ಹೊರಟ್ಟಿಗೆ ಭಯಪಡಿಸಿ ರಾಜೀನಾಮೆ : ಬಿಜೆಪಿ, ಜೆಡಿಎಸ್‌

KannadaprabhaNewsNetwork |  
Published : Aug 10, 2026, 02:15 AM IST
BJP

ಸಾರಾಂಶ

ವಿಧಾನಪರಿಷತ್‌ ಸಭಾಪತಿಯಾಗಿದ್ದ ಬಸವರಾಜ ಹೊರಟ್ಟಿ ಅವರಿಂದ ಬಲವಂತವಾಗಿ ರಾಜೀನಾಮೆ ಪಡೆಯಲಾಗಿದ್ದು, ಆಡಳಿತ ಪಕ್ಷದ ನಾಯಕರು ಗೂಂಡಾಗಳಂತೆ ವರ್ತಿಸಿದ್ದಾರೆ ಎಂದು ಆರೋಪಿಸಿ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ ನಿಯೋಗ ರಾಜ್ಯಪಾಲರಿಗೆ ದೂರು ನೀಡಿದೆ.

 ಬೆಂಗಳೂರು : ವಿಧಾನಪರಿಷತ್‌ ಸಭಾಪತಿಯಾಗಿದ್ದ ಬಸವರಾಜ ಹೊರಟ್ಟಿ ಅವರಿಂದ ಬಲವಂತವಾಗಿ ರಾಜೀನಾಮೆ ಪಡೆಯಲಾಗಿದ್ದು, ಆಡಳಿತ ಪಕ್ಷದ ನಾಯಕರು ಗೂಂಡಾಗಳಂತೆ ವರ್ತಿಸಿದ್ದಾರೆ ಎಂದು ಆರೋಪಿಸಿ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ ನಿಯೋಗ ರಾಜ್ಯಪಾಲರಿಗೆ ದೂರು ನೀಡಿದೆ.

ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ರಾಜೀನಾಮೆ

ಭಾನುವಾರ ಲೋಕಭವನಕ್ಕೆ ತೆರಳಿದ ಪರಿಷತ್ತಿನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸದಸ್ಯರಾದ ಪಿ.ಎಚ್‌.ಪೂಜಾರ್‌, ಟಿ.ಎ.ಶರವಣ, ಗೋಪಿನಾಥ ರೆಡ್ಡಿ ಮತ್ತಿತರರು ರಾಜ್ಯಪಾಲರಾದ ಥಾವರ್‌ಚಂದ್ ಗೆಹಲೋತ್ ಅವರನ್ನು ಭೇಟಿ ಮಾಡಿ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ರಾಜೀನಾಮೆ ಪಡೆಯಲಾಗಿದ್ದು, ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಹೊರಟ್ಟಿ ಅವರ ರಾಜೀನಾಮೆಯನ್ನು ಒತ್ತಾಯವಾಗಿ ಪಡೆಯಲಾಗಿದೆ. ಅವರಿಗೆ ಭಯ ಹುಟ್ಟಿಸಿ ಸಹಿ ಹಾಕಿಸಿಕೊಂಡಿದ್ದಾರೆ. ಹೊರಟ್ಟಿ ಅವರು ಇದೇ ತಿಂಗಳ 14ರಂದು ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದರೂ ಅವಸರದಲ್ಲಿ ಅವರಿಂದ ರಾಜೀನಾಮೆ ಪಡೆದಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತಿತರರ ವಿರುದ್ಧ ಸಂವಿಧಾನದ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರಿಗೆ ಮನವಿ ಮಾಡಿರುವುದಾಗಿ ತಿಳಿಸಿದರು.

ಗೂಂಡಾಗಳಂತೆ ವರ್ತಿಸಿ ಅಸಾಂವಿಧಾನಿಕವಾಗಿ ರಾಜೀನಾಮೆ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಹಾಗೂ ಕೆಲವು ವಿಧಾನಪರಿಷತ್ ಸದಸ್ಯರೂ ಸೇರಿ ಒಟ್ಟು 30 ಮುಖಂಡರು ಹೊರಟ್ಟಿ ಅವರ ಕೊಠಡಿಗೆ ಹೋಗಿ ತೀವ್ರವಾದ ರಾಜಕೀಯ ಒತ್ತಡ ಹೇರಿ ಗೂಂಡಾಗಳಂತೆ ವರ್ತಿಸಿ ಅಸಾಂವಿಧಾನಿಕವಾಗಿ ರಾಜೀನಾಮೆ ಪಡೆದಿದ್ದಾರೆ. ಆಪ್ತ ಸಹಾಯಕರನ್ನು ಕರೆದು ಲೆಟರ್ ಹೆಡ್ ತರಿಸಿ ಟೈಪ್ ಮಾಡಿಸಿ ದಿನಾಂಕವನ್ನು ಖಾಲಿ ಬಿಟ್ಟು ಸಹಿ ಹಾಕಿಸಿಕೊಂಡು ನಂತರ ದಿನಾಂಕವನ್ನು ಪೆನ್ನಿನಲ್ಲಿ ತಿದ್ದಿದ್ದಾರೆ ಎಂದು ತಿಳಿಸಿದರು.

ಭಯದ ವಾತಾವರಣ ಆಗಿದ್ದರಿಂದ ಅನಿವಾರ್ಯವಾಗಿ ರಾಜೀನಾಮೆ ನೀಡಿದೆ. ನನ್ನ ಛೇಂಬರ್ ಒಳಗೆ ನುಗ್ಗಿ ಹೊರಗೆ ಹೋಗಲು ಬಿಡದೇ ಬಾಗಿಲು ಹಾಕಿ ನನ್ನ ಮೇಲೆ ದಬಾವಣೆ ಮಾಡಿ ಭಯ ಹುಟ್ಟಿಸಿದರು ಎಂಬ ಮಾತನ್ನು ಹೊರಟ್ಟಿ ಅವರು ಹೇಳಿದ್ದಾರೆ. ನೊಂದ ಹೊರಟ್ಟಿ ಅವರು ಊರಿಗೆ ಹೋಗಿದ್ದಾರೆ. ಅವರ ಮೊಬೈಲ್ ಸ್ವಿಚ್ಡ್‌ ಆಫ್ ಆಗಿದೆ. ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದು ಛಲವಾದಿ ಹೇಳಿದರು.

ಸಭಾಪತಿಗಳು ರಾಜೀನಾಮೆ ನೀಡಲು ಉಪಸಭಾಪತಿ ಇರಬೇಕು. ಆದರೆ ಉಪಸಭಾಪತಿಗಳು ಇಲ್ಲ. ಅವರು ಇಲ್ಲದಿದ್ದಾಗ ಯಾರು ಅಂಗೀಕಾರ ಮಾಡಬೇಕು? ರಾಜ್ಯಪಾಲರ ಕ್ರಮ ಏನು? ಸದನದಲ್ಲಿ ಏನು ಆಗಬೇಕು? ಎಂಬ ಬಗ್ಗೆ ಕಾನೂನು ಮಾಹಿತಿ ಕೇಳುತ್ತೇವೆ. ಮುಂದಿನ ನಡೆ ಏನು ಎಂದು ತೀರ್ಮಾನ ಮಾಡುತ್ತೇವೆ. ನಮ್ಮ ದೂರಿಗೆ ಸ್ಪಂದಿಸಿರುವ ರಾಜ್ಯಪಾಲರು ಕಾನೂನು ಕ್ರಮ ಜರುಗಿಸುತ್ತೇನೆ ಎಂಬ ಭರವಸೆ ನೀಡಿದ್ದಾರೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಪೌರಕಾರ್ಮಿಕರ ಉಪಹಾರ ಭತ್ಯೆ ₹70ಕ್ಕೆ ಏರಿಕೆ: ಸಿಎಂ
ಬಿಜೆಪಿ, ಮೋದಿಗೆ ಬೈಯುತ್ತಿರುವೆ, ಬಂಧಿಸಲು ಧಮ್ ಬೇಕು : ಪ್ರಕಾಶ್‌