ಸತತ ವರ್ಷಧಾರೆ ಜಲಾಶಯಗಳಿಗೆ ತಂತು ಜೀವಕಳೆ

KannadaprabhaNewsNetwork |  
Published : Jun 28, 2024, 12:51 AM IST
ಪೋಟೊ: 27ಎಸ್‌ಎಂಜಿಕೆಪಿ05ಶಿವಮೊಗ್ಗ ತಾಲೂಕಿನ ಗಾಜನೂರಿನಲ್ಲಿರುವ ತುಂಗಾ ಜಲಾಶಯ ಭರ್ತಿಯಾಗಿದ್ದು, ಗುರುವಾರ ಎರಡು ಗೇಟ್ ತೆರೆದು ನದಿಗೆ ನೀರು ಹರಿಸಲಾಯಿತು.  | Kannada Prabha

ಸಾರಾಂಶ

ಶಿವಮೊಗ್ಗ ತಾಲೂಕಿನ ಗಾಜನೂರಿನಲ್ಲಿರುವ ತುಂಗಾ ಜಲಾಶಯ ಭರ್ತಿಯಾಗಿದ್ದು, ಗುರುವಾರ ಎರಡು ಗೇಟ್ ತೆರೆದು ನದಿಗೆ ನೀರು ಹರಿಸಲಾಯಿತು. ಇನ್ನು ಸಾಗರ ತಾಲೂಕಿನಲ್ಲಿರುವ ಜೋಗ ಜಲಪಾತದತ್ತ ಈಗ ಪ್ರವಾಸಿಗರ ದಂಡು ಹರಿದು ಬರುತ್ತಿದೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕಳೆದ ವರ್ಷ ತೀವ್ರ ಮಳೆಯ ಕೊರತೆಯಿಂದ ಬತ್ತಿ ಹೋಗಿದ್ದ ಜಲಾಶಯಗಳು, ಈ ವರ್ಷ ಸುರಿಯುತ್ತಿರುವ ಮಳೆಗೆ ಮೈದುಂಬಿವೆ. ಜಿಲ್ಲೆಯಾದ್ಯಂತ ಕಳೆದ ಒಂದು ವಾರದಿಂದ ಜೋರು ಮಳೆ ಸುರಿಯುತ್ತಿದ್ದು, ಜಲಾಶಯಗಳಿಗೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿದೆ. ಜೂನ್ 2 ರಿಂದ ಜಿಲ್ಲೆಯಲ್ಲಿ ಮುಂಗಾರು ಆಗಮಿಸಿದ್ದು, ಈವರೆಗೆ ಉತ್ತಮ ಮಳೆಯಾಗಿದೆ. ಇದರಿಂದ ಜಿಲ್ಲೆಯ ಪ್ರಮುಖ ಜಲಾಶಯದಲ್ಲೊಂದಾದ ತುಂಗಾ ಜಲಾಶಯ ಸಂಪೂರ್ಣ ಭರ್ತಿಯಾಗಿದೆ.

ತುಂಗೆ ಮೈದುಂಬಿ ಹರಿಯುತ್ತಿರುವ ಕಾರಣ ನೀರಿನ ಒಳಹರಿವು ಪ್ರಮಾಣ ಹೆಚ್ಚಳವಾಗಿದ್ದು, 588.24 ಮೀಟರ್‌ ಎತ್ತರ ಹೊಂದಿರುವ ಗಾಜನೂರು ಜಲಾಶಯ ಸಂಪೂರ್ಣ ಭರ್ತಿಯಾಗಿರುವ ಕಾರಣ ಗುರುವಾರ 2 ಗೇಟ್ ಮೂಲಕ 1 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ.

ಮೂರ್ನಾಲ್ಕು ದಿನಗಳಿಂದ ಶೃಂಗೇರಿ, ಕಿಗ್ಗಾ, ತೀರ್ಥಹಳ್ಳಿ ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಇದರಿಂದಾಗಿ ತುಂಗಾ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಈ ವರ್ಷದಲ್ಲಿ ಮೊದಲ ಬಾರಿಗೆ ತುಂಗಾ ನದಿ ತುಂಬಿ ಹರಿಯುತ್ತಿದೆ.

ಇನ್ನೂ ಭದ್ರಾ ಜಲಾಶಯದಲ್ಲೂ ಒಳ ಹರಿವು ಹೆಚ್ಚಾಗಿದ್ದು, ಗುರುವಾರ 4082 ಕ್ಯೂಸೆಕ್‌ ನೀರು ಹರಿದು ಬಂದಿದ್ದು, ಜಲಾಶಯ ಮಟ್ಟ 120.8 (ಗರಿಷ್ಟ ಮಟ್ಟ 183) ಅಡಿಗೆ ತಲುಪಿದೆ. ಇನ್ನೂ ಲಿಂಗನಮಕ್ಕಿ ಜಲಾಶಯಕ್ಕೆ 16984 ಕ್ಯೂಸೆಕ್‌ ನೀರು ಹರಿದು ಬರುತ್ತಿದ್ದು, ಜಲಾಶಯ ಮಟ್ಟ 1747 (ಗರಿಷ್ಠ: 1819) ಅಡಿಗೆ ತಲುಪಿದೆ. ಕಳೆದ ವರ್ಷ ಈ ಅವಧಿಗೆ 1740 ಅಡಿಯಷ್ಟು ಜಲಾಶಯದಲ್ಲಿ ನೀರು ಸಂಗ್ರಹವಿತ್ತು. ಕಳೆಗಟ್ಟಿದ ಜೋಗದ ವೈಭವ

ವಿಶ್ವ ಪ್ರಸಿದ್ಧ ಜೋಗ ಜಲಪಾತ ಮತ್ತೆ ಧುಮ್ಮಿಕ್ಕುತ್ತಿದೆ. ಕಳೆದ ವರ್ಷ ಮಳೆಯಿಲ್ಲದೆ ಬರಡಾಗಿ ನಿಂತಿದ್ದ ಜೋಗದ ಗುಂಡಿಗೆ ಈ ವರ್ಷ ಜೀವಕಳೆ ಬಂದಿದೆ.

ಮತ್ತೆ ಕಳೆಗಟ್ಟಿದ ಜೋಗದ ವೈಯ್ಯಾರ ನೋಡಲು ಪ್ರವಾಸಿಗರ ದಂಡು ಆಗಮಿಸಲು ಆರಂಭವಾಗಿದೆ. ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಉತ್ತಮವಾಗಿ ಮಳೆ ಸುರಿಯುತ್ತಿದೆ. ಮೋಡಗಟ್ಟಿದ ವಾತಾವರಣದಿಂದ ಜೋಗ ಜಲಪಾತದಲ್ಲಿ ಮತ್ತೆ ಕಳೆ ತುಂಬಿದೆ. ಧುಮ್ಮಿಕ್ಕಿ ಬೀಳುತ್ತಿರುವ ಹಾಲ್ನೊರೆಯಂತಹ ನೀರಿನ ಸೊಬಗನ್ನು ಕಣ್ತುಂಬಿಕೊಳ್ಳುತ್ತಿರುವ ಪ್ರವಾಸಿಗರು ಹರಿದು ಬರುತ್ತಿದ್ದಾರೆ.

ಆಗುಂಬೆ ಘಾಟಿಯಲ್ಲಿ ಭಾರಿ ವಾಹನ ಸಂಚಾರ ನಿಷೇಧ

ಶಿವಮೊಗ್ಗ : ಜಿಲ್ಲೆಯ ಮಲೆನಾಡು ಭಾಗದಲ್ಲಿ ವಾರದಿಂದ ಜೋರು ಮಳೆಯಾಗುತ್ತಿದ್ದು, ಆಗುಂಬೆಯಲ್ಲಿ ಭೂ ಕುಸಿತ ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ ಜೂ.27ರಿಂದ ಸೆಪ್ಟೆಂಬರ್‌ 15ರವರೆಗೆ ಭಾರಿ ವಾಹನ ಸಂಚಾರ ನಿಷೇಧಿಸಿ, ಬದಲಿ ಮಾರ್ಗವನ್ನು ಗುರುತಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶ ಹೊರಡಿಸಿದ್ದಾರೆ.ಜಿಲ್ಲೆ ಸೇರಿದಂತೆ ಸರಕು ಸಾಗಣೆ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಬದಲಿ ಮಾರ್ಗವಾಗಿ ತೀರ್ಥಹಳ್ಳಿ – ಉಡುಪಿ ಮಾರ್ಗದಲ್ಲಿ ಸಂಚರಿಸುವ ಭಾರಿ ವಾಹನಗಳು ತೀರ್ಥಹಳ್ಳಿ – ಮಾಸ್ತಿಕಟ್ಟೆ – ಸಿದ್ದಾಪುರ – ಕುಂದಾಪುರ – ಉಡುಪಿ ಮಾರ್ಗದಲ್ಲಿ ಸಂಚರಿಸಬೇಕು. ಉಡುಪಿ – ತೀರ್ಥಹಳ್ಳಿ ಮಾರ್ಗದಲ್ಲಿ ಸಂಚರಿಸುವ ಭಾರಿ ವಾಹನಗಳು ಉಡುಪಿ – ಕುಂದಾಪುರ – ಸಿದ್ದಾಪುರ – ಮಾಸ್ತಿಕಟ್ಟೆ – ತೀರ್ಥಹಳ್ಳಿ ಮಾರ್ಗದಲ್ಲಿ ಸಂಚರಿಸುವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.ತೀರ್ಥಹಳ್ಳಿಯಲ್ಲಿ ಶೇ.29 ಮಳೆ ಕೊರತೆ

ತೀರ್ಥಹಳ್ಳಿ: ತಾಲೂಕಿನಲ್ಲಿ ಕಳೆದ ಬಾರಿಗಿಂತ ಈ ಬಾರಿ ಮುಂಗಾರು ಮಳೆ ಉತ್ತಮವಾಗಿದ್ದರೂ, ವಾಡಿಕೆಗಿಂತ ಶೇ.29 ಮಳೆ ಕೊರತೆಯಾಗಿದೆ. ದಕ್ಷಿಣದ ಚಿರಾಪುಂಜಿ ಖ್ಯಾತಿಯ ಆಗುಂಬೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಮಳೆ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದ್ದು, ಈ ವರ್ಷ ಕೂಡಾ ಶೇ. 52 ಮಳೆ ಕೊರತೆಯಾಗಿದೆ.ತಾಲೂಕಿನ ವಾಡಿಕೆಯ ಮಳೆ 667 ಮಿಮಿ ಆಗಿದ್ದು, ಜೂನ್ 24 ವರೆಗಿನ ವರದಿಯಂತೆ 473 ಮಿಮಿ ಮಳೆ ಆಗಿದೆ. ಮಂಡಗದ್ದೆ ಹೋಬಳಿಯನ್ನು ಹೊರತು ಪಡಿಸಿ ಉಳಿದೆಲ್ಲಾ ಹೋಬಳಿ ವ್ಯಾಪ್ತಿಯಲ್ಲೂ ವಾಡಿಕೆಗಿಂತ ಮಳೆ ಕಡಿಮೆಯಾಗಿದೆ.

ತಾಲೂಕಿನಲ್ಲಿ ಕೆಲವೆಡೆ ಗಾಳಿಮಳೆಯಿಂದಾಗಿ ವಾಸದ ಮನೆ ಮತ್ತು ಕೊಟ್ಟಿಗೆಗಳ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ. ಆಗುಂಬೆ ಅರಳಸುರುಳಿ ಹಾಗೂ ಕಟ್ಟೆಹಕ್ಕಲು ಮತ್ತಿತರ ಭಾಗದಲ್ಲಿ ವಿದ್ಯುತ್ ಮಾರ್ಗದ ಮೇಲೆ ಮರ ಬಿದ್ದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾದ ಬಗ್ಗೆ ವರದಿಯಾಗಿದೆ. ಉಳಿದಂತೆ ಯಾವುದೇ ಗಂಭೀರ ಹಾನಿಯಾದ ಬಗ್ಗೆ ವರದಿಯಾಗಿಲ್ಲ.ದಿನದ ಮಳೆ ಸರಾಸರಿ : ಗುರುವಾರ ಬೆಳಗಿನವರೆಗೆ 24 ತಾಸು ಅವಧಿಯಲ್ಲಿ ತೀರ್ಥಹಳ್ಳಿಯಲ್ಲಿ 49.8 ಮಿಮಿ ಮಳೆಯಾಗಿದೆ.

PREV

Recommended Stories

ಗುತ್ತಲದಲ್ಲಿ ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಹಳಿಯಾಳದ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕ