ಉಡುಪಿ: ಮಧ್ಯಪ್ರಾಚ್ಯ ಯುದ್ಧದಿಂದಾಗಿ ಕರಾವಳಿಯ ಮೀನುಗಾರಿಕಾ ಬೋಟುಗಳಿಗೆ ಡಿಸೇಲ್ ಕೊರತೆಯಾಗಿದ್ದು, ಮೀನುಗಾರಿಕೆಯೇ ಸ್ಥಗಿತಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೇಂದ್ರ ಸರ್ಕಾರ ಮೀನುಗಾರಿಕಾ ಬೋಟುಗಳಿಗೆ ಅಗತ್ಯ ಡಿಸೇಲ್ ಪೂರೈಕೆ ಮಾಡುವಂತೆ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಅವರು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಹಾಗೂ ಮೀನುಗಾರಿಕೆ ಸಚಿವ ರಾಜೀವ್ ರಂಜನ್ ಸಿಂಗ್ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ಮನವಿ ಮಾಡಿದರು.
ಮನವಿಗೆ ಪೂರಕವಾಗಿ ಸ್ಪಂದಿಸಿದ ಇಬ್ಬರು ಕೇಂದ್ರ ಸಚಿವರು ದೇಶದ ಡೀಸೆಲ್ ದಾಸ್ತಾನು ಪ್ರಮಾಣಕ್ಕೆ ಅನುಗುಣವಾಗಿ ಮೀನುಗಾರಿಕಾ ವಲಯಕ್ಕೆ ಅಗತ್ಯ ಪ್ರಮಾಣದ ನಿರಂತರ ಡಿಸೇಲ್ ಪೂರೈಕೆಗೆ ವಿಶೇಷ ಆದ್ಯತೆ ನೀಡಲು ಪ್ರಯತ್ನಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಮಲ್ಪೆ ಯಾರ್ಡ್ ಸಹಕಾರಿ ಸಂಘದ ಉಪಾಧ್ಯಕ್ಷರಾದ ಶಿವಪ್ರಸಾದ್ ಕೋಟ್ಯಾನ್ ಉಪಸ್ಥಿತರಿದ್ದರು.