ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಹಾಗೂ ಅಧಿಕಾರಿಗಳ ಹೊಣೆಗಾರಿಕೆ ಹೆಚ್ಚಿಸಿ ಕಾಲಮಿತಿಯಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದೇ ''''ಪ್ರಜಾಸೇವೆ ಆಂದೋಲನ''''ದ ಮುಖ್ಯ ಉದ್ದೇಶ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.
ಕನ್ನಡಪ್ರಭ ವಾರ್ತೆ ರಾಮನಗರ
ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಹಾಗೂ ಅಧಿಕಾರಿಗಳ ಹೊಣೆಗಾರಿಕೆ ಹೆಚ್ಚಿಸಿ ಕಾಲಮಿತಿಯಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದೇ ''''''''''''''''ಪ್ರಜಾಸೇವೆ ಆಂದೋಲನ''''''''''''''''ದ ಮುಖ್ಯ ಉದ್ದೇಶ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.
ತಾಲೂಕಿನ ಕೈಲಾಂಚ ಹೋಬಳಿ ಕೇಂದ್ರದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಪ್ರಜಾಸೇವಾ ಆಂದೋಲನಕ್ಕೆ ಚಾಲನೆ ನೀಡಿದ ಅವರು, ಜನರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಅಧಿಕಾರಿಗಳೇ ನೇರವಾಗಿ ಜನರ ಮನೆ ಬಾಗಿಲಿಗೆ ಬಂದು ಅಹವಾಲು ಆಲಿಸಲಿದ್ದಾರೆ. ಸ್ಥಳದಲ್ಲೇ ಸಾಧ್ಯವಾದಷ್ಟು ಸಮಸ್ಯೆ ಬಗೆಹರಿಸಿ, ಉಳಿದ ಅರ್ಜಿಗಳನ್ನೂ ತ್ವರಿತ ವಿಲೇವಾರಿ ಮಾಡುತ್ತಾರೆ ಎಂದರು.
ಪಂಚ ಗ್ಯಾರೆಂಟಿಗಳು, ವೃದ್ಧಾಪ್ಯ, ಅಂಗವಿಕಲ ವೇತನ ಸೇರಿದಂತೆ ವಿವಿಧ ಸವಲತ್ತುಗಳು ಸರ್ಕಾರದ ಆಶಯದಂತೆ ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಪಡಿತರ ಚೀಟಿ, ಬೀದಿ ದೀಪ, ರಸ್ತೆ, ಚರಂಡಿ, ಸಾಗುವಳಿ ಚೀಟಿಯಂತಹ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಸ್ಪಂದಿಸಬೇಕು ಎಂದು ತಿಳಿಸಿದರು.
ನಿಮ್ಮ ಸೇವಕನಾಗಿ ಕೆಲಸ ಮಾಡುತ್ತಿರುವೆ:
ನಿಮ್ಮೆಲ್ಲರ ಪ್ರೀತಿ ಆಶೀರ್ವಾದಿಂದ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿಯೂ ನಿಮ್ಮ ಮನೆ ಮಕ್ಕಳೇ ಶಾಸಕರಾಗಿದ್ದಾರೆ. ಇದೇ ಮೊದಲ ಬಾರಿಗೆ ಜಿಲ್ಲೆಯ ಮಕ್ಕಳಿಗೆ ಇಂತಹ ಅವಕಾಶ ಸಿಕ್ಕಿದ್ದು, ಜನರ ನಿರೀಕ್ಷೆಗಳು ಹುಸಿಯಾಗದಂತೆ ನಾವೆಲ್ಲರು ಜಿಲ್ಲೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇವೆ. ಹಿಂದಿನ ಶಾಸಕರು ಮತ್ತು ನಮ್ಮ ಕಾರ್ಯವೈಖರಿಯನ್ನು ತುಲನೆ ಮಾಡಿದರೆ ಅದು ನಿಮಗೇ ಗೊತ್ತಾಗುತ್ತದೆ ಎಂದರು.
ಚುನಾವಣಾ ಪೂರ್ವದಲ್ಲಿ ಅವಕಾಶ ನೀಡಿದರೆ ಜನರ ಋಣ ತೀರಿಸುವ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದೆವು. ಕೊಟ್ಟ ಮಾತಿನಂತೆ ನಿಮ್ಮ ಸೇವಕನಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಇಕ್ಬಾಲ್ ಹುಸೇನ್ ಹೇಳಿದರು.
ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಏತ ನೀರಾವರಿ ಯೋಜನೆ ಜಾರಿಗೊಳಿಸಲಾಗುತ್ತಿದೆ. ಮೊಟ್ಟೆದೊಡ್ಡಿ ಏತನೀರಾವರಿ ಯೋಜನೆ ಲೋಕಾರ್ಪಣೆಗೊಂಡಿದೆ. ಗಾಣಾಳು, ಕಾಳೇಗೌಡನದೊಡ್ಡಿ ಯೋಜನೆಗಳು ಪ್ರಗತಿಯಲ್ಲಿದ್ದು, ಕೆ.ಪಿ.ದೊಡ್ಡಿಯಲ್ಲಿಯೂ ಯೋಜನೆ ಬೇಕೆಂದು ಬೇಡಿಕೆ ಬಂದಿದೆ. ಮೂರು ತಿಂಗಳೊಳಗೆ ಮಂಚನಬೆಲೆಯಿಂದ ಕಸಬಾ ಮತ್ತು ಕೈಲಾಂಚ ಭಾಗದ ಪ್ರತಿ ಮನೆಗಳಿಗೆ ನೀರು ಪೂರೈಸಲಾಗುವುದು ಎಂದು ಹೇಳಿದರು.
ಬೆಂ.ದಕ್ಷಿಣ ಜಿಲ್ಲೆ ರಾಜ್ಯಕ್ಕೆ ಮಾದರಿ:
ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶದಿಂದ 5 ಕೆಪಿಎಸ್ ಶಾಲೆ ತೆರೆಯಲಾಗುತ್ತಿದೆ. ಕಾರ್ಖಾನೆಗಳ ಸಿಎಸ್ ಆರ್ ಅನುದಾನ ಬಳಸಿಕೊಂಡು ಒಂದೊಂದು ಶಾಲೆಗಳನ್ನು 14ರಿಂದ 15 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಕೆಪಿಎಸ್ ಶಾಲೆಗಳ ವಿಚಾರದಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆ ರಾಜ್ಯಕ್ಕೆ ಮಾದರಿಯಾಗಿದೆ. ಬಡವರಿಗೆ ನಿವೇಶನ ಒದಗಿಸಲು 300 ಎಕರೆ ಸರ್ಕಾರಿ ಜಾಗ ಗುರುತಿಸಲಾಗಿದೆ. ಅದರ ಅಭಿವೃದ್ಧಿಗೆ ಅನುದಾನವೂ ಮಂಜೂರಾಗಿದೆ. ಆಶ್ರಯ ಸಮಿತಿ ರಚಿಸಿ ಅರ್ಹರನ್ನು ಆಯ್ಕೆ ಮಾಡುತ್ತೇವೆ. ಈ ರೀತಿ ಕ್ಷೇತ್ರದ ಋಣ ತೀರಿಸುವ ಕೆಲಸ ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ ಎಂದು ಇಕ್ಬಾಲ್ ಹುಸೇನ್ ಹೇಳಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಕೆ.ರಾಜು ಮಾತನಾಡಿ, ಈ ಕ್ಷೇತ್ರದಿಂದ ಆಯ್ಕೆಯಾಗಿ ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಮಣ್ಣಿನ ಮಕ್ಕಳು ರೈತಪರ ಯಾವುದೇ ಕಾರ್ಯಕ್ರಮ ರೂಪಿಸಲಿಲ್ಲ. ಆದರೆ, ಕಾಂಗ್ರೆಸ್ ನೇತೃತ್ವದ ರಾಜ್ಯಸರ್ಕಾರ ರೈತರು, ಮಹಿಳೆಯರು ಸೇರಿದಂತೆ ಎಲ್ಲ ವರ್ಗದ ಜನರಿಗೂ ಆರ್ಥಿಕ ಶಕ್ತಿ ತುಂಬುವ ಕೆಲಸ ಮಾಡಿದೆ. ಪಂಚ ಗ್ಯಾರಂಟಿಗಳಿಂದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ಮಹತ್ತರ ಸಾಧನೆ ಮಾಡಿದೆ ಎಂದು ಬಣ್ಣಿಸಿದರು.
ತಹಸೀಲ್ದಾರ್ ತೇಜಸ್ವಿನಿ ಮಾತನಾಡಿ, ಸಣ್ಣಪುಟ್ಟ ಕೆಲಸಗಳಿಗೆ ತಾಲೂಕು ಕೇಂದ್ರಗಳಿಗೆ ಅಲೆಯುವುದನ್ನು ತಪ್ಪಿಸಿ, ಅರ್ಹ ಫಲಾನುಭವಿಗಳಿಗೆ ಸರ್ಕಾರದ ಕಲ್ಯಾಣ ಯೋಜನೆಗಳು ತಾರತಮ್ಯವಿಲ್ಲದೆ ನೇರವಾಗಿ ತಲುಪಿಸುವುದು ಈ ಯೋಜನೆಯ ಮುಖ್ಯ ಗುರಿ ಎಂದರು.
ಸಭೆಯಲ್ಲಿ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಚೇತನ್ ಕುಮಾರ್, ತಾಪಂ ಇಒ ಪೂರ್ಣಿಮಾ, ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ತಾಲೂಕು ಅಧ್ಯಕ್ಷ ವಿ.ಎಚ್.ರಾಜು, ಹುಲಿಕೆರೆ ಗುನ್ನೂರು ಗ್ರಾಪಂ ಮಾಜಿ ಅಧ್ಯಕ್ಷ ಗಿರೀಶ್, ಮುಖಂಡರಾದ ಜಯಣ್ಣ, ಭದ್ರಯ್ಯ, ಅಶ್ವತ್ಥ್, ಧನರಾಜು, ರವಿ, ರೇಣುಕಪ್ಪ, ಅಪ್ಪಾಜಣ್ಣ, ರಮೇಶ್, ಕೆಂಪರಾಮು ಮತ್ತಿತರರು ಉಪಸ್ಥಿತರಿದ್ದರು.
ಜನರು ತಮ್ಮ ಸಮಸ್ಯೆಗಳ ಅರ್ಜಿಗಳನ್ನು ಹಿಡಿದು ಕಚೇರಿಗಳಿಗೆ ಅಲೆದಾಡಬಾರದು. ಬದಲಿಗೆ ಸರ್ಕಾರಿ ಆಡಳಿತವೇ ಜನರ ಮನೆ ಬಾಗಿಲಿಗೆ ಹೋಗಿ ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎನ್ನುವ ಸದುದ್ದೇಶದಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ ಎಂಬ ಘೋಷವಾಕ್ಯದೊಂದಿಗೆ ಪ್ರಜಾಸೇವೆ ಆಂದೋಲನ ಕಾರ್ಯಕ್ರಮ ಜಾರಿಗೆ ತಂದಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.