ಭೂಸ್ವಾಧೀನ ಸಂಬಂಧಿಸಿದ ವ್ಯಾಜ್ಯ ಶೀಘ್ರ ಪರಿಹರಿಸಿ

KannadaprabhaNewsNetwork |  
Published : Jul 18, 2026, 01:45 AM IST
ಚಿತ್ರದುರ್ಗ ಎರಡನೇ ಪುಟದ ಲೀಡ್ | Kannada Prabha

ಸಾರಾಂಶ

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ನೇರ ರೈಲು ಮಾರ್ಗದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂಸದ ಗೋವಿಂದ ಕಾರಜೋಳ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ರೇಲ್ವೆ ಯೋಜನೆಯ ಭೂ ಸ್ವಾಧೀನಕ್ಕೆ ಸಂಬಂಧಿಸಿದ ವ್ಯಾಜ್ಯಗಳನ್ನು ಶೀಘ್ರ ಪರಿಹರಿಸುವಂತೆ ಸಂಸದ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ತುಮಕೂರು-ಚಿತ್ರದುರ್ಗ-ದಾವಣಗೆರೆ ಹೊಸ ನೇರ ರೈಲ್ವೇ ಮಾರ್ಗ ಮತ್ತು ಚಿಕ್ಕಜಾಜೂರು-ಬಳ್ಳಾರಿ ರೈಲ್ವೇ ಡಬ್ಲಿಂಗ್ ಯೋಜನೆಗೆ ಭೂಸ್ವಾಧೀನ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ರೈಲ್ವೇ ಅಭಿವೃದ್ಧಿಗೆ ಭೂಮಿ ನೀಡುವ ರೈತರಿಗೆ ನಿಯಮಾನುಸಾರ ಪರಿಹಾರ ನೀಡುವುದರ ಮೂಲಕ ಅವರ ಹಿತ ಕಾಪಾಡುವಂತೆ ಸೂಚಿಸಿದರು.

ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಬೇಕು. ತಡವಾದಷ್ಟು ಯೋಜನೆಗಳ ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚಾಗಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತದೆ. ರೈತರು ರೈಲ್ವೇ ಯೋಜನೆಗೆ ಭೂಮಿ ನೀಡಲು ಸಿದ್ಧರಿದ್ದಾರೆ, ಆದರೆ ಸೂಕ್ತ ಬೆಲೆ ಅಪೇಕ್ಷಿಸುತ್ತಿದ್ದಾರೆ. ಹೊಳಲ್ಕೆರೆ ಭಾಗ ಅರೆ ಮಲೆನಾಡು ಪ್ರದೇಶವಾಗಿದ್ದು, ರೈತರು ಜಮೀನುಗಳಲ್ಲಿ ಅಡಕೆ, ಮಾವಿನ ತೋಟಗಳನ್ನು ಮಾಡಿದ್ದಾರೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಈ ಬೆಳೆಗಳಿಗೆ ಸೂಕ್ತ ಪರಿಹಾರ ದೊರಕುವಂತೆ ತಮ್ಮ ವರದಿ ನೀಡಬೇಕು. ರೈತರಿಗೆ ಯಾವುದೇ ರೀತಿಯಲ್ಲಿ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದರು.

ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ರೈತರಿಗೆ ಯಾವುದೇ ಆತಂಕ ಬೇಡ, ಸಬ್‌ ರಿಜಿಸ್ಟ್ರಾರ್ ಕಚೇರಿಯ ಮಾರುಕಟ್ಟೆ ಮೌಲ್ಯದ ದರ ಆಧರಿಸಿ ಮೂಲ ಬೆಲೆ ನಿಗದಿಪಡಿಸಲಾಗುತ್ತದೆ. ಇದರ ಆಧಾರ ಮೇಲೆ ಭೂಮಿಗೆ ಹೆಚ್ಚಿನ ಬೆಲೆ ದೊರಕುತ್ತದೆ. ಇದರೊಂದಿಗೆ ಜಮೀನಿನಲ್ಲಿ ಇರುವ ಬೆಳೆ, ತೋಟಗಾರಿಕೆ ಬೆಳೆಗಳು, ಪಶು ಸಂಗೋಪನೆಗಾಗಿ ನಿರ್ಮಿಸಿರುವ ಕಟ್ಟಡ ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ನಿರ್ಮಿಸಿದ ಇತರೆ ನಿರ್ಮಾಣಗಳಿಗೂ ಪರಿಹಾರ ದೊರಕಲಿದೆ. ನಿಯಮಗಳ ಅಡಿ ರೈತರಿಗೆ ದೊರಕಬೇಕಾಗದ ಗರಿಷ್ಠ ಮಟ್ಟದ ಪರಿಹಾರಗಳನ್ನು ದೊರಕಿಸಿ ಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.

ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲ್ವೇ ಯೋಜನೆಗೆ ಒಟ್ಟು 1,405 ಎಕರೆ ಭೂಮಿ ಅವಶ್ಯಕತೆ ಇದ್ದು, ಈ ಪೈಕಿ 1,211 ಎಕರೆ ಭೂ ಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ರೈಲ್ವೇ ಇಲಾಖೆ ಜಮೀನು ಹಸ್ತಾಂತರಿಸಲಾಗಿದೆ. ನೇರ ರೈಲ್ವೇ ಕಾಮಗಾರಿಯೂ ಪ್ರಗತಿಯಲ್ಲಿದೆ.

ಮೇಲ್ಸೇತುವೆ, ಕೆಳಸೇತುವೆ, ವಿದ್ಯುತ್ ಉಪಕೇಂದ್ರ ಹಾಗೂ ಜಾಲಗಳ ನಿರ್ಮಾಣಕ್ಕೆ ಒಟ್ಟು 194 ಎಕರೆ ಭೂ ಅವಶ್ಯಕತೆ ಇದ್ದು, ಸ್ವಾಧೀನ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಈ ಪೈಕಿ ಚಿತ್ರದುರ್ಗ ಹಾಗೂ ಭರಮಸಾಗರ ಮಧ್ಯ 56 ಎಕರೆ ಭೂ ಸ್ವಾಧೀನಕ್ಕೆ ಜಂಟಿ ಅಳತೆ ಸಮೀಕ್ಷೆ (ಜೆಎಂಸಿ) ಯನ್ನು ಸಹ ಪೂರ್ಣಗೊಳಿಸಲಾಗಿದೆ. ಪಾಲವ್ವನಹಳ್ಳಿ-ಚಿತ್ರದುರ್ಗದ ಮದ್ಯ 28-25 ಎಕರೆ ಭೂಮಿ ಅವಶ್ಯಕತೆ ಇದೆ. ನಕ್ಷೆ ಹಾಗೂ ಭೂ ದಾಖಲೆಗಳ ತಯಾರಿಕೆ 15 ದಿನಗಳ ಅವಶ್ಯಕತೆಯಿದೆ. ಹಿರಿಯೂರು ತವರಕೆರೆ ಮಧ್ಯೆ 31 ಎಕರೆ ಭೂ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. 60 ದಿನ ನೋಟಿಸ್ ಅವಧಿ ಪೂರ್ಣಗೊಂಡ ನಂತರ ಭೂಮಿ ಸ್ವಾಧೀನಕ್ಕೆ ತೆಗೆದುಕೊಳ್ಳಲಾಗುವುದು. ಇದೇ ಮಾದರಿಯಲ್ಲಿ ಚಿತ್ರದುರ್ಗ ಹಿರಿಯೂರು ಮಧ್ಯೆ 79 ಎಕೆರೆ ಭೂಸ್ವಾಧೀನಕ್ಕೆ ಕ್ರಮ ವಹಿಸಲಾಗಿದೆ.

ಚಿಕ್ಕಚಾಜೂರು-ಬಳ್ಳಾರಿ ನಡುವಿನ ರೈಲ್ವೇ ಮಾರ್ಗ ಡಬ್ಲಿಂಗ್ ಯೋಜನೆಗೆ ಹೊಳಲ್ಕೆರೆ ತಾಲ್ಲೂಕಿನಲ್ಲಿ 86 ಎಕರೆ 01 ಗುಂಟೆ ಚಿತ್ರದುರ್ಗ ತಾಲ್ಲೂಕಿನಲ್ಲಿ 72 ಎಕರೆ 12 ಗುಂಟೆ, ಚಳ್ಳಕೆರೆ ತಾಲ್ಲೂಕಿನಲ್ಲಿ 120 ಎಕರೆ 38 ಗುಂಟೆ ಹಾಗೂ ಮೊಳಕಾಲ್ಮೂರು ತಾಲೂಕಿನಲ್ಲಿ 34 ಎಕರೆ 11 ಗುಂಟೆ ಭೂಮಿ ಅಗತ್ಯತೆಯನ್ನು ರೈಲ್ವೇ ಇಲಾಖೆಯಿಂದ ನೀಡಲಾಗಿದೆ. ಈಗಾಗಲೇ ಹೊಳಲ್ಕೆರೆ ತಾಲ್ಲೂಕಿಗೆ ಸಂಬಂಧಿಸಿದಂತೆ 86 ಎಕರೆ ಭೂ ಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ ಎಂದು ವಿಶೇಷ ಭೂಸ್ವಾಧೀನಾಧಿಕಾರಿ ವೆಂಕಟೇಶ್ ನಾಯ್ಕ್ ಸಭೆಗೆ ಮಾಹಿತಿ ನೀಡಿದರು.

ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಧಿಕಾರಿ ಎಸ್.ಜೆ.ಕಾಂತರಾಜು, ಜಿಪಂ ಸಿಪಿಓ ಗಾಯತ್ರಿ, ತೋಟಗಾರಿಕೆ ಜಂಟಿ ನಿರ್ದೇಶಕಿ ಸವಿತಾ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ರೈಲ್ವೇ ಎಂಜಿನಿಯರ್‌ಗಳಾದ ಮುನಿಕೃಷ್ಣ, ಹರೀಶ್, ರಜತ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀಟ್: ಎಸ್‌ಬಿಆರ್ ಪಿಯು ಕಾಲೇಜಿನ ಭರ್ಜರಿ ಸಾಧನೆ
ಶಾಲಾ ವಾಹನ ಡಿಕ್ಕಿ: ಬಾಲಕ ಸಾವು