ಹೊಸಪೇಟೆ: ಕಚೇರಿಗಳಿಗೆ ಅಲೆದಾಡಿ ಮಾಹಿತಿ ಪಡೆಯಲು ಸಾಧ್ಯವಾಗದ ಸಾರ್ವಜನಿಕರ ಅನುಕೂಲಕ್ಕಾಗಿ ಸರ್ಕಾರವು ಪ್ರಜಾಸೇವೆ ಕಾರ್ಯಕ್ರಮ ಆಯೋಜಿಸಿದ್ದು, ಜನರ ಮನೆ ಬಾಗಿಲಿಗೆ ಸೇವೆ ಒದಗಿಸುವ ಮೂಲಕ ಕಾಲಮಿತಿಯೊಳಗೆ ಸಮಸ್ಯೆ ಬಗೆಹರಿಸಲಾಗುವುದು ಎಂದು ತಾಪಂ ಕಾರ್ಯ ನಿರ್ವಹಣಾಧಿಕಾರಿ ಆಲಂ ಭಾಷಾ ತಿಳಿಸಿದರು.
ಕಮಲಾಪುರ ಪುರಸಭೆ ವ್ಯಾಪ್ತಿಯ ಎಲ್ಲ ಗ್ರಾಪಂಗಳ ಜನರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು. ಕೇವಲ ನಿವೇಶನ ಮತ್ತು ಮನೆಗೆ ಸಂಬಂಧಿಸಿದ ಸಮಸ್ಯೆ ಮಾತ್ರವಲ್ಲದೆ, ಕೌಟುಂಬಿಕ ಸಮಸ್ಯೆ, ಬಾಲ್ಯ ವಿವಾಹ, ಶಿಕ್ಷಣ ವಂಚಿತ ಮಕ್ಕಳ ಸಮಸ್ಯೆ, ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ವಿಚಾರಗಳು ಹಾಗೂ ಹೆಣ್ಣುಮಕ್ಕಳು ಬಹಿರಂಗವಾಗಿ ಹೇಳಿಕೊಳ್ಳಲಾಗದ ಸೂಕ್ಷ್ಮ ಸಮಸ್ಯೆ ಇಲ್ಲಿ ಮುಕ್ತವಾಗಿ ಹೇಳಿಕೊಳ್ಳಬಹುದು. ಜನರು ನೀಡುವ ಅರ್ಜಿ ವಿಳಂಬವಿಲ್ಲದೆ ಸಂಬಂಧಪಟ್ಟ ಇಲಾಖೆಗಳಿಗೆ ತಲುಪಿಸಿ ಕಾನೂನಿನ ಚೌಕಟ್ಟಿನಲ್ಲಿ ಪರಿಹರಿಸಲಾಗುವುದು. ಪರಿಹಾರವಾಗದಿದ್ದಲ್ಲಿ ಮೇಲಾಧಿಕಾರಿಗಳು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ಭರವಸೆ ನೀಡಿದರು.
ಸಾರ್ವಜನಿಕರು ತಮ್ಮ ಮನೆಯ ಸುತ್ತಮುತ್ತ ಗಿಡಮರ ಬೆಳೆಸಬೇಕು. ತೋಟಗಾರಿಕೆ ಇಲಾಖೆಯಲ್ಲಿ ಸಾಕಷ್ಟು ಸಸಿ ಲಭ್ಯವಿದ್ದು, ಜನರು ಅವುಗಳನ್ನು ಪಡೆದು ಬೆಳೆಸುವ ಮೂಲಕ ಹಸಿರು ನಮ್ಮ ಉಸಿರಾಗಲಿ ಎಂಬ ಆಶಯ ಸಾಕಾರಗೊಳಿಸಬೇಕು. ಅಲ್ಲದೆ ಗ್ರಾಪಂಗೆ ಬರುವ ಸಾರ್ವಜನಿಕರೊಂದಿಗೆ ಅಧಿಕಾರಿಗಳು ಸೌಜನ್ಯದಿಂದ ವರ್ತಿಸಿ ಸರಿಯಾಗಿ ಸ್ಪಂದಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.ಜನರ ಅಹವಾಲುಗಳು:
ಹಂಪಿಯಲ್ಲಿ ಹೋಮ್ ಸ್ಟೇಗೆ ಪ್ರತ್ಯೇಕ ನಿಯಮಗಳಿದ್ದು, ಆ ಪ್ರಕ್ರಿಯೆ ಪ್ರಗತಿಯಲ್ಲಿದೆ. ನಿಯಮಾನುಸಾರ ಪರವಾನಗಿ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.