗಲ್ಲ, ಗೀತಾ ಹೆರೂರ, ತನುಜಾ ಪ್ರಸಾದ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.