ಕರ್ನಾಟಕ ಗೃಹ ಮಂಡಳಿಯಿಂದ ನಾಗಮಂಗಲ ತಾಲೂಕಿನ ಹಾಲಾಳು-ಇರುಬನಹಳ್ಳಿ ಗ್ರಾಮದಲ್ಲಿ 108.50 ಕೋಟಿ ರು. ಯೋಜನಾ ವೆಚ್ಚದಲ್ಲಿ ವಸತಿ ಬಡಾವಣೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ವಿಧಾನ ಪರಿಷತ್‌ನಲ್ಲಿ ಮಾಹಿತಿ ನೀಡಿದ ಸಚಿವ ಜಮೀರ್ ಅಹ್ಮದ್ ಖಾನ್.
ಕನ್ನಡಪ್ರಭ ವಾರ್ತೆ ಮಂಡ್ಯ
ಕರ್ನಾಟಕ ಗೃಹ ಮಂಡಳಿಯಿಂದ ನಾಗಮಂಗಲ ತಾಲೂಕಿನ ಹಾಲಾಳು-ಇರುಬನಹಳ್ಳಿ ಗ್ರಾಮದಲ್ಲಿ 108.50 ಕೋಟಿ ರು. ಯೋಜನಾ ವೆಚ್ಚದಲ್ಲಿ ವಸತಿ ಬಡಾವಣೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.ವಿಧಾನ ಪರಿಷತ್ತಿನಲ್ಲಿ ಶಾಸಕ ಮಧು ಜಿ.ಮಾದೇಗೌಡ ಅವರು ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, ಸದರಿ ಬಡಾವಣೆಯಲ್ಲಿ ವಿವಿಧ ವರ್ಗಗಳ ಒಟ್ಟು 1,154 ನಿವೇಶನಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಈ ಯೋಜನೆಗೆ 60 ಭೂಮಾಲೀಕರು ಜಮೀನನ್ನು ಬಿಟ್ಟುಕೊಟ್ಟಿದ್ದಾರೆ ಎಂದಿದ್ದಾರೆ.
ಇರುಬನಹಳ್ಳಿಯಲ್ಲಿ 90 ಎಕರೆ 35 ಗುಂಟೆ ಹಾಗೂ ಹಾಲಾಳು ಗ್ರಾಮದಲ್ಲಿ 8 ಎಕರೆ ಜಮೀನನ್ನು ಭೂಸ್ವಾಧೀನಪಡಿಸಲಾಗಿದೆ.
ಪ್ರತಿ ಎಕರೆಗೆ ಸಾಮಾನ್ಯ ಐತೀರ್ಪಿನಂತೆ ರು. 5,67,504 ಗಳಂತೆ ಭೂಪರಿಹಾರ ನಿಗದಿಪಡಿಸಲಾಗಿದೆ. ಸರ್ವೇ ನಂ.64ರಲ್ಲಿ 2 ಎಕರೆ 6 ಗುಂಟೆ ಜಮೀನಿಗೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣವಿದೆ. ಈ ಸಂಬಂಧ ಮಂಡ್ಯದ ನ್ಯಾಯಾಲಯದಲ್ಲಿ ರು.12,20,133 ಗಳನ್ನು ಠೇವಣಿಕರಿಸಲಾಗಿದೆ ಎಂದಿದ್ದಾರೆ.
ಜಮೀನು ನೀಡಿ ಭೂಪರಿಹಾರ ಪಡೆಯದ ಭೂ ಮಾಲೀಕರಿಗೆ 40:60 ರ ಅನುಪಾತದಡಿ ಅಭಿವೃದ್ಧಿಪಡಿಸಿದ ನಿವೇಶನಗಳನ್ನು ಕಾಯ್ದಿರಿಸಲಾಗಿರುತ್ತದೆ. 51 ಭೂ ಮಾಲೀಕರು ನಿವೇಶನ ಪಡೆಯಲು ಇಚ್ಛಿಸಿ ಒಪ್ಪಿಗೆ ಪತ್ರ ನೀಡಿರುತ್ತಾರೆ. ಉಳಿದ 9 ಭೂ ಮಾಲೀಕರು ಒಪ್ಪಿಗೆ ಪತ್ರ ನೀಡಿರುವುದಿಲ್ಲ. ಆದರೂ, ಅವರಿಗೂ ಸಹ 40:60ರ ಅನುಪಾತದಲ್ಲಿ ಅಭಿವೃದ್ಧಿಪಡಿಸಿದ ನಿವೇಶನಗಳನ್ನು ಸದರಿಯವರ ಜಮೀನಿನಲ್ಲಿ ಕಾಯ್ದಿರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಈಗಾಗಲೇ 416 ವಿವಿಧ ವರ್ಗದ ನಿವೇಶನಗಳನ್ನು ಇ-ಲಾಟರಿ ಮುಖಾಂತರ ಹಂಚಿಕೆ ಮಾಡಲಾಗಿದೆ. ಸದರಿ ವಸತಿ ಬಡಾವಣೆಯಲ್ಲಿ ರಸ್ತೆ, ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ, ಮೇಲ್ಮಟ್ಟದ ನೀರಿನ ಜಲ ಸಂಗ್ರಹಗಾರ, ಉದ್ಯಾನ ಸೇರಿದಂತೆ ಹಲವು ಮೂಲಸೌಕರ್ಯ ಕಲ್ಪಿಸಲಾಗಿರುತ್ತದೆ ಎಂದು ತಿಳಿಸಿದ್ದಾರೆ.ಮಂಡ್ಯ ಕೃಷಿ ವಿಜ್ಞಾನಗಳ ವಿವಿ: 41 ಬೋಧಕ ಹುದ್ದೆಗಳಿಗೆ ನೇಮಕಾತಿ
ಮಂಡ್ಯ: ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯ ಮಂಡ್ಯ ಇಲ್ಲಿ ಖಾಲಿ ಇರುವ 41 ಬೋಧಕ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ ಎಂದು ಕೃಷಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದ್ದಾರೆ.
ಶಾಸಕ ಮಧುಜಿ.ಮಾದೇಗೌಡ ಅವರ ಪ್ರಶ್ನೆಗೆ ಉತ್ತರಿಸಿರುವ ಸಚಿವರು, ವಿವಿಧ ವಿಷಯಗಳ 29 ಸಹಾಯಕ ಪ್ರಾಧ್ಯಾಪಕ, 6 ಸಹ ಪ್ರಾಧ್ಯಾಪಕ ಹುದ್ದೆಗಳ ಜೊತೆಗೆ ಅಖಿಲ ಭಾರತ ಸುಸಂಘಟಿತ ಸಂಶೋಧನಾ ಪ್ರಾಯೋಜನೆಯಲ್ಲಿನ 6 ಸಹ ಪ್ರಾಧ್ಯಾಪಕ ಹುದ್ದೆಗಳು ಸೇರಿದಂತೆ 41 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲಾಗುತ್ತಿದೆ ಎಂದಿದ್ದಾರೆ.
ವಿವಿಗೆ ಒಟ್ಟು 793 ಹುದ್ದೆಗಳು ಮಂಜೂರಾಗಿದ್ದು, 351 ಹುದ್ದೆಗಳು ಭರ್ತಿಯಾಗಿದ್ದು 442 ಹುದ್ದೆಗಳು ಖಾಲಿ ಇವೆ ಎಂದು ವಿವರಿಸಿದ್ದಾರೆ. 12 ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಮತ್ತು 8 ವಿಷಯಗಳಲ್ಲಿ ಸಂಶೋಧನೆ (ಪಿಎಚ್.ಡಿ ಪದವಿ) ಕೈಗೊಳ್ಳಲು ಅವಕಾಶವಿದೆ ಎಂದು ಉತ್ತರಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.