ಡಂಬಳ: ರೈತರಿಗೆ ಅಗತ್ಯವಾದ ಹೊಸ ಬೀಜದ ತಳಿಗಳ ಸಂಶೋಧನೆ ಅಗತ್ಯ ಎಂದು ರೋಣ ಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ರಾಜ್ಯದಲ್ಲಿ ಸೂರ್ಯಕಾಂತಿ ಬೀಜದ ಹೊಸ ತಳಿ ಕೆಬಿಎಸ್ ಎಚ್ 78ನ್ನು ಅರ್ಹ ರೈತರಿಗೆ ಉಚಿತವಾಗಿ ಕೃಷಿ ಇಲಾಖೆ ಮೂಲಕ ನೀಡಲಾಗುತ್ತಿದೆ. ಇದು ಎಲ್ಲ ಅವಧಿಯಲ್ಲಿ ಉತ್ತಮ ಇಳುವರಿ ಬರುವ ಬೀಜವಾಗಿದೆ. ರೈತರಿಗೆ ಕೆಲವೊಮ್ಮೆ ನಿಸರ್ಗ ಕೈಕೊಡುತ್ತದೆ. ಕೆಲವೊಮ್ಮೆ ಬೆಳೆದ ಬೆಳೆಗೆ ಯೋಗ್ಯ ಬೆಲೆ ಇರುವುದಿಲ್ಲ. ಸರ್ಕಾರ ಸಹ ರೈತರ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಯೋಜನೆಗಳ ಸದುಪಯೋಗ ಪ್ರತಿಯೊಬ್ಬ ರೈತರಿಗೆ ಆಗಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಆನಂತರ ಮುಂಗಾರು ಪೂರ್ವದಲ್ಲಿ ರಾಜ್ಯದಲ್ಲಿ ರೈತರಿಗೆ ಬೀಜ, ರಸಗೊಬ್ಬರ ಕೊರತೆ ಆಗದಂತೆ ಅಗತ್ಯ ಕ್ರಮ ಕೈಗೊಂಡಿದೆ ಎಂದರು.
ಕೃಷಿ ಉಪನಿರ್ದೇಶಕಿ ಸ್ಫೂರ್ತಿ ಜಿ.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿ, ರೈತರು ಜಮೀನಿನ ಮಣ್ಣು ಮತ್ತು ಇತರ ಅಂಶಗಳ ಆಧಾರದ ಮೇಲೆ ಬಿತ್ತನೆ ಮಾಡಬೇಕು ಕೆ.ಜಿ.ಎನ್.ಎಚ್.78 ಸೂರ್ಯಕಾಂತಿ ಹೊಸ ತಳಿ ಬೀಜ ಅಲ್ಪ ಅವಧಿಯಲ್ಲಿ ಉತ್ತಮ ಇಳುವರಿ ನೀಡುತ್ತದೆ. ಸಾಂಕೇತಿಕವಾಗಿ ಅರ್ಹ ರೈತರಿಗೆ ಉಚಿತವಾಗಿ ನೀಡಲಾಗುತ್ತಿದ್ದು, ಬೀಜವನ್ನು ರೈತರು ಕಡ್ಡಾಯವಾಗಿ ಬಿತ್ತನೆ ಮಾಡಬೇಕು. ಬೆಳೆಗಳಿಗೆ ರೋಗ ಇತರ ಕೃಷಿ ಸಂಬಂಧಿತ ಸಮಸ್ಯೆಗಳಿದ್ದರೆ ಕೃಷಿ ಇಲಾಖೆಯನ್ನು ಸಂಪರ್ಕಿಸಬೇಕು ಎಂದು ಹೇಳಿದರು.ಕೃಷಿ ವಿಜ್ಞಾನಿ ಎಸ್.ಎಲ್. ಪಾಟೀಲ ಹಾಗೂ ನಿಂಗಪ್ಪ ಬಿ.ಜಿ. ಉಪನ್ಯಾಸ ನೀಡಿದರು. ತಾಲೂಕು ಕೃಷಿ ಅಧಿಕಾರಿ ಪ್ರಮೋದ ತುಂಬಾಳ, ತಾಪಂ ಇಒ ವಿಶ್ವನಾಥ ಹೊಸಮನಿ, ಗ್ರಾಪಂ ಅಧ್ಯಕ್ಷೆ ಹುಲಿಗೆಮ್ಮ ಪಾಟೀಲ, ಉಪಾಧ್ಯಕ್ಷ ನಿರ್ಮಲ ಹರಿಜನ, ಮುಖಂಡರಾದ ಹೇಮಣ್ಣ ಪೂಜಾರ, ರಾಮನಗೌಡ ಪಾಟೀಲ, ಯಲ್ಲಪ್ಪ ಮಾಳೆಕೊಪ್ಪ, ಸೂರ್ಯಕಾಂತ ಕವಲೂರ, ಮಹೇಶ ಗಡಗಿ, ರಾಜಕುಮಾರ ಕೆ. ಪೂಜಾರ, ರವಿ ದೊಡ್ಡಮನಿ, ಮುತ್ತಣ್ಣ ಕೊಂತಿಕಲ್, ಮಲ್ಲಿಕಾರ್ಜುನ ಪ್ಯಾಟಿ, ಕೃಷಿ ಅಧಿಕಾರಿ ಎಸ್.ವಿ. ರಾಮೇನಹಳ್ಳಿ, ಹನುಮಂತಪ್ಪ ಕೆ. ಶಿವಮೂರ್ತಿ ನಾಯಕ, ಗೌರಿಶಂಕರ ಸಜ್ಜನರ, ಡಿ.ಡಿ. ಸೊರಟೂರ ಭಾಗವಹಿಸಿದ್ದರು.