ಬಸವರಾಜ ಹಿರೇಮಠ
ಧಾರವಾಡ: 1950ರಲ್ಲಿ 50 ಮಿಲಿಯನ್ ಟನ್ ಇದ್ದ ಆಹಾರ ಉತ್ಪಾದನೆಯು ಪ್ರಸ್ತುತ 350 ಮಿಲಿಯನ್ ಟನ್‌ಗಳಿಗೆ ಏರಿದೆ. ಈ ಬೆಳವಣಿಗೆಯು ದೇಶದ ಆಹಾರ ಭದ್ರತೆಯನ್ನು ಖಚಿತಪಡಿಸಿದೆಯೇ ಹೊರತು ಪೌಷ್ಟಿಕಾಂಶ ಭದ್ರತೆ ಸಾಧಿಸುವಲ್ಲಿ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಆಹಾರ ತಜ್ಞರ ಸಲಹೆ ಮೇರೆಗೆ, ಧಾರವಾಡದ ಕೃಷಿ ವಿಶ್ವವಿದ್ಯಾಲಯವು ಪೌಷ್ಟಿಕಾಂಶ ಭದ್ರತೆ ಬಲಪಡಿಸಲು, ದೀರ್ಘಕಾಲದ ಅಪೌಷ್ಟಿಕತೆಯ ಸವಾಲುಗಳನ್ನು ನಿಭಾಯಿಸಲು ಹಾಗೂ ಅಧಿಕ ಇಳುವರಿ ಸಹ ನೀಡುವ ಹೊಸ ಹೊಸ ತಳಿಗಳನ್ನು ಅಭಿವೃದ್ಧಿಪಡಿಸಿದೆ.ಯಾವವು ತಳಿಗಳು: ಪ್ರಮುಖವಾಗಿ ಕೃಷಿ ವಿವಿಯು ಆರು ಸಿರಿಧಾನ್ಯಗಳು, ಎರಡು ಎಣ್ಣೆಕಾಳು ಹಾಗೂ ಎರಡು ತರಕಾರಿ ತಳಿಗಳು ಸೇರಿ ಒಟ್ಟು ಹತ್ತು ಹೊಸ ತಳಿಗಳನ್ನು ಶೋಧಿಸಿದ್ದು, ಇವೆಲ್ಲವೂ ಹವಾಮಾನ ನಿರೋಧಕವಾಗಿವೆ. ಈ ಹತ್ತು ತಳಿಗಳನ್ನು ಸೆ. 13 ರಿಂದ ಶುರುವಾಗುವ ಕೃಷಿ ಮೇಳದ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗುತ್ತಿದೆ.
ಈ ಕುರಿತು ಕನ್ನಡಪ್ರಭಕ್ಕೆ ಮಾಹಿತಿ ನೀಡಿದ ಕೃಷಿ ವಿವಿ ಕುಲಪತಿ ಪ್ರೊ. ಪಿ.ಎಲ್. ಪಾಟೀಲ್, ಸಿರಿಧಾನ್ಯಗಳ ಪೈಕಿ ನವಣೆ ತಳಿಯಲ್ಲಿ ಡಿಎಫ್‌ಟಿ-3 ಸಂಶೋಧಿಸಲಾಗಿದೆ. ಇದು ಪ್ರತಿ ಹೆಕ್ಟೇರ್‌ಗೆ 31 ಕ್ವಿಂಟಲ್ ಹೆಚ್ಚಿನ ಇಳುವರಿ ನೀಡುವ ಮತ್ತು ಪ್ರತಿ ಹೆಕ್ಟೇರ್‌ಗೆ 5.15 ಟನ್ ಹೆಚ್ಚಿನ ಮೇವಿನ ಇಳುವರಿ ನೀಡುವ ಮತ್ತು ಹೆಚ್ಚಿನ ತೂಕ, ಪ್ರತಿ ಗಿಡಕ್ಕೆ ಹೆಚ್ಚು ಟಿಸಳುಗಳನ್ನು ಹೊಂದಿದ ಹೊಸ ವಿಧವಾಗಿದೆ.ಸಿರಿಧಾನ್ಯಗಳಿವು: ಇನ್ನು, ಸಾಮೆಯಲ್ಲಿ ಡಿಎಲ್‌ಟಿಎಂ-5 ತಳಿ ಸಂಶೋಧಿಸಿದ್ದು, ಪ್ರತಿ ಹೆಕ್ಟೇರ್‌ಗೆ 26.34 ಕ್ವಿಂಟಲ್ ಹೆಚ್ಚಿನ ಧಾನ್ಯ ಇಳುವರಿ ಮತ್ತು 4.69 ಟನ್ ಮೇವಿನ ಇಳುವರಿ ನೀಡುವ ಸುಧಾರಿತ ವಿಧವಾಗಿದೆ. ಊದಲು ತಳಿಯಲ್ಲಿ ಪ್ರತಿ ಹೆಕ್ಟೇರ್‌ಗೆ 34.28 ಕ್ವಿಂಟಲ್ ಹೊಂದಿರುವ DBrM-5 ಹೆಸರಿನಲ್ಲಿ ಸಂಶೋಧಿಸಲಾಗಿದೆ. ರಾಗಿ ಧಾನ್ಯದಲ್ಲಿ DFM-3 ಎಂಬ ನೂತನ ತಳಿ ಸಂಶೋಧಿಸಿದ್ದು, ಇದು ಪ್ರತಿ ಹೆಕ್ಟೇರ್‌ಗೆ 36.07 ಕ್ವಿಂಟಲ್ ಇಳುವರಿ ಹೊಂದಿದೆ. ಹಾರಕದಲ್ಲಿ ಪ್ರತಿ ಹೆಕ್ಟೇರ್‌ಗೆ 36.07 ಕ್ವಿಂಟಲ್ ಹೊಂದಿರುವ DKM-1. ಬರಗುದಲ್ಲಿ ಪ್ರತಿ ಹೆಕ್ಟೇರ್‌ಗೆ 24.66 ಕ್ವಿಂಟಲ್ ಧಾನ್ಯ ಇಳುವರಿ ಹೊಂದಿರುವ DPrM-5 ಸಂಶೋಧಿಸಲಾಗಿದೆ.
ಎಣ್ಣೆಕಾಳುಗಳು: ಹಾಗೆಯೇ, ಎಣ್ಣೆ ಕಾಳಿನಲ್ಲಿ ಎಳ್ಳು ತಳಿಯನ್ನು ಸಂಶೋಧಿಸಿದ್ದು, 8 ಕ್ವಿಂಟಲ್ ಅಧಿಕ ಇಳುವರಿ, ಪ್ರತಿ ಗಿಡಕ್ಕೆ 70 ಕಾಯಿಗಳ ಸಂಖ್ಯೆ, ಶೇ.48ರಷ್ಟು ಎಣ್ಣೆ ಇಳುವರಿ ಹೊಂದಿದೆ. ಜತೆಗೆ ಹೈಬ್ರಿಡ್ ಸೂರ್ಯಕಾಂತಿ (RSFH-700) ಯಲ್ಲೂ ಕೃಷಿ ವಿವಿಯು ಪ್ರಮುಖ ಪ್ರಗತಿ ಸಾಧಿಸಿದೆ. ಈ ವಿಧವು ಪ್ರತಿ ಹೆಕ್ಟೇರ್‌ಗೆ 2,434 ಕೆಜಿ ಬೀಜ ಇಳುವರಿಯನ್ನು ಶೇ. 40ರಷ್ಟು ಎಣ್ಣೆ ಅಂಶ ಮತ್ತು 6 ಗ್ರಾಂ ಬೀಜ ತೂಕದೊಂದಿಗೆ ನೀಡುತ್ತದೆ. ಗಮನಾರ್ಹವಾಗಿ, ಇದು ಸೂರ್ಯಕಾಂತಿ ನೆಕ್ರೋಸಿಸ್ ವೈರಸ್, ರೋಗ ಮತ್ತು ಪುಡಿ ಶಿಲೀಂಧ್ರಕ್ಕೆ ನಿರೋಧಕವಾಗಿದೆ ಎಂದರು.ಇನ್ನು, ಪ್ರತಿ ಹೆಕ್ಟೇರ್‌ಗೆ 17 ಟನ್ ಇಳುವರಿ ಹೊಂದಿರುವ ಬೆಂಡೆಕಾಯಿ (DOV-1) ಮತ್ತು ಪ್ರತಿ ಹೆಕ್ಟೇರ್‌ಗೆ 40 ಟನ್ ಇಳುವರಿ ಹೊಂದಿರುವ ಟೊಮ್ಯಾಟೊ (DTmV-5) ಸಹ ಹೊಸ ತಳಿಗಳಾಗಿ ಬಿಡುಗಡೆಗೆ ಸಿದ್ಧವಾಗಿವೆ ಎಂದರು.
ಸಿರಿಧಾನ್ಯಗಳ ಕೃಷಿಯು ಅದರ ಪೌಷ್ಟಿಕಾಂಶದ ಪ್ರಯೋಜನ ಮತ್ತು ಮೌಲ್ಯವರ್ಧಿತ ಸಾಮರ್ಥ್ಯದಿಂದಾಗಿ ಅದನ್ನು ಬೆಳೆಯಲು ರೈತರು ಮುಂದಾಗುತ್ತಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಸಿರಿಧಾನ್ಯದ ಕೃಷಿಯ ಪ್ರದೇಶವು 13 ಮಿಲಿಯನ್ ಹೆಕ್ಟೇರ್‌ಗಳಿಂದ 14.5 ಮಿಲಿಯನ್ ಹೆಕ್ಟೇರ್‌ಗಳಿಗೆ ಏರಿಕೆಯಾಗಿದ್ದು, ಇದೀಗ ಬಿಡುಗಡೆಯಾಗುತ್ತಿರುವ ಹೊಸ ತಳಿಗಳು ರೈತರನ್ನು ಮತ್ತಷ್ಟು ಪ್ರೋತ್ಸಾಹಿಸಲಿವೆ ಎಂದು ಕೃಷಿ ತಜ್ಞರು ಅಭಿಪ್ರಾಯ ಪಡುತ್ತಾರೆ.