ಫಲಿತಾಂಶ ವೃದ್ಧಿಗೆ ಸಂಪನ್ಮೂಲ ವ್ಯಕ್ತಿಗಳ ಹೆಗಲು

KannadaprabhaNewsNetwork |  
Published : May 26, 2026, 02:00 AM IST
ತರಬೇತಿ ನಿರತ ವಿಷಯವಾರು ಸಂಪನ್ಮೂಲ ವ್ಯಕ್ತಿಗಳಾದ ಗಿರೀಶ ದೊಡ್ಡಮನಿ, ಸಂಜೀವ ಭೋಶಟ್ಟಿ, ಮಹೇಶ ಅಂಗಡಿ, ಎಂ.ಎಚ್‌.ಸವದತ್ತಿ. | Kannada Prabha

ಸಾರಾಂಶ

ವಿದ್ಯಾಕಾಶಿ ಧಾರವಾಡವನ್ನು ಒಡಲಲ್ಲಿ ಇಟ್ಟುಕೊಂಡೂ ಎಸ್ಸೆಸ್ಸೆಲ್ಸಿ ಉತ್ತಮ ಫಲಿತಾಂಶಕ್ಕಾಗಿ ತಿಣುಕಾಡುತ್ತಿದ್ದ ಬೆಳಗಾವಿ ಶೈಕ್ಷಣಿಕ ವಲಯಕ್ಕೆ 2025-26ನೇ ಸಾಲು ನಿಜಕ್ಕೂ ನೆನಪಿಡುವ ವರ್ಷ. ಇದರ ವ್ಯಾಪ್ತಿಯಲ್ಲಿ ಬರುವ 9 ಜಿಲ್ಲೆಗಳು ಇದ್ದಕ್ಕಿದ್ದಂತೆ ಮೈ ಕೊಡವಿ ಎದ್ದು, ಯದ್ವಾತದ್ವಾ ಫಲಿತಾಂಶ ವೃದ್ಧಿಸಿಕೊಂಡು ಸಂಭ್ರಮದಲ್ಲಿವೆ.

ಹುಬ್ಬಳ್ಳಿ:

ವಿದ್ಯಾಕಾಶಿ ಧಾರವಾಡವನ್ನು ಒಡಲಲ್ಲಿ ಇಟ್ಟುಕೊಂಡೂ ಎಸ್ಸೆಸ್ಸೆಲ್ಸಿ ಉತ್ತಮ ಫಲಿತಾಂಶಕ್ಕಾಗಿ ತಿಣುಕಾಡುತ್ತಿದ್ದ ಬೆಳಗಾವಿ ಶೈಕ್ಷಣಿಕ ವಲಯಕ್ಕೆ 2025-26ನೇ ಸಾಲು ನಿಜಕ್ಕೂ ನೆನಪಿಡುವ ವರ್ಷ. ಇದರ ವ್ಯಾಪ್ತಿಯಲ್ಲಿ ಬರುವ 9 ಜಿಲ್ಲೆಗಳು ಇದ್ದಕ್ಕಿದ್ದಂತೆ ಮೈ ಕೊಡವಿ ಎದ್ದು, ಯದ್ವಾತದ್ವಾ ಫಲಿತಾಂಶ ವೃದ್ಧಿಸಿಕೊಂಡು ಸಂಭ್ರಮದಲ್ಲಿವೆ.

ಉತ್ತರ ಕನ್ನಡ ಜಿಲ್ಲೆ ಯಥಾಸ್ಥಿತಿ (3 ನೇ ಸ್ಥಾನ) ಕಾಪಾಡಿಕೊಂಡಿದ್ದರೆ, ಶಿರಸಿ, ಗದಗ ಒಂದು ಹೆಜ್ಜೆ ಮುಂದೆ ಬಂದಿವೆ. ಬಾಗಲಕೋಟೆ 2, ಚಿಕ್ಕೋಡಿ 3, ಹಾವೇರಿ, ಧಾರವಾಡ 6, ಬೆಳಗಾವಿ 7, ವಿಜಯಪುರ 12 ಸ್ಥಾನಗಳನ್ನು ಹೆಚ್ಚಿಸಿಕೊಳ್ಳುವ ಮೂಲಕ ಇಡೀ ಶೈಕ್ಷಣಿಕ ಇಲಾಖೆ ಇತ್ತ ತಿರುಗಿ ನೋಡುವಂತಾಗಿದೆ.

ಅಪರ ಆಯುಕ್ತ ಡಾ.ರುದ್ರೇಶ ಘಾಳಿ, ಆಯಾ ಜಿಲ್ಲಾಧಿಕಾರಿಗಳು, ಡಿಡಿಪಿಐ, ಬಿಇಒ ಮತ್ತು ಸಂಪನ್ಮೂಲ ವ್ಯಕ್ತಿಗಳ ಅವಿರತ ಪರಿಶ್ರಮ ಫಲಿತಾಂಶದಲ್ಲಿ ಫಲವಾಗಿ ಅರಳಿದೆ. ಈ ಅಭೂತಪೂರ್ವ ಗೆಲುವು ಮತ್ತು ಮುಂದಿನ ಹೆಜ್ಜೆಗಳ ಬಗ್ಗೆ ಪರಾಮರ್ಶೆ ಮಾಡಲು ಡಾ.ಘಾಳಿ ಮಂಗಳವಾರ (ಮೇ 26) ತಮ್ಮ ಧಾರವಾಡ ಕಚೇರಿಯಲ್ಲಿ 9 ಜಿಲ್ಲೆಗಳ ಡಿಡಿಪಿಐ, 54 ಬಿಇಒಗಳ ಸಭೆ ಕರೆದಿದ್ದಾರೆ.

ಸಂಪನ್ಮೂಲ ವ್ಯಕ್ತಿಗಳು:

ಅಪರ ಆಯುಕ್ತರು, ಡಿಡಿಪಿಐಗಳು ಮತ್ತು ಬಿಇಒಗಳು ಸೇರಿ ರೂಪಿಸಿದ ಯೋಜನಾಬದ್ಧ ಕಲಿಕಾ ಪಾಠದ ಹೆಜ್ಜೆಗಳು ಸಂಪನ್ಮೂಲ ವ್ಯಕ್ತಿಗಳ ಮೂಲಕ ಕಟ್ಟುನಿಟ್ಟಾಗಿ ಅನುಷ್ಠಾನಗೊಂಡು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಮನ ತಟ್ಟಿವೆ.

ಎಲ್‌ಬಿಎ, ಗುರಿ ಆಧಾರಿತ 40 ಪ್ಲಸ್‌ ಸೂತ್ರ, ಪಠ್ಯಕ್ರಮ ಅವಲೋಕನ, ಅಂಕ ಹಂಚಿಕೆಯ ನೀಲನಕ್ಷೆ, ಚಟುವಟಿಕೆ ಆಧಾರಿತ ಕಲಿಕೆ, ಸಾಮರ್ಥ್ಯಕ್ಕೆ ಅನುಗುಣವಾಗಿ ಕಲಿಕೆ, ಸಂದೇಹ ನಿವಾರಣೆ, ಅಂಕಗಳಿಗೆ ತಕ್ಕಂತೆ ಬರೆಯುವುದು, ಮಿಷನ್‌ ವಿದ್ಯಾಕಾಶಿ ಮುಂತಾದವುಗಳು ಕಲಿಕೆಯಲ್ಲಿ ಹಿಂದುಳಿದ ಮಕ್ಕಳು ಕೂಡ ಪಾಸಾಗುವಂತೆ ಮಾಡಿವೆ. ಅದರಲ್ಲೂ ಮಾದರಿ ಪ್ರಶ್ನೆಪತ್ರಿಕೆ ಮಕ್ಕಳ ಮೆದುಳಲ್ಲಿ ಅಚ್ಚೊತ್ತಿದ್ದವು. ಹಾಗಾಗಿ ಇಂದು ದೊಡ್ಡಮಟ್ಟದ ಫಲಿತಾಂಶ ಲಭಿಸುವಲ್ಲಿ ಕಾರಣವಾಗಿವೆ.

ಸಂಪನ್ಮೂಲ ವ್ಯಕ್ತಿಗಳ ಪಾತ್ರವಂತೂ ಈ ಬಾರಿ ಹಿಂದೆಂದಿಗಿಂತಲೂ ನಿರ್ಣಾಯಕವಾಗಿತ್ತು. ಎರಡು, ಮೂರು ಜಿಲ್ಲೆಗಳನ್ನು ಸೇರಿಸಿ ಶಿಕ್ಷಕರಿಗೆ ತರಬೇತಿ, ತಾಲೂಕಾವಾರು ಪುರ್ನಮನನ ಕಾರ್ಯಕ್ರಮ, ನಿರಂತರ ನಿಗಾ ಇಡುವುದು ತರಬೇತಿಯ ಭಾಗವಾಗಿದ್ದವು.

ಮೂಲತಃ ವಿಜ್ಞಾನ ಶಿಕ್ಷಕರಾಗಿ ಸದ್ಯ ಗದಗ ಉಪನಿರ್ದೇಶಕರ ಕಚೇರಿಯಲ್ಲಿ ತಾಂತ್ರಿಕ ಸಹಾಯಕರಾಗಿರುವ ಎಂ.ಎಚ್‌.ಸವದತ್ತಿ ಅವರು ತಮ್ಮ ಬಿಡುವಿನ ವೇಳೆ (2ನೇ ಶನಿವಾರ, ಭಾನುವಾರ, ರಜಾದಿನ) ಮತ್ತು ತಮ್ಮ ಸೇವೆಗೆ ರಜೆ (ಸಿಎಲ್‌, ಒಒಡಿ) ಹಾಕಿ ಮಕ್ಕಳನ್ನು ತರಬೇತಿಗೊಳಿಸಿರುವುದು ಗಮನಿಸಿದರೆ ಈ ಭಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶದ ಹಿಂದಿನ ತಪಸ್ಸು, ಸಂಕಷ್ಟ ಅರ್ಥವಾಗದೇ ಇರದು.

ಹೀಗೆ ಹಲವು ಜನ ಸಂಪನ್ಮೂಲ ವ್ಯಕ್ತಿಗಳು ಪಟ್ಟು ಹಿಡಿದು ತಮ್ಮ ಜವಾಬ್ದಾರಿ ನಿಭಾಯಿಸುತ್ತ ಶಿಕ್ಷಕರನ್ನು ಹುರಿದುಂಬಿಸುತ್ತ ಫಲಿತಾಂಶ ಅಪಾರ ಪ್ರಮಾಣದಲ್ಲಿ ಏರಿಕೆಯಾಗವಂತೆ ಮಾಡಿದ್ದಾರೆ.

ಇದಷ್ಟೇ ಅಲ್ಲ ಮಾಧ್ಯಮಗಳು ಮತ್ತು ಸಾರ್ವಜನಿಕರೂ ಈ ಭಾರಿ ಫಲಿತಾಂಶ ಹೆಚ್ಚಳಕ್ಕೆ ಕೈಗೂಡಿಸಿರುವುದು ಗಮನೀಯ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡ ಶಾಲೆ ಯಾರೇ ಬಂದ್ ಮಾಡಲು ಮುಂದಾದರೂ ಸಹಿಸಬಾರದು-ಬಸವರಾಜ ಹೊರಟ್ಟಿ
ಸಿರಿಗೇರಿ ಕ್ರಾಸ್‌ನಲ್ಲಿ ಜೈವಿಕ ಸಂಪನ್ಮೂಲ ಕೇಂದ್ರ ಉದ್ಘಾಟನೆ