ವಿಷಕಾರಿ ಕಂಪನಿ ಬಂದ್‌ ಮಾಡದಿದ್ದರೆ ರಾಜೀನಾಮೆ, ಚುನಾವಣಾ ಬಹಿಷ್ಕಾರ !

KannadaprabhaNewsNetwork |  
Published : May 19, 2025, 12:08 AM ISTUpdated : May 19, 2025, 12:38 PM IST
ಮಹೇಶ ವಿ. ಪಾಟೀಲ್ ಸೈದಾಪುರ, ಸಾಫ್ಟ್ವೇರ್ ಉದ್ಯೋಗಿ ಬೆಂಗಳೂರು | Kannada Prabha

ಸಾರಾಂಶ

ಜೀವಸಂಕುಲದ ಆರೋಗ್ಯಕ್ಕೆ ವಿಷಕಾರಿಯಾಗಿರುವ ಇಂತಹ ಕಂಪನಿಗಳ ಬಂದ್‌ ಮಾಡಿಸದಿದ್ದರೆ ಗ್ರಾಮ ಪಂಚಾಯತ್‌ ಜನಪ್ರತಿನಿಧಿಗಳ ಸ್ಥಾನಕ್ಕೆ ಸಾಮೂಹಿಕ ರಾಜೀನಾಮೆ ನೀಡುವ ಜೊತೆಗೆ, ಮುಂಬರುವ ಚುನಾವಣೆಗಳನ್ನೂ ಬಹಿಷ್ಕರಿಸುವುದಾಗಿ ಎಚ್ಚರಿಕ ನೀಡಿದ್ದಾರೆ.

 ಆನಂದ್‌ ಎಂ. ಸೌದಿ

 ಯಾದಗಿರಿ : ಪರಿಸರಕ್ಕೆ ಪೂರಕವಾದ ಕಾರ್ಖಾನೆಗಳನ್ನು ಸ್ಥಾಪಿಸಿ, ಇಲ್ಲಿನ ಉದ್ಯೋಗ, ಆರೋಗ್ಯ, ಶಿಕ್ಷಣ ಮುಂತಾದ ಅನುಕೂಲತೆಗಳನ್ನು ಮಾಡಿಕೊಡುವುದಾಗಿ ಹೇಳಿ ಜನರ ಮುಗ್ಧತೆಯನ್ನು ದುರುಪಯೋಗಪಡಿಸಿಕೊಂಡ ಸರ್ಕಾರ, ಪರಿಸರಕ್ಕಷ್ಟೇ ಅಲ್ಲ, ಜನ-ಜಲ-ಜೀವನಕ್ಕೂ ಅಪಾಯಕಾರಿ ಕೆಮಿಕಲ್‌ ತ್ಯಾಜ್ಯ ಕೈಗಾರಿಕೆಗಳ ಸ್ಥಾಪಿಸಿದ್ದು, ಜೀವಸಂಕುಲದ ಆರೋಗ್ಯಕ್ಕೆ ವಿಷಕಾರಿಯಾಗಿರುವ ಇಂತಹ ಕಂಪನಿಗಳ ಬಂದ್‌ ಮಾಡಿಸದಿದ್ದರೆ ಗ್ರಾಮ ಪಂಚಾಯತ್‌ ಜನಪ್ರತಿನಿಧಿಗಳ ಸ್ಥಾನಕ್ಕೆ ಸಾಮೂಹಿಕ ರಾಜೀನಾಮೆ ನೀಡುವ ಜೊತೆಗೆ, ಮುಂಬರುವ ಚುನಾವಣೆಗಳನ್ನೂ ಬಹಿಷ್ಕರಿಸುವುದಾಗಿ ಎಚ್ಚರಿಕ ನೀಡಿದ್ದಾರೆ.

ಕೈಗಾರಿಕಾ ಪ್ರದೇಶದ ಸುತ್ತಮುತ್ತ ಹತ್ತಾರು ಹಳ್ಳಿಗಳಲ್ಲಿನ ಜನರ ಆರೋಗ್ಯ-ಪರಿಸರದ ಮೇಲೆ ಅಡ್ಡ ಪರಿಣಾಮಗಳಿಂದ ನೊಂದುಬೆಂದಿರುವ ಗ್ರಾಮಸ್ಥರು, ಪಂಚಾಯತ್‌ ಜನಪ್ರತಿನಿಧಿಗಳು ಇಂತಹ ಚಿಂತನೆಗೆ ಮುಂದಾಗಿದ್ದಾರೆ. ಗ್ರಾಮ ಪಂಚಾಯತ್‌ ಸಾಮಾನ್ಯ ಸಭೆಗಳಲ್ಲಿ ಠರಾವು ಹಾಗೂ ಗ್ರಾಮ ಸಭೆಗಳಲ್ಲಿ ನಿರ್ಧಾರದ ಮೂಲಕ ಕೆಮಿಕಲ್‌ ದುರ್ನಾತಕ್ಕೆ ಅಂತ್ಯ ಹಾಡಲು, ಮುಂದಿನ ಪೀಳಿಗೆಗೆ ಬದುಕು ನೀಡಲು ಜನಜಾಗೃತಿ ಸಣ್ಣದಾಗಿ ಹರಿಯತೊಡಗಿದ್ದು, ಮುಂದಿನ ದಿನಗಳಲ್ಲಿ ವ್ಯಾಪಕ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಕೆಮಿಕಲ್‌- ತ್ಯಾಜ್ಯ ಕಂಪನಿಗಳ ದುರ್ನಾತ, ವಿಷಗಾಳಿಯ ಆತಂಕ ಅಲ್ಲಿನ ಜೀವ ಹಿಂಡುತ್ತಿರುವ ಬಗ್ಗೆ ಜನಾಭಿಪ್ರಾಯಗಳು ಒಗ್ಗೂಡುತ್ತಿವೆ.

 ನಾನು ಹುಟ್ಟಿ ಬೆಳೆದು, ಉತ್ತಮ ಶಿಕ್ಷಣ ಪಡೆದ ಕಡೇಚೂರು-ಬಾಡಿಯಾಳ ಪ್ರದೇಶದಲ್ಲಿ ಸ್ಥಾಪಿತವಾಗಿರುವ ರಾಸಾಯನಿಕ ಕಂಪನಿಗಳು ಹಾನಿಕಾರಿಕ ತ್ಯಾಜ್ಯವನ್ನು ಸರಿಯಾದ ಕ್ರಮದಲ್ಲಿ ವಿಲೇವಾರಿ ಮಾಡುತ್ತಿಲ್ಲ. ಕೈಗಾರಿಕೋದ್ಯಮಿಗಳ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಪರಿಸರದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿದೆ. ದಿನನಿತ್ಯ ಗಾಳಿಯ ಸೂಚ್ಯಂಕ ಗಮನಿಸುತ್ತಿದ್ದೇನೆ. 90 ರಿಂದ 120 ಸಾಮಾನ್ಯವಾಗಿದೆ. ಇದರಿಂದಾಗಿ ವಾಯು, ಜಲ ಮತ್ತು ಭೂ ಮಾಲಿನ್ಯ ಹೆಚ್ಚಾಗಿದೆ. ಇದರಿಂದ ಇಲ್ಲಿನ ಮಕ್ಕಳ, ವೃದ್ಧರ ಮತ್ತು ಗರ್ಭಿಣಿಯರು ಉಸಿರಾಟದ ಸಮಸ್ಯೆಗಳು ಹೆಚ್ಚಾಗಿವೆ. ಈ ಸಮಸ್ಯೆ ಇನ್ನೊಷ್ಟು ತೀವ್ರವಾಗದಂತೆ ತಕ್ಷಣವೇ ಈ ಕೈಗಾರಿಕೆಗಳ ವಿರುದ್ಧ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸರಕಾರದ ಅಧಿನದಲ್ಲಿರುವ ಸಮೀರ ಆಫ್ ಮೂಲಕ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರನ್ನು ನೀಡಿದ್ದೇನೆ. :

 ಮಹೇಶ ವಿ. ಪಾಟೀಲ್ ಸೈದಾಪುರ, ಸಾಫ್ಟ್ವೇರ್ ಉದ್ಯೋಗಿ ಬೆಂಗಳೂರು.  

 ಕಡೇಚೂರು-ಬಾಡಿಯಾಳ ಕೈಗಾರಿಕಾ ವಲಯದಲ್ಲಿನ ಫಾರ್ಮಾ ಕಂಪನಿಗಳು ಅಪಾರ ಪ್ರಮಾಣದ ಹಾನಿಕಾರಕ ತ್ಯಾಜವನ್ನು ಹೊರ ಬಿಡುತ್ತಿವೆ. ಇಲ್ಲಿ ಪರಿಸರ ಮಾಲಿನ್ಯ ಇಲಾಖೆ ಇದೆಯೋ-ಇಲ್ಲವೋ? ಎಂಬ ಅನುಮಾನ ಸೃಷ್ಟಿಯಾಗಿದೆ. ಇಲ್ಲಿನ ಜನರು, ರೈತರು ಅನೇಕ ಬಾರಿ ಇದರ ವಿರುದ್ಧ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜವಾಗಿಲ್ಲ. ಇದರಿಂದಾಗಿ ಈ ಭಾಗದ ಎಲ್ಲ ಪ್ರಜ್ಞಾವಂತರು ಸೇರಿ ಪ್ರಧಾನಮಂತ್ರಿ ಕಛೇರಿ ವರೆಗೂ ಈ ಸಮಸ್ಯೆಯನ್ನು ಮುಟ್ಟಿಸಬೇಕು ಎಂದು ತೀರ್ಮಾನಿಸಿದ್ದೇವೆ. : 

ನಾಗರಾಜ ಸೈದಾಪುರ. ಸಾಫ್ಟ್‌ವೇರ್ ಉದ್ಯೋಗಿ, ಹೈದ್ರಬಾದ್.  

 ಈ ಭಾಗದಲ್ಲಿ ಸ್ಥಾಪಿತವಾಗಿರುವ ಬಹುತೇಕ ಕಂಪನಿಗಳು ನೇರೆಯ ತೆಲಂಗಾಣದ ಹೈದ್ರಾಬಾದ್ ಸಮೀಪದ ರಂಗಾರೆಡ್ಡಿ ಜಿಲ್ಲೆಯಲ್ಲಿದ್ದವು. ಅವು ಅಲ್ಲಿನ ಪರಿಸರದ ಮೇಲೆ ದುಶ್ಪರಿಣಾಮ ಬೀರದ್ದಲ್ಲದೆ. ಅನೇಕ ಜನರ ಸಾವು-ನೋವುಗಳಿಗೆ ಕಾರಣವಾಗಿದ್ದವು. ಅದಕ್ಕಾಗಿ ಅಲ್ಲಿನ ಸರಕಾರಕ್ಕೆ ಜನರು ದೂರು ಸಲ್ಲಿಸಿದಾಗ ಯಾವುದೇ ಪ್ರಯೋಜವಾಗದ್ದರಿಂದ ಅಲ್ಲಿನ ಜನ ದಂಗೆ ಎದ್ದು ನಿಂತಾಗ ಅವು ಇಲ್ಲಿ ನಮ್ಮಲಿಗೆ (ಕಡೇಚೂರು ಬಾಡಿಯಾಳ) ಬಂದಿವೆ. ಈ ಕಂಪನಿಗಳ ಪೂರ್ವಾಪರ ಆಲೋಚಿಸದ ಅಧಿಕಾರಿಗಳು ಅನುಮತಿ ನೀಡಿರುವುದು ದುರದೃಷ್ಟಕರ ಸಂಗತಿಯಾಗಿದೆ. 

: ಶ್ರೀನಿವಾಸ ಪರ್ಲಾ, ಕಡೇಚೂರು.  

  ನಮ್ಮ ಭಾಗದ ಜನರು ಉದ್ಯೋಗವನ್ನರಿಸಿ ದೂರದ ಬೆಂಗಳೂರು-ಮುಂಬೈ ಮಹಾನಗರಗಳಿಗೆ ಗುಳೆ ತಪ್ಪಿಸಲು ಹಾಗೂ ಈ ಪ್ರದೇಶ ಅಭಿವೃದ್ಧಿಯಾಗುವು ಉದ್ದೇಶದಿಂದ ರೈತರು ತಮ್ಮ ಜಮೀನನು ನೀಡಿದ್ದರೆ, ಇದಕ್ಕೆ ತದ್ವಿರುದ್ಧ ಎಂಬಂತೆ ಕಡೇಚೂರು-ಬಾಡಿಯಾಳ ವಲಯದಲ್ಲಿ ಸ್ಥಾಪಿತವಾಗಿರುವ ಕಂಪನಿಗಳು ಸ್ಥಳೀಯರಿಗೆ ಉದ್ಯೋಗ ನೀಡುತಿಲ್ಲ, ಅದರ ಜತೆ ಇಲ್ಲಿನ ಜನಕ್ಕೆ ವಿಷಗಾಳಿ, ನೀರು ನೀಡುತ್ತಿವೆ. ಇದರಿಂದ ದುಡಿದ ಹಣ ಆಸ್ಪತ್ರೆಗಳಿಗೆ ಇಟ್ಟು ತಮ್ಮ ದೇಹ ಸ್ಮಶಾನಕ್ಕೆ ಇಡುವ ಪರಿಸ್ಥಿತಿ ಎದುರಾಗಿದೆ. ಅದಲ್ಲದೆ ಬೇಳೆಯುವ ಮಕ್ಕಳಿಗೆ ಉಸಿರಾಟದ ಮತ್ತು ಚರ್ಮ ತೊಂದರೆ ಕಾಣುತ್ತಿರುವುದು ಅತ್ಯಂತ ಶೋಚನೀಯ ಸ್ಥಿತಿ ಎದುರಾಗಿದೆ. 

: ಚಂದಪ್ಪ ಕಾವಲಿ, ಬಾಲಛೇಡ್.  

  ನಮ್ಮ ಭಾಗದಲ್ಲಿರುವ ರಾಸಾಯನಿಕ ಕಂಪನಿಗಳು ಹೊರಹಾಕುವ ವಿಷಕಾರಿ ತ್ಯಾಜದ ಪರಿಣಾಮ ಹೇಗೆದೆ ಅಂದರೆ, ಈ ಕಂಪನಿಗಳಿಗೆ ಹತ್ತಿರ ಇರುವ ಜಮೀನುಗಳಲ್ಲಿ ಬೆಳದ ದವಸ ಧಾನ್ಯಗಳನ್ನು ಪ್ರಾಣಿ- ಗುಬ್ಬಿಗಳು ತಿನುತ್ತಿಲ್ಲ. ಆದರೆ ದೂರದ ಜಮೀನುಗಳಲ್ಲಿ ಗುಬ್ಬಿ ಮತ್ತು ಪ್ರಾಣಿಗಳ ಕಾಟ ಹೆಚ್ಚಾಗಿದೆ. ಅಂದರೆ ಇಲ್ಲಿನ ಪ್ರದೇಶದಲ್ಲಿ ಎಷ್ಟರ ಮಟ್ಟಿಗೆ ಮಾಲಿನ್ಯ ಉಂಟಾಗಿದೆ ಎಂಬುವುದು ಇದಕ್ಕಿಂತ ಉತ್ತಮ ನಿದರ್ಶನ ಇನ್ನೊಂದಿಲ್ಲ. ದಯವಿಟ್ಟು ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳು ಇತ್ತ ಗಮನಹರಿಸಿ ಕಂಪನಿಗಳನ್ನು ಬಂದ್ ಮಾಡಬೇಕು. : ಶರಣಪ್ಪಗೌಡ ಬಾಲಚೇಡ್ (18ವೈಡಿಆರ್‌19)

 ಈ ಪ್ರದೇಶದಲ್ಲಿ ಸ್ಥಾಪಿತ ರಾಸಾಯನಿಕ ಕಂಪನಿಗಳು ಮತ್ತು ತ್ಯಾಜ್ಯ ವೀಲೇವಾರಿ ಘಟಕದಿಂದ ಬರುತ್ತಿರುವ ಕೆಟ್ಟ ಘಾಟಿನಿಂದ ಜೀವನ ಸಾಗಿಸುವುದಕ್ಕೆ ಕಷ್ಠವಾಗುತ್ತಿದೆ. ಇದರ ಪರಿಣಾಮ ಇಗಾಗಲೇ ಕೇಲ ಅನುಕೂಲಸ್ಥರು ಯಾದಗಿರಿ, ರಾಯಚೂರು, ಕಲಬುರಗಿ ಮತ್ತು ಬೆಂಗಳೂರು ನಗರಗಳಿಗೆ ತಮ್ಮ ಕುಟುಂಬಸ್ಥರನ್ನು ಕರೆದುಕೊಂಡು ಹೋಗುತ್ತಿದ್ದಾರೆ. ಆದರೆ ಬಡವರು ಎಲ್ಲಿಗೆ ಹೋಗಬೇಕು.? ಸರಕಾರವು ಹಳ್ಳಿಗಳು ಅಭಿವೃದ್ಧಿಯಾಗಬೇಕು ಎಂದು ಘೋಷಣೆಗಳನ್ನು ಹೇಳಿದರೆ ಸಾಲದು, ಹಳ್ಳಿಗಳನ್ನು ಉಳಿಸುವ ಕಾರ್ಯಕ್ಕೆ ಅತಿ ತುರ್ತುತಾಗಿ ಇಲ್ಲಿಗೆ ಆಗಮಿಸಬೇಕಿದೆ. 

: ತಾಯಪ್ಪ ಚಿಗರಿ, ಸೈದಾಪುರ  

 : ನಮ್ಮ ಸೈದಾಪುರ ಉತ್ತಮ ರೈಲು, ರಸ್ತೆ, ಶಿಕ್ಷಣ ಮತ್ತು ವ್ಯಾಪರ ವಹಿವಾಟಿಗಾಗಿ ಈ ಪ್ರದೇಶದಕ್ಕೆ ದೂರದ ಗ್ರಾಮ ಮತ್ತು ನಗರಗಳಿಂದ ಅನೇಕ ಜನರು ಇಲ್ಲಿಗೆ ಬಂದು ಮನೆ ಕಟ್ಟಿಕೊಂಡು ಉತ್ತಮ ಜೀವನ ಸಾಗಿಸುತ್ತಿದ್ದರು. ಆದರೆ ಕಡೇಚೂರು-ಬಾಡಿಯಾಳ ಪ್ರದೇಶದಲ್ಲಿ ರಾಸಾಯನಿಕ ಮತ್ತು ತ್ಯಾಜ್ಯ ವಿಲೇವಾರಿ ಘಟಕಗಳು ಸ್ಥಾಪನೆಯಾಗಿ ಅವುಗಳಿಂದ ತೊಂದರೆ ಯಾಗುತ್ತದೆ ಎಂದು ತಿಳಿದ ಬಹುತೇಕ ಜನರು ಬೇರೆ ಕಡೆ ಹೋಗುತ್ತಿದ್ದಾರೆ. ಇದರಿಂದ ಇಲ್ಲಿನ ರೀಯಲ್ ಎಸ್ಟ್‍ಟ್ ಸೇರಿದಂತೆ ಕೃಷಿ, ಬಟ್ಟೆ ಮತ್ತು ಕಿರಾಣಿ ಮಾರುಕಟ್ಟೆ ಕಡಿಮೆಯಾಗುತ್ತಿದೆ.: 

ಮಹೇಶ ಜೇಗರ್. ಸೈದಾಪುರ  

 ನಮ್ಮ ಬದ್ಧೇಪಲ್ಲಿ ಗ್ರಾಮವು ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಿಂದ 5 ಕಿ.ಮೀ ದೂರವಿದೆ. ರಾತ್ರಿಯಾದರೆ ಸಾಕು ಅದರ ಘಾಟು ಬರುತ್ತದೆ. ಹೊರಗಡೆ ಮಲಗಿ ನಿದ್ದೆ ಮಾಡಿದರೆ ಬೆಳಗಾಗವರೆಗೆ ನಮ್ಮ ಹಾಸಿಗೆ ಮತ್ತು ಮೈಮೇಲೆ ಹಳದಿ ಬಣ್ಣದ ಹನಿಗಳು ಬಿದ್ದಿವೆ. ಇಲ್ಲಿನ ಕೆಲ ಮಹಿಳೆಯರಿಗೆ 1 ರಿಂದ 2 ಬಾರಿ ಗರ್ಭಪಾತವಾಗಿದೆ. ಹಾಗೂ ಕೆಲ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ನಮ್ಮೂರಿನ ಯುವಕರು ನಾಲ್ಕೈದು ದಿನಗಳಲ್ಲಿಯೇ ಆರೋಗ್ಯ ಸಮಸ್ಯೆಯಿಂದ ಸಮೀಪದ ರಾಯಚೂರು ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ.

 : ಮೈಹಿಮೂದ್ ಗ್ರಾ.ಪಂ. ಮಾಜಿ ಸದಸ್ಯ ಬದೇಪಲ್ಲಿ. 

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಬೆಂಗಳೂರಲ್ಲಿ ಲಾಲ್‌ಬಾಗ್‌ ಮಾದರಿಯಲ್ಲಿ ಮತ್ತೆರಡು ಪಾರ್ಕ್‌ ನಿರ್ಮಾಣ: ಡಿ.ಕೆ.ಶಿವಕುಮಾರ್
ಸಂಕ್ರಾಂತಿ: ಇಂದು ಗವಿಗಂಗಾಧರನಿಗೆ ಸೂರ್ಯರಶ್ಮಿ ಸ್ಪರ್ಶ