ಕನ್ನಡಪ್ರಭ ವಾರ್ತೆ ತುಮಕೂರುಮುಂಬರುವ ಚುನಾವಣೆಗಳಲ್ಲಿ ಜಯ ಸಾಧಿಸಿ ಪಕ್ಷವನ್ನು ಅಧಿಕಾರಕ್ಕೆ ತಂದು ತುಮಕೂರು ಜಿಲ್ಲೆ ಜೆಡಿಎಸ್‌ನ ಭದ್ರಕೋಟೆ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಲು ಪಕ್ಷದ ಮುಖಂಡರು, ಕಾರ್ಯಕರ್ತರು ಸಂಕಲ್ಪ ಮಾಡಬೇಕು. ಪಕ್ಷದ ನಾಯಕರಿಗೆ ಗೆಲುವಿನ ಉಡುಗೊರೆ ನೀಡಬೇಕು ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜನಪ್ಪ ಮನವಿ ಮಾಡಿದರು.ಗುರುವಾರ ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಪಕ್ಷದ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿಯವರ ಹುಟ್ಟುಹಬ್ಬ ಆಚರಿಸಲಾಯಿತು. ಬೃಹತ್ ಕೇಕ್ ಕತ್ತರಿಸಿ, ಸಿಹಿ ವಿತರಿಸಿ ಯುವ ನಾಯಕನ ಜನ್ಮದಿನ ಆಚರಿಸಿ ಮುಖಂಡರು ಕಾರ್ಯಕರ್ತರು ಸಂಭ್ರಮಿಸಿದರು.ಈ ಸಮಾರಂಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಆರ್.ಸಿ.ಆಂಜನಪ್ಪ, ನಿಖಿಲ್ ಕುಮಾರಸ್ವಾಮಿಯವರು ಪಕ್ಷ ಸಂಘಟನೆಗೆ ರಾಜ್ಯಾದ್ಯಂತ ಪ್ರವಾಸ ಮಾಡಿ ಜನಬೆಂಬಲ ಪಡೆಯುತ್ತಾ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಅವರ ಜನಪ್ರಿಯತೆ ದಿನದಿನಕ್ಕೂ ಹೆಚ್ಚಾಗಿ ಪಕ್ಷದ ಸಂಘಟನೆ ವೃದ್ಧಿಯಾಗುತ್ತಿದೆ. ಮುಂದಿನ ದಿನಗಳಲ್ಲಿ ಮೈತ್ರಿ ಸರ್ಕಾರ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿಯುವುದು ನಿಶ್ಚಿತ ಎಂದರು.ಮಾಜಿ ಶಾಸಕ ಎಚ್.ನಿಂಗಪ್ಪ ಮಾತನಾಡಿ, ರಾಜ್ಯ ಯುವ ಘಟಕ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿಯವರು ಮೂರು ಬಾರಿ ಚುನಾವಣೆಯಲ್ಲಿ ಸೋತಿರಬಹುದು. ಆ ಸೋಲಿನಿಂದ ಅವರು ವಿಚಲಿತರಾಗಿಲ್ಲ, ಸೋಲು ಅವರಿಗೆ ದೊಡ್ಡ ಅನುಭವ ಕಲಿಸಿದೆ, ಮತ್ತಷ್ಟು ಪರಿಪಕ್ವವಾಗಿ ಪ್ರಬುದ್ಧ ನಾಯಕರಾಗಿ ಬೆಳೆಯುತ್ತಿದ್ದಾರೆ. ಅವರಿಗೆ ಶಕ್ತಿ ತುಂಬಲು ನಾವೆಲ್ಲಾ ಕೈ ಜೋಡಿಸಬೇಕು. ಪಕ್ಷದ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಮತ್ತಷ್ಟು ಚುರುಕಾಗಬೇಕು, ಹೆಚ್ಚು ಜನರನ್ನು ಪಕ್ಷಕ್ಕೆ ಸೇರಿಸಿ ಪಕ್ಷದ ಬಲವರ್ಧನೆಗೆ ಸಹಕರಿಸಬೇಕು ಎಂದು ಹೇಳಿದರು.ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ಎಸ್.ಸಿ. ಘಟಕ ಜಿಲ್ಲಾಧ್ಯಕ್ಷ ಎಸ್.ಡಿ.ಕೃಷ್ಣಪ್ಪ, ಮಧುಗಿರಿ ತಾಲ್ಲೂಕು ಅಧ್ಯಕ್ಷ ದೊಡ್ಡೇರಿ ಬಸವರಾಜು, ಕೊರಟಗೆರೆ ತಾಲ್ಲೂಕು ಅಧ್ಯಕ್ಷ ಕಾಮರಾಜು, ಗುಬ್ಬಿ ತಾಲೂಕು ಮುಖಂಡ ಕಳ್ಳಿಪಾಳ್ಯ ಲೋಕೇಶ್, ಎಸ್.ಟಿ. ಘಟಕ ರಾಜ್ಯ ಉಪಾಧ್ಯಕ್ಷ ಸೋಲಾರ್ ಕೃಷ್ಣಮೂರ್ತಿ, ರಾಜ್ಯ ಉಪಾಧ್ಯಕ್ಷ ಗಂಗಣ್ಣ, ನಗರಪಾಲಿಕೆ ಮಾಜಿ ಸದಸ್ಯರಾದ ಧರಣೇಂದ್ರಕುಮಾರ್, ಶ್ರೀನಿವಾಸ್‌ಪ್ರಸಾದ್, ಸೇವಾದಳ ಜಿಲ್ಲಾಧ್ಯಕ್ಷ ಕೆಂಪರಾಜು, ಎಸ್.ಸಿ. ಘಟಕ ನಗರ ಅಧ್ಯಕ್ಷ ಭೈರೇಶ್, ಮುಖಂಡರಾದ ಚಿಕ್ಕರಂಗಣ್ಣ, ಅಶ್ವತ್ಥ್, ಮಧುಗೌಡ, ತಾಹೇರಾ ಕುಲ್ಸಂ, ಲೀಲಾವತಿ, ಲಕ್ಷ್ಮಮ್ಮ, ರೇಖಾ, ಸರ್ವಮಂಗಳ, ಜಯಲಕ್ಷ್ಮಿ, ಯಶೋಧ, ಗುರು ಬಳ್ಳುಕರಾಯ, ಪುರವರ ಮೂರ್ತಿ, ನಾಗೇಶ್, ಮುಜಾಯಿದ್, ದರ್ಶನ್, ರಿಯಾಜ್, ಗೌಸ್ ಮೊದಲಾದವರು ಭಾಗವಹಿಸಿದ್ದರು.