ದೇಶದ ಭದ್ರತೆ ಮತ್ತು ಭವಿಷ್ಯಕ್ಕಾಗಿ ಇಂದಿನ ವಿದ್ಯಾರ್ಥಿಗಳು ಸಂಶೋಧನಾತ್ಮಕ ಅಧ್ಯಯನಗಳನ್ನು ನಡೆಸಬೇಕಾಗಿದೆ
ಕನ್ನಡಪ್ರಭ ವಾರ್ತೆ ತುಮಕೂರು ತಾಂತ್ರಿಕವಾಗಿ ದೇಶ ಬೆಳೆಯುತ್ತಿದ್ದು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಿಂದಾಗಿ ಇನ್ನಿಲ್ಲದ ಸಂಶೋಧನೆಗಳನ್ನು ನಡೆಯುತ್ತಿವೆ. ಬಾಹ್ಯಕಾಶ, ಆರೋಗ್ಯ, ತಂತ್ರಜ್ಞಾನ ಸೇರಿದಂತೆ ದೇಶದ ಭದ್ರತೆ ಮತ್ತು ಭವಿಷ್ಯಕ್ಕಾಗಿ ಇಂದಿನ ವಿದ್ಯಾರ್ಥಿಗಳು ಸಂಶೋಧನಾತ್ಮಕ ಅಧ್ಯಯನಗಳನ್ನು ನಡೆಸಬೇಕಾಗಿದೆ ಎಂದು ಬೆಂಗಳೂರಿನ ಇಂಡಿಯನ್ ಇನ್ಸಟಿಟ್ಯೂಟ್ ಆಫ್ ಸೈನ್ಸ್ ಸಂಶೋಧನಾ ಸಂಸ್ಥೆಯ ಪ್ರಾಧ್ಯಾಪಕ ಡಾ. ಶ್ರೀನಿವಾಸ ಅಭಿಪ್ರಾಯಪಟ್ಟರು. ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ ಆ್ಯಂಡ್ ಟೆಲಿಕಮ್ಯುನಿಕೇಶನ್ ವಿಭಾಗ ಮತ್ತು ಬೆಂಗಳೂರಿನ ಐಇಇಇ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ 5ನೇ ಐಇಇಇ ಅಂತಾರಾಷ್ಟ್ರೀಯ ಮೊಬೈಲ್ ನೆಟ್ ವರ್ಕ್ ಆ್ಯಂಡ್ ಟೆಲಿ ಕಮ್ಯುನಿಕೇಷನ್ಸ್-2025ನೇ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.ದೇಶದಲ್ಲಿ ತಂತ್ರಜ್ಞಾನ ಬೆಳೆಯುತ್ತಿದ್ದರೂ ಅದರಲ್ಲಿನ ಲೋಪ ದೋಷಗಳು ಮತ್ತು ಸಮಸ್ಯೆ ಸವಾಲುಗಳು ಎದುರಾಗುತ್ತಿವೆ. ಸೈಬೈರ್ ಕ್ರೈಂ ಕ್ಷೇತ್ರದಲ್ಲಿನ ಸಮಸ್ಯೆಗಳಿಗೆ ಸುರಕ್ಷತಾ ಹಾದಿಯನ್ನು ಕಂಡುಕೊಳ್ಳುವ ಸಲುವಾಗಿ ವಿದ್ಯಾರ್ಥಿಗಳು ಕಲಿಯುವ ಹಂತದಲ್ಲಿಯೇ ಸಂಶೋಧನಾತ್ಮಕವಾಗಿ ಅಧ್ಯಯನಶೀಲರಾದರೆ ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶೀ ತಂತ್ರಜ್ಞಾನವನ್ನು ಮುಂಚೂಣಿಗೆ ತರಬಹುದು ಎಂದರು.ಡಾ.ಚಂಗಪ್ಪ ಎಂ.ಆರ್ ಅವರು ಮಾತನಾಡಿ, ತಂತ್ರಜ್ಞಾನ ಹಲವು ಮಜಲುಗಳಲ್ಲಿ ಬೆಳೆಯುತ್ತಿದೆ. ವೈಯಕ್ತಿಕ ಮತ್ತು ಭದ್ರತಾ ಗೌಪ್ಯತೆಗಳನ್ನು ಕಾಪಾಡಲು ಮೊಬೈಲ್ ನೆಟ್ವರ್ಕ್ ಹಾಗೂ ರಿಸರ್ಚ್ ಟೆಲಿ ಕಮ್ಯುನಿಕೇಷನ್ ಅಗತ್ಯವಿದೆ. ಇನ್ನಷ್ಟು ಬೆಳವಣಿಗೆ ಹೊಂದಲು ಇಂದಿನ ಡಿಜಿಟಲ್ ಮಾರ್ಗ ಉಪಯುಕ್ತವಾಗಿದ್ದು, ಇದರಲ್ಲಿ ಹೊಸ ಹೊಸ ಸವಾಲುಗಳನ್ನ ನಾವು ಎದುರಿಸಬೇಕಿದೆ ಎಂದರು.
ಅಬುದಾಬಿಯ ಮೊಹಮ್ಮದ್ ಬಿನ್ ಜೆಯೆಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ನವೀನ್ ಕುಮಾರ್ ಮಾತನಾಡಿ ತಾಂತ್ರಿಕವಾಗಿ ಹೊರಹೊಮ್ಮುವ ವಿದ್ಯಾರ್ಥಿಗಳಿಗೆ ಇಂದು ಸಾಧಿಸಬೇಕಾದಷ್ಟು ಅವಕಾಶಗಳನ್ನು ತಂತ್ರಜ್ಞಾನ ಒದಗಿಸುತ್ತಿದೆ. ದೇಶ-ವಿದೇಶ ತಿರುಗಿ ನೋಡುವಂತಹ ಸಾಧನೆಯನ್ನು ನಾವು ಮಾಡಬೇಕಾಗಿದೆ. ತಾಂತ್ರಿಕವಾಗಿ ಉಪಯೋಗವಾಗುವ ಕಾರ್ಯಗಾರಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದರಿಂದ ಅವರ ಬೌದ್ಧಿಕ ಬುದ್ಧಿ ಮಟ್ಟ ಹೆಚ್ಚಾಗಿ, ಹೊಸ ಹೊಸ ಆವಿಷ್ಕಾರದ ಗುಂಗು ತಲೆಯಲ್ಲಿ ಹೊಳೆಯುತ್ತದೆ ಎಂದರು.ಸಾಹೇ ವಿವಿಯ ಡಾ.ಕೆ.ಬಿ.ಲಿಂಗೇಗೌಡ ಅವರು ಮಾತನಾಡಿ , ಸಿದ್ಧಾರ್ಥ ಶಿಕ್ಷಣ ಸಂಸ್ಥೆ ದೇಶದ ವಿದೇಶಗಳು ಮೆಚ್ಚುವಂತಂಹ ಉನ್ನತ ಶಿಕ್ಷಣ ವ್ಯವಸ್ಥೆಗಳನ್ನು ಹೊಂದಿದ್ದು, ಸಂಸ್ಥೆ ರೂವಾರಿ ಡಾ.ಎಚ್. ಎಂ. ಗಂಗಾಧರಯ್ಯ ಅವರ ಆದರ್ಶ ಮತ್ತು ಆಶಯದಂತೆ ಸಂಸ್ಥೆಯ ವಿದ್ಯಾರ್ಥಿಗಳು ವಿದೇಶದಲ್ಲಿ ಸಾಧನೆ ಮಾಡಿದ್ದಾರೆ. ಸಂಸ್ಥೆಯಲ್ಲಿ ತಂತ್ರಜ್ಞಾನ ಕಲಿಕೆ ವಿಫುಲವಾದ ಅವಕಾಶ ಕಲ್ಪಿಸುತ್ತಿದ್ದು, ಇದನ್ನ ಬಳಸಿಕೊಂಡು ವಿದ್ಯಾರ್ಥಿಗಳು ಸಾಧನೆ ಮಾಡಬಹುದು ಎಂದರು. ಸಾಹೇ ರಿಜಿಸ್ಟರ್ ಡಾ. ಅಶೋಕ್ ಮೆಹ್ತಾ ಮಾತನಾಡಿ, ಇಂದಿನ ಜಗತ್ತಿನಲ್ಲಿ ಆಲೋಚನೆಗಳು ದಿನ ದಿನಕ್ಕೆ ಸುಧಾರಿಸಬೇಕು. ಇಂದಿನ ಕೃತಕ ಬುದ್ಧಿಮತ್ತೆ ಪ್ರಪಂಚದಲ್ಲಿ ಜೀವಿಸಲು ಕಷ್ಟ ಹಾಗೂ ಎಐ ಕೌಶಲ್ಯಗಳನ್ನು ಬದಲಾಯಿಸಬಹುದು. ಹಾಗಾಗಿ ವಿದ್ಯಾರ್ಥಿಗಳು ದಿನದಿಂದ ದಿನಕ್ಕೆ ಜ್ಞಾನವನ್ನು ಗಳಿಸಬೇಕು ಮತ್ತು ಅವಕಾಶಗಳನ್ನು ಉಪಯೋಗಿಸಿಕೊಳ್ಳಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಇಟಲಿಯ ವಿವಿ ವಿದ್ಯುತ್ ಮತ್ತು ಮಾಹಿತಿ ಎಂಜಿನಿಯರಿಂಗ್‌ನ ಪ್ರಾಧ್ಯಾಪಕರಾದ ಪ್ರೊ. ಲೂಸಿಯಾನೊ ಮೆಸ್ಸಿಯಾ, ಪೋರ್ಚುಗಲ್‌ನ ಪೋರ್ಚುಕಲೆನ್ಸ್ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ. ಫರ್ನಾಂಡೊ ಮೊರೈರಾ, ಇಟಲಿ ರೋಮ್ ವಿಶ್ವವಿದ್ಯಾಲಯದ ಡಾ. ಅಲೆಸ್ಸಾಂಡ್ರೊ ವಿಝಾರಿ ಅವರುಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು. ಕಾರ್ಯಗಾರದಲ್ಲಿ ಸೀನಿಯರ್ ಎಂಜಿನಿಯರ್ ಮ್ಯಾನೇಜರ್ ಚಂದ್ರಶೇಖರ್ ಬಿ.ಎಸ್, ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಂ.ಎಸ್.ರವಿಪ್ರಕಾಶ್, ಅಂತಾರಾಷ್ಟ್ರೀಯ ಮಟ್ಟದ ಸಮ್ಮೇಳನದ ಸಂಘಟನಾ ಅಧ್ಯಕ್ಷರು ಹಾಗೂ ಎಲೆಕ್ಟ್ರಾನಿಕ್ ಅಂಡ್ ಟೆಲಿ ಕಮ್ಯುನಿಕೇಶನ್ ವಿಭಾಗದ ಮುಖ್ಯಸ್ಥರು ಆದ ಡಾ.ಸವಿತಾ ಡಿ ತೋರವಿ ಸೇರಿದಂತೆ ಎಂಜಿನಿಯರಿಂಗ್ ವಿಭಾಗದ ವಿವಿಧ ಮುಖ್ಯಸ್ಥರುಗಳು, ವಿದ್ಯಾರ್ಥಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು. ಈ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಇಟಲಿ, ಜರ್ಮನಿ, ಅಮೇರಿಕಾ, ಲಂಡನ್, ಜಪಾನ್, ಚೀನಾ ಸೇರಿದಂತೆ ದೇಶ-ವಿದೇಶದಿಂದ 2 ಸಾವಿರಕ್ಕೂ ಹೆಚ್ಚು ಪ್ರಬಂದಗಳು ಸಲ್ಲಿಕೆಯಾಗಿದ್ದವು. ಅವುಗಳಲ್ಲಿ 256 ಪ್ರಬಂಧಗಳನ್ನು ಪ್ರಕಟಣೆಗೆ ಆಯ್ಕೆ ಮಾಡಲಾಗಯಿತು. ಇವುಗಳಲ್ಲಿ ೧೧೨ ಅಂತಾರಾಷ್ಟ್ರೀಯ ಮಟ್ಟದಲ್ಲಿನ ಸಂಪನ್ಮೂಲ ವ್ಯಕಿಗಳು ಮಂಡಿಸಿದ ಪ್ರಬಂಧಗಳಾಗಿದ್ದವು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.