ಸಮಾನ ಸೌಲಭ್ಯ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ವಸತಿ ಶಾಲಾ ಶಿಕ್ಷಕರ ಪ್ರತಿಭಟನೆ

KannadaprabhaNewsNetwork |  
Published : Jun 01, 2025, 01:48 AM IST
31ಎಚ್ಎಸ್ಎನ್14 : ಅಪರ ಜಿಲ್ಲಾಧಿಕಾರಿ ಶಾಂತಲಾ ಅವರಿಗೆ ಮನವಿ ಸಲ್ಲಿಸುತ್ತಿರುವುದು. | Kannada Prabha

ಸಾರಾಂಶ

ಕರ್ನಾಟಕ ಆರೋಗ್ಯ ಸಂಜೀವಿನಿ ಸೌಲಭ್ಯ ನಮಗೂ ಸಿಗಬೇಕು. ಮರಣ- ನಿವೃತ್ತಿ ಉಪಧನ(ಡಿಸಿಆರ್‌ಜಿ) ನಮಗೂ ಸಿಗಬೇಕು ಎಂದು ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಹಾಸನ

ಸಮಾನ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಹಾಗೂ ತಮ್ಮನ್ನೂ ಸರ್ಕಾರಿ ನೌಕರರೆಂದು ಪರಿಗಣಿಸಬೇಕೆಂದು ಆಗ್ರಹಿಸಿ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ಕರ್ನಾಟಕ ವಸತಿ ಶಾಲಾ ಶಿಕ್ಷಣ ಸಂಸ್ಥೆಗಳ ಸಂಘದಿಂದ ಶನಿವಾರ ಮಧ್ಯಾಹ್ನ ಪ್ರತಿಭಟಿಸಿ ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ ಅವರಿಗೆ ಮನವಿ ಸಲ್ಲಿಸಲಾಯಿತು.

ಸಂಘದ ಜಿಲ್ಲಾಧ್ಯಕ್ಷೆ ಸಿ.ಎನ್.ಉಷಾ ಮಾತನಾಡಿ, ಮೇ ೨೬ ರಿಂದ ೨೮ ರವರೆಗೆ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಹೋರಾಟ ಮಾಡಲಾಗಿದ್ದು, ತರಗತಿ ಬಹಿಷ್ಕರಿಸಿ ಈಗ ಜಿಲ್ಲಾ ಮಟ್ಟದಲ್ಲಿ ಪ್ರತಿಭಟಿಸಲಾಗಿದೆ. ಇಷ್ಟಕ್ಕೂ ಸೂಕ್ತ ರೀತಿಯ ಸ್ಪಂದನೆ ಸಿಗದೇ ಹೋದರೆ ಜೂ.೨ ರಿಂದ ರಾಜ್ಯಾದ್ಯಂತ ಡೀಸಿ ಕಚೇರಿಗಳ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಲು ತೀರ್ಮಾನ ಮಾಡಿದ್ದೇವೆ ಎಂದರು. ಬೇರೆ ವಸತಿ ಶಾಲೆಗಳ ಶಿಕ್ಷಕರಿಗೆ ಹೋಲಿಸಿದರೆ ನಾವು ಅನೇಕ ರೀತಿಯ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ. ಅವುಗಳನ್ನು ಈಡೇರಿಸಿ ಎಂದು ರಾಜ್ಯಾದ್ಯಂತ ಕ್ರೈಸ್ ಸಂಸ್ಥೆಯಡಿ ಇರುವ ಸುಮಾರು ೬೮೦೦ ಮಂದಿ ಇರುವ ಕಾಯಂ ಶಿಕ್ಷಕರು ಕಳೆದ ೧೩ ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂ, ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದರು.

ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ಬಡ ಪ್ರತಿಭಾವಂತ ಮಕ್ಕಳು ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಏಕಲವ್ಯ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಮೊದಲಾದ ವಸತಿ ಶಾಲೆಗಳಲ್ಲಿ ಕಲಿಯುತ್ತಿದ್ದು, ಓದುವುದರಿಂದ ಹಿಡಿದು, ಪ್ರತಿಭಾ ಕಾರಂಜಿ ಮೊದಲಾದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ನಮ್ಮ ಶಾಲೆಗಳ ಮಕ್ಕಳೇ ಉತ್ತಮ ಪ್ರತಿಭೆ ಪ್ರದರ್ಶನ ಮಾಡುತ್ತಿದ್ದಾರೆ. ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ನಮ್ಮ ಶಾಲೆಯ ಮಕ್ಕಳೂ ರಾಜ್ಯಮಟ್ಟದ ರ್‍ಯಾಂಕ್ ಪಡೆಯುತ್ತಿದ್ದಾರೆ. ನಾವು ನೀಡುವ ಗುಣಾತ್ಮಕ ಶಿಕ್ಷಣದಿಂದ ಸರ್ಕಾರಿ ಶಾಲೆಗಳಿಗಿಂತಲೂ ನಮ್ಮ ಶಾಲೆಗಳ ಫಲಿತಾಂಶ ಶೇ.೯೧ ಕ್ಕಿಂತಲೂ ಅಧಿಕ ಇದೆ. ಇದಕ್ಕೆ ನಾವು ೨೪*೭ ಮಾದರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದೂ ಕಾರಣ. ಆದರೂ ನಮಗೆ ಕೊಡಬೇಕಾದ ಸೌಲಭ್ಯ ಕೊಡದೆ ತಾರತಮ್ಯ ಮಾಡಲಾಗುತ್ತಿದೆ ಎಂದು ದೂರಿದರು. ನಾವು ೬ ರಿಂದ ೧೦ನೇ ತರಗತಿವರೆಗೂ ಬೋಧನೆ ಮಾಡುತ್ತಿದ್ದೇವೆ. ಗುಣಮಟ್ಟ ಹಾಗೂ ಮೌಲ್ಯಯುತ ಶಿಕ್ಷಣ ನೀಡುತ್ತಿರುವುದರಿಂದ ೫೨ ಸಾವಿರ ಮಕ್ಕಳು ಸಾಮರ್ಥ್ಯದ ವಸತಿ ಶಾಲೆಗಳ ಪ್ರವೇಶಕ್ಕಾಗಿ ಬರೋಬ್ಬರಿ ೨.೭೦ ಲಕ್ಷ ಅರ್ಜಿ ಬಂದಿವೆ. ಒಟ್ಟಾರೆಯಾಗಿ ನಾವು ಸರ್ಕಾರಿ ಶಿಕ್ಷಕರಿಗಿಂತ ಹೆಚ್ಚು ಕೆಲಸ ಮಾಡಿದರೂ, ಅವರಂತೆಯೇ ಸಮಾನವಾದ ಸೌಲಭ್ಯ ಇಲ್ಲವಾಗಿದೆ. ಜಿ.ಕುಮಾರನಾಯಕ್ ವರದಿ ಸೌಲಭ್ಯ ನಮಗೆ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಶಿಕ್ಷಕರ ಬೇಡಿಕೆಗಳೇನು:

ಸಂಘದ ಉಪಾಧ್ಯಕ್ಷ ಮಂಜುನಾಥ್ ಮಾತನಾಡಿ, ನಮ್ಮನ್ನೂ ಸರ್ಕಾರಿ ನೌಕರರೆಂದು ಪರಿಗಣಿಸುವಂತಾಗಲು ನಿರ್ದೇಶನಾಲಯ ರಚನೆ ಮಾಡಬೇಕು. ಇಲ್ಲವಾದರೆ ಆಯಾಯ ಇಲಾಖೆಗಳ ವ್ಯಾಪ್ತಿಗೆ ನಮ್ಮ ಶಾಲೆಗಳನ್ನು ವಿಲೀನ ಮಾಡಬೇಕು ಎಂದು ಒತ್ತಾಯಿಸಿದರು. ಅಪಘಾತ ಮತ್ತಿತರ ಸಂದರ್ಭಗಳಲ್ಲಿ ನೆರವಾಗಲು ಜ್ಯೋತಿ ಸಂಜೀವಿನಿ ಆರೋಗ್ಯ ಯೋಜನೆ ವ್ಯಾಪ್ತಿಗೆ ನಮ್ಮನ್ನೂ ಸೇರಿಸಬೇಕು. ನಮ್ಮ ತಿಂಗಳ ಸಂಬಳದಲ್ಲಿ ಬಾಡಿಗೆ ಭತ್ಯೆಯನ್ನು ಕಟಾವಣೆ ಮಾಡಬಾರದು. ಬೇರೆ ವಸತಿ ಶಾಲೆಗಳ ಶಿಕ್ಷಕರಿಗೆ ನೀಡುತ್ತಿರುವಂತೆ ಸಂಪೂರ್ಣ ಸಂಬಳ ಪಾವತಿ ಮಾಡಬೇಕು. ಇತರರಿಗೆ ಕೊಡುತ್ತಿರುವಂತೆಯೇ ನಮಗೂ ಶೇ.೧೦ ರಷ್ಟು ವಿಶೇಷ ಭತ್ಯೆ ನೀಡಬೇಕು ಎಂದು ಆಗ್ರಹಿಸಿದರು.

ಹಾಗೆಯೇ ಕರ್ನಾಟಕ ಆರೋಗ್ಯ ಸಂಜೀವಿನಿ ಸೌಲಭ್ಯ ನಮಗೂ ಸಿಗಬೇಕು. ಮರಣ- ನಿವೃತ್ತಿ ಉಪಧನ(ಡಿಸಿಆರ್‌ಜಿ) ನಮಗೂ ಸಿಗಬೇಕು ಎಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ವಸತಿ ಶಾಲಾ ಶಿಕ್ಷಣ ಸಂಸ್ಥೆಗಳ ಸಂಘದ ಪದಾಧಿಕಾರಿಗಳಾದ ಶಂಕರ್, ನೇಹಾಲ್, ಕೀರ್ತಿ, ಶಿಲ್ಪಾ, ಧಯಾನಂದ್ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!