ಕನ್ನಡಪ್ರಭ ವಾರ್ತೆ ಭಾರತೀನಗರ
ಯಾವುದೇ ವಿಷಯದಲ್ಲಿ ಸಂಶೋಧನೆ ಕೈಗೊಳ್ಳಬೇಕಾದರೆ ಎಲ್ಲಾ ವಿಷಯದಲ್ಲೂ ಜ್ಞಾನ ಇದ್ದಲ್ಲಿ ಮಾತ್ರ ಸಂಶೋಧನೆ ಪರಿಪೂರ್ಣವಾಗುತ್ತದೆ ಎಂದು ಮೈಸೂರು ವಿಶ್ವ ವಿದ್ಯಾನಿಲಯದ ಡೀನ್ ಡಾ.ಎಂ.ಜೆ.ಮಂಜುನಾಥ್ ತಿಳಿಸಿದರು.ಭಾರತೀ ಪದವಿ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಭಾರತೀ ಕಾಲೇಜು (ಸ್ವಾಯತ್ತ) ಕನ್ನಡ ವಿಭಾಗ, ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರ ಹಾಗೂ ಐ.ಕ್ಯೂ.ಎ.ಸಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಜ್ಯ ಮಟ್ಟದ ಒಂದು ದಿನದ ವಿಚಾರ ಸಂಕಿರಣದಲ್ಲಿ ಸಂಶೋಧನೆ ವಿಧಿ ವಿಧಾನಗಳು- ಮರುಪರಿಶೀಲನೆ ಕುರಿತ ಮಾತನಾಡಿದರು.
ಸಂಪೂರ್ಣ ಜ್ಞಾನ ಇಲ್ಲದೆ ಮಾಡುವ ಸಂಶೋಧನೆ ಏಕಮುಖಿ ಸಂಶೋಧನೆಯಾಗಿ ಮಾರ್ಪಟ್ಟು ಅದು ಅಪೂರ್ಣ ಸಂಶೋಧನೆಯಾಗಿಯೇ ಉಳಿದುಕೊಳ್ಳುತ್ತದೆಯ ಸಂಶೋಧನೆ ಕೈಗೊಳ್ಳುವವರು ಎಲ್ಲಾ ವಿಷಯವನ್ನು ವಿವಿಧ ದೃಷ್ಠಿಕೋನಗಳಲ್ಲಿ ನೋಡಬೇಕಾಗುತ್ತದೆ. ಆ ಎಲ್ಲಾ ಕೋನಗಳನ್ನು ಕೃತಿಗಿಳಿಸಿದಾಗ ಉತ್ತಮ ಪ್ರಬಂಧವಾಗಿ ಹೊರಹೊಮ್ಮುತ್ತದೆ ಎಂದರು.ಸಂಶೋಧಕನಾಗುವವನಿಗೆ ಹಲವು ವಿಷಯಗಳ ಬಗ್ಗೆ ಗೊತ್ತಿರಬೇಕು. ಅದರಲ್ಲಿ ಇತಿಹಾಸ, ಲಿಪಿಶಾಸ್ತ್ರ, ಜಾನಪದ, ಪುರಾತತ್ವ ಶಾಸ್ತ್ರ, ಶೀಲಾಶಾಸ್ತ್ರ, ರಾಜಕೀಯ ಶಾಸ್ತ್ರ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಸಂಶೋಧನೆ ನಡೆಸಬೇಕು. ಹಾಗಾದಲ್ಲಿ ಮಾತ್ರ ಬಹುಭಾಷೀಯ ಸಂಶೋಧನೆಯಾಗುತ್ತದೆ ಎಂದರು.
ಜಾನಪದ ತಜ್ಞ ಡಾ.ಟಿ.ಗೋವಿಂದರಾಜ್ ಮಾತನಾಡಿ, ಜಾನಪದ ಪ್ರಕಾರಗಳಲ್ಲಿ ಹಲವಾರು ಅಭಿವ್ಯಕ್ತಿಗಳಿಗೆ ಜಾನಪದ ಅಧ್ಯಯನ ಮಾಡುವವರು ಮೇಲ್ನೋಟಕ್ಕೆ ಪ್ರಾಕಾರಗಳನ್ನೊಳಗೊಂಡಂತೆ ಅಧ್ಯಯನ ಮಾಡಿ ಸಂಶೋಧನೆಗಿಳಿದಾಗ ಅದ್ವಾನದ ಸಂಶೋಧನೆಯಾಗುತ್ತದೆ ಎಂದರು.ಜಾನಪದ ಎಂಬುದು ಒಂದು ವಿಶಾಲವಾದ ಸಮುದ್ರ, ಆ ಎಲ್ಲಾ ಪ್ರಕಾರಗಳನ್ನು ಅಧ್ಯಯನ ಮಾಡುವುದು ಸುಲಭದ ಮಾತಲ್ಲ. ಒಂದು ವೇಳೆ ಅಧ್ಯಯನ ಕೈಗೊಂಡವರು ಜಾನಪದದ ಎಲ್ಲಾ ಪ್ರಾಕಾರಗಳ ಒಳಹೊರವುಗಳನ್ನು ವಿಶ್ಲೇಷಿಸುವಂತಾಗಬೇಕು. ಹಾಗಾದಲ್ಲಿ ಮಾತ್ರ ಸಮಗ್ರ ಜಾನಪದ ಸಂಶೋಧನೆಯಾಗುತ್ತದೆ ಎಂದರು.
ವಿಶ್ರಾಂತ ಪ್ರಾಂಶುಪಾಲ ಡಾ.ಮಾ.ರಾಮಕೃಷ್ಣ ಮಾತನಾಡಿ, ಸಾಹಿತ್ಯಗಳಲ್ಲಿ ಹಲವು ವಿಧಗಳಿವೆ. ಹಳಗನ್ನಡದ ಸಾಹಿತ್ಯ , ಗದ್ಯ ಸಾಹಿತ್ಯ, ಕಾವ್ಯ ಸಾಹಿತ್ಯ ಎಲ್ಲವನ್ನು ಅಧ್ಯಯನ ಮಾಡಿ ಸಮಕಾಲಿನ ಸಾಹಿತ್ಯದ ಜೊತೆಗೂ ನಂಟು ಇರಿಸಿಕೊಂಡು ಸಂಶೋಧನೆ ಕೈಗೊಳ್ಳಬೇಕು ಎಂದರು.ಇದೇ ವೇಳೆ ನಿವೃತ್ತ ಪ್ರಾಧ್ಯಾಪಕ ಡಾ.ಆರ್.ಸಿ.ದೇವರಾಜು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.