ಹಗರಿಬೊಮ್ಮನಹಳ್ಳಿ: ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯಾಧ್ಯಕ್ಷ ಸೋಮನಗೌಡ ಮಾಲೀಪಾಟೀಲ್ ಅವರನ್ನು ಅಧಿಕಾರದಿಂದ ಇಳಿಸಲು ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಗಿದೆ ಎಂದು ಸಂಘದ ಮಾಜಿ ಅಧ್ಯಕ್ಷ, ರಾಜ್ಯ ಸಮಿತಿ ಸದಸ್ಯ ಬಸವರಾಜ ದಿಂಡೂರ್ ತಿಳಿಸಿದರು.
ಎಲ್ಲ ಆಯಾಮಗಳಿಂದ ಪರಿಶೀಲಿಸಿ, ಸಮಾಜದ ಸಂಘಟನೆ, ಅಭಿವೃದ್ಧಿ ಮತ್ತು ಬಲವರ್ಧನೆಗೆ ಈ ನಿರ್ಣಯವನ್ನು ಒಲ್ಲದ ಮನಸ್ಸಿನಿಂದ ಕೈಗೊಳ್ಳಲಾಗಿದೆ. ಸಭೆಯಲ್ಲಿ ರಾಜ್ಯಾಧ್ಯಕ್ಷರ ವಿರುದ್ಧ ಸರ್ವ ಸದಸ್ಯರು ಅವಿಶ್ವಾಸ ನಿರ್ಣಯಕ್ಕೆ ಸಹಿ ಹಾಕಿದ್ದಾರೆ. ರಾಜ್ಯದಲ್ಲಿ 90 ಲಕ್ಷಕ್ಕೂ ಹೆಚ್ಚು ಪಂಚಮಸಾಲಿ ಜನರಿದ್ದು, ಸಮಾಜದ ಟ್ರಸ್ಟ್, ಪೀಠ, ಸಮಾಜ ಮತ್ತು ರಾಜ್ಯಸಂಘಗಳು ಸಂದಿಗ್ಧ ಪರಿಸ್ಥಿತಿಯಲ್ಲಿ ಒಟ್ಟಾಗಿ ಹೋಗುವ ಮೂಲಕ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಪ್ರತಿಪಾದಿಸಿದರು.
ಸಮಾಜದಲ್ಲಿ ಉಂಟಾಗಿರುವ ಗೊಂದಲಗಳಿಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಸಂಘದ ರಾಜ್ಯ, ಮಹಿಳಾ, ಯುವ ಘಟಕ ಸೇರಿ ನಾನಾ ಘಟಕಗಳು ಒಮ್ಮತದಿಂದ ನಿರ್ಣಯ ಕೈಗೊಂಡಿದ್ದು, ನೋಟಿಸು ನೀಡಲಾಗುವುದು. ಸಮಾಜದಲ್ಲಿ ಗೊಂದಲ ಸೃಷ್ಟಿಸುವವರು ಪಟ್ಟಭದ್ರ ಹಿತಾಸಕ್ತಿಗಳು ಮತ್ತು ಕಾಣದ ಕೈಗಳಾಗಿದ್ದು, ದೇವರು ಅವರಿಗೆ ಒಳ್ಳೆಯದು ಮಾಡಲಿ ಎಂದು ಅಭಿಪ್ರಾಯಪಟ್ಟರು.ಪರ್ಯಾಯ ಪೀಠಾಧ್ಯಕ್ಷರ ನಿರ್ಣಯ ಸದ್ಯಕ್ಕಿಲ್ಲ. ಮೊದಲಿಗೆ ರಾಜ್ಯಾಧ್ಯಕ್ಷರ ಪದಚ್ಯುತಿ ಬಳಿಕ ಮುಂದಿನ ನಿರ್ಣಯ ಕೈಗೊಳ್ಳಲಾಗುವುದು. ಹೊಸ ಸದಸ್ಯರು ರಾಜ್ಯ ಸಂಘಕ್ಕೆ ಮುಂದಿನ ವಾರ್ಷಿಕ ಸಭೆಯಲ್ಲಿ ಮತದಾನ ಮಾಡಬಹುದಾಗಿದೆ ಎಂದರು.
ಸಂಘ, ಟ್ರಸ್ಟ್ ಮತ್ತು ಸಮಾಜವನ್ನು ಐಕ್ಯತೆಯಿಂದ ಕರೆದೊಯ್ಯುವಲ್ಲಿ ಅಧ್ಯಕ್ಷ ವಿಫಲವಾಗಿದ್ದಾರೆ. ಪದಚ್ಯುತಿಗೆ ಕಾನೂನಾತ್ಮಕ ನಿರ್ಣಯ ಕೈಗೊಳ್ಳಲಾಗಿದೆ. ಸಮಾಜವನ್ನು ವಿಘಟನೆ ಮಾಡುವ ಶಕ್ತಿಗಳನ್ನು ಸಹಿಸಲಾಗದು ಎಂದು ಸಂಘದ ಕಾನೂನು ಸಲಹೆಗಾರ ಸೋಮಶೇಖರ ಕೊತ್ತಂಬ್ರಿ ತಿಳಿಸಿದರು.
ಪಂಚಮಸಾಲಿ ಯುವ ಘಟಕದ ಕಿಚಡಿ ಕೊಟ್ರೇಶ, ಚಿಂತ್ರಪಳ್ಳಿ ಗುರುಬಸವರಾಜ ಸೊನ್ನದ, ಬಂಡಿಹಳ್ಳಿ ಮಂಜುನಾಥ ನಿರ್ವಹಿಸಿದರು.