ವಸತಿಯಲ್ಲೂ ಮುಸ್ಲಿಮರಿಗೆ ಮೀಸಲು: ತುಷ್ಟೀಕರಣದ ಪರಮಾವಧಿ: ಶೆಟ್ಟರ್‌

KannadaprabhaNewsNetwork |  
Published : Jun 21, 2025, 12:49 AM IST
ಸಸಸಸ | Kannada Prabha

ಸಾರಾಂಶ

ರಾಜ್ಯದಲ್ಲಿ ಹಿಂದೂಗಳನ್ನು ಉದ್ದೇಶಪೂರ್ವಕವಾಗಿ ಟಾರ್ಗೆಟ್‌ ಮಾಡಲಾಗುತ್ತಿದೆ. ಮಂಗಳೂರಲ್ಲಿ ಆಗಿರುವ ಘಟನೆಗಳೇ ಇದಕ್ಕೆ ಸಾಕ್ಷಿ.

ಹುಬ್ಬಳ್ಳಿ: ವಸತಿ ಯೋಜನೆಯಲ್ಲಿ ಅಲ್ಪಸಂಖ್ಯಾತರಿಗೆ ಶೇ. 15ರಷ್ಟು ಮೀಸಲಾತಿ ನೀಡುವ ರಾಜ್ಯ ಸರ್ಕಾರದ ನಿರ್ಧಾರ ತುಷ್ಟೀಕರಣದ ಪರಮಾವಧಿ ಎಂದು ಮಾಜಿ ಸಿಎಂ ಹಾಗೂ ಸಂಸದ ಜಗದೀಶ ಶೆಟ್ಟರ್‌ ಕಿಡಿಕಾರಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಂ ಸಮುದಾಯ ಬೆಂಬಲ ನೀಡುತ್ತದೆ. ಬೇರೆ ಧರ್ಮದವರು ಬೆಂಬಲ ನೀಡುವುದಿಲ್ಲ ಎನ್ನುವ ಭಯ ಶುರುವಾಗಿದ್ದರಿಂದಲೇ ಕಾಂಗ್ರೆಸ್ಸಿನವರು ಅಲ್ಪಸಂಖ್ಯಾತರನ್ನು ಓಲೈಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅತಿಯಾದ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮುಂಬರುವ ಚುನಾವಣೆಯಲ್ಲಿ ಕರ್ನಾಟಕದಲ್ಲೂ ಕಾಂಗ್ರೆಸ್‌ ಅಧಿಕಾರ ಕಳೆದುಕೊಳ್ಳಲಿದೆ. ಬೇರೆ ಕಡೆ ಆ ಪಕ್ಷ ಅಧಿಕಾರಕ್ಕೆ ಬರುವುದು ದೂರದ ಮಾತು. ಚುನಾವಣೆಯಲ್ಲಿ ಗೆಲ್ಲಬೇಕು ಎನ್ನುವ ಒಂದೇ ಒಂದು ಉದ್ದೇಶ ಕಾಂಗ್ರೆಸ್‌ನವರು ಹೊಂದಿದ್ದಾರೆ. ಅದೇ ಕಾರಣಕ್ಕೆ ಹಿಂದೆ ಗುತ್ತಿಗೆಯಲ್ಲಿ ಮೀಸಲಾತಿ ನೀಡಿದ್ದರು. ಇದೀಗ ವಸತಿ ಇಲಾಖೆ ಮನೆ ಹಂಚಿಕೆಯಲ್ಲೂ ಮೀಸಲಾತಿ ನೀಡಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಅಭಿಪ್ರಾಯಪಟ್ಟರು.

ರಾಜ್ಯದಲ್ಲಿ ಹಿಂದೂಗಳನ್ನು ಉದ್ದೇಶಪೂರ್ವಕವಾಗಿ ಟಾರ್ಗೆಟ್‌ ಮಾಡಲಾಗುತ್ತಿದೆ. ಮಂಗಳೂರಲ್ಲಿ ಆಗಿರುವ ಘಟನೆಗಳೇ ಇದಕ್ಕೆ ಸಾಕ್ಷಿ. ಜನರಿಂದ ಆಯ್ಕೆಯಾದ ಸರ್ಕಾರ ವೈಯಕ್ತಿಕವಾಗಿ ಒಂದು ಸಮಾಜವನ್ನು ಟಾರ್ಗೆಟ್‌ ಮಾಡುವುದು ಸರಿಯಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿಲ್ಲ. ಸರ್ಕಾರದಲ್ಲಿರುವ ಸಚಿವರು, ರಾಜ್ಯದಲ್ಲಿನ ಶಾಂತಿ, ಸುವ್ಯವಸ್ಥೆಗೆ ಗಮನ ಹರಿಸುವುದು ಬಿಟ್ಟು ಸಿಎಂ ಕುರ್ಚಿಗೆ ಹೊಡೆದಾಟ ನಡೆಸಿದ್ದಾರೆ. ಅದೇ ರೀತಿ ಸಚಿವ ಸ್ಥಾನ ಉಳಿಸಿಕೊಳ್ಳಲು ಫೈಟ್‌ ನಡೆಸಿದ್ದಾರೆ. ಇದೇ ಕಾರಣಕ್ಕೆ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಮಂಜೂರಾಗಿರುವ ಕೆಲಸಗಳನ್ನೇ ಮಾಡುತ್ತಾ ಬರುತ್ತಿದ್ದಾರೆ ಎಂದರು.

ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಲೋಕಾಯುಕ್ತ ಎಸ್ಪಿ ಒಬ್ಬರ ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ. ಬೇಲಿಯೇ ಎದ್ದು ಹೊಲ ಮೇಯ್ದ ಸ್ಥಿತಿ ನಿರ್ಮಾಣವಾಗಿದೆ. ಕಂದಾಯ ಇಲಾಖೆಯ ಭ್ರಷ್ಟಾಚಾರವನ್ನು ಖುದ್ದು ಕೃಷ್ಣ ಭೈರೇಗೌಡರೇ ಹೊರ ಹಾಕಿದ್ದಾರೆ. ಇಂತಹ ಕೆಲಸಕ್ಕೆ ಇಷ್ಟು ಹಣ ಅಂತ ಬೋರ್ಡ್‌ ಹಾಕಿ ಅಂತ ಬಹಿರಂಗವಾಗಿ ಕಿಡಿಕಾರಿದ್ದಾರೆ. ಅಷ್ಟರ ಮಟ್ಟಿಗೆ ರಾಜ್ಯದಲ್ಲಿ ಪರಿಸ್ಥಿತಿ ಹದಗೆಟ್ಟಿದೆ ಎಂದು ಹೇಳಿದರು.

PREV

Recommended Stories

ಧರ್ಮಸ್ಥಳ ಕೇಸ್‌ : ಅರ್ಧ ಕೋಟಿ ವ್ಯಯ?
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ : ರಾಜ್ಯದಲ್ಲಿ 1 ವಾರ ಮಳೆ