- ಮೈತ್ರಿವನದಲ್ಲಿ ಸಂಶೋಧನೆ-ಸಮಕಾಲೀನ ಆಯಾಮಗಳು ರಾಜ್ಯಮಟ್ಟದ ಕಾರ್ಯಾಗಾರ
ಕನ್ನಡಪ್ರಭ ವಾರ್ತೆ ಹರಿಹರ
ಸಂಶೋಧನೆ ಎಂದರೆ ಕೇವಲ ದತ್ತಾಂಶಗಳ ಸಂಗ್ರಹ ಅಥವಾ ಜೋಡಣೆಯಲ್ಲ. ಅದು ಸ್ಥಾಪಿತ ಗ್ರಹಿಕೆಗಳನ್ನು ಭಗ್ನಗೊಳಿಸಿ, ಮನುಷ್ಯ ಸಂಬಂಧಗಳನ್ನು ಬೆಸೆಯುವ ಹಾಗೂ ಸಮಾಜದ ಬಿಡುಗಡೆಗೆ ಹಾದಿ ತೋರಿಸುವ ಜ್ಞಾನವಾಗಬೇಕು ಎಂದು ವಿಮರ್ಶಕ, ಸಾಂಸ್ಕೃತಿಕ ಚಿಂತಕ ಪ್ರೊ. ರಹಮತ್ ತರೀಕೆರೆ ಹೇಳಿದರು.ನಗರದ ಹೊರವಲಯದ ಮೈತ್ರಿವನದಲ್ಲಿ ಮಾನವ ಬಂಧುತ್ವ ವೇದಿಕೆ ಹಾಗೂ ಪ್ರೊ. ಬಿ.ಕೃಷ್ಣಪ್ಪ ಟ್ರಸ್ಟ್ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ, ಸಂಶೋಧನೆ-ಸಮಕಾಲೀನ ಆಯಾಮಗಳು ಎಂಬ ಎರಡು ದಿನಗಳ ರಾಜ್ಯಮಟ್ಟದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಪ್ರೊ. ಎ.ಬಿ.ರಾಮಚಂದ್ರಪ್ಪ ಮಾತನಾಡಿ, ಸಂವಿಧಾನದ ಆಶಯಗಳನ್ನು ಜಾರಿಗೊಳಿಸಲು ಹಾಗೂ ನೊಂದವರಲ್ಲಿ ಜಾಗೃತಿ ಮೂಡಿಸಲು ಸಚಿವ ಸತೀಶ ಜಾರಕಿಹೊಳಿ ಅವರು ಈ ವೇದಿಕೆ ಸ್ಥಾಪಿಸಿದ್ದಾರೆ. ವಿಶ್ವವಿದ್ಯಾಲಯಗಳು ಮಾಡಬೇಕಾದ ಸಂಶೋಧನಾ ಮಾರ್ಗದರ್ಶನದ ಕೆಲಸವನ್ನು ಇಂದು ವೇದಿಕೆಯು ರಾಜ್ಯದ ಯುವ ಸಂಶೋಧಕರನ್ನು ಒಗ್ಗೂಡಿಸಿ ಮಾಡುತ್ತಿದೆ ಎಂದರು.
ಸಮಾರಂಭದಲ್ಲಿ ಡಾ.ಫಕೀರೇಶ ಹಳ್ಳಳ್ಳಿ, ಡಾ.ನಾಗರಾಜ ಎನ್., ಡಾ.ಮದಕರಿ ನಾಯಕ, ಡಾ.ರೂಪೇಶ್ ಕುಮಾರ್, ಮಾನವ ಬಂಧುತ್ವ ವೇದಿಕೆ ತಾಲೂಕು ಸಂಚಾಲಕ ಭೀಮಪ್ಪ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
- - -
ಸಂಶೋಧನೆಯಲ್ಲಿ ತೊಡಗುವ ಹೊಸ ತಲೆಮಾರಿನ ಯುವಕರು ಅಹಂಕಾರ ಬಿಟ್ಟು ವಿನಯವಂತಿಕೆ ಬೆಳೆಸಿಕೊಳ್ಳಬೇಕು. ಡಾ.ಅಂಬೇಡ್ಕರ್ ಅವರ ಸಂಶೋಧನಾ ಜ್ಞಾನವೇ ಸಮಾಜದ ಮುಕ್ತಿಗೆ ದಾರಿಯಾಗಿದೆ. ಇಂದು ಸಂಶೋಧನೆ ಮತ್ತು ಶಿಕ್ಷಣ ಕ್ಷೇತ್ರಗಳು ವ್ಯಾಪಾರೀಕರಣ ಆಗುತ್ತಿವೆ. ಪ್ರಾಧ್ಯಾಪಕರ ಕೊರತೆ ಎದುರಾಗಿದೆ. ಇಂತಹ ದುಸ್ಥಿತಿಗೆ ತಳ್ಳುತ್ತಿರುವ ಪ್ರಭುತ್ವದ ಕರಾಳತೆಯನ್ನು ಪ್ರಶ್ನಿಸುವ ಮನೋಭಾವ ಸಂಶೋಧಕರು ಬೆಳೆಸಿಕೊಳ್ಳಬೇಕು ಎಂದು ಪ್ರೊ.ರಹಮತ್ ಸಲಹೆ ನೀಡಿದರು.
-27HRR.01: