ಕನ್ನಡಪ್ರಭ ವಾರ್ತೆ ಅರಸೀಕೆರೆ
ಲೋಕಾಯುಕ್ತ ಸಂಸ್ಥೆಯ ಉದ್ದೇಶ ಶಿಕ್ಷೆ ನೀಡುವುದಕ್ಕಿಂತ ಮುಂಚಿತವಾಗಿ ಅಧಿಕಾರಿಗಳನ್ನು ಎಚ್ಚರಿಸುವುದು, ಭ್ರಷ್ಟಾಚಾರದಿಂದ ದೂರವಿರಲು ಜಾಗೃತಿ ಮೂಡಿಸುವುದೇ ಆಗಿದೆ. ಪ್ರಾಮಾಣಿಕ ಸೇವೆ ಸಲ್ಲಿಸಿದರೆ ಸಾರ್ವಜನಿಕರ ಗೌರವ ಮತ್ತು ನೆಮ್ಮದಿ ಜೀವನವನ್ನು ಪಡೆಯಬಹುದು ಎಂದು ಸಲಹೆ ನೀಡಿದರು.ಸಾರ್ವಜನಿಕರು ಮತ್ತು ಅಧಿಕಾರಿಗಳ ನಡುವೆ ಸಮನ್ವಯತೆ ಇರಬೇಕಾದರೆ ಕಚೇರಿಗಳಲ್ಲಿ ಸಿಬ್ಬಂದಿ ಕಡ್ಡಾಯವಾಗಿ ಹಾಜರಿರಬೇಕು. ಕರ್ತವ್ಯ ನಿಮಿತ್ತ ಕಚೇರಿಯಿಂದ ಹೊರಗಡೆ ಹೋಗುವ ಸಂದರ್ಭಗಳಲ್ಲಿ ಮೇಲಧಿಕಾರಿಗಳ ಅನುಮತಿ ಹಾಗೂ ಮಾಹಿತಿ ನೀಡುವುದು ಅಗತ್ಯ ಎಂದು ಸೂಚಿಸಿದರು.ಸಭೆಯಲ್ಲಿ ಸಾರ್ವಜನಿಕರಿಂದ 12ಕ್ಕೂ ಹೆಚ್ಚು ಅಹವಾಲುಗಳು ಸಲ್ಲಿಕೆಯಾಗಿದ್ದು, ಜಮೀನು ಮತ್ತು ಮನೆ ನಿವೇಶನ ಮಂಜೂರು, ಖಾತೆ ಸಮಸ್ಯೆಗಳು, ಕೆರೆ ಹಾಗೂ ರಾಜಕಾಲುವೆ ಒತ್ತುವರಿ, ನಗರದಲ್ಲಿ ಅವೈಜ್ಞಾನಿಕ ಕಟ್ಟಡ ನಿರ್ಮಾಣ, ರಸ್ತೆಗಳ ದುರ್ಬಳಕೆ ಸೇರಿದಂತೆ ಹಲವು ಸಮಸ್ಯೆಗಳು ಮುಂದಿಡಲಾಯಿತು.ಬಾಣಾವರದ ಹಿರಿಯ ನಾಗರಿಕರಾದ ಲಲಿತಮ್ಮ ಅವರು ಮನೆ ನಿವೇಶನ ಕುರಿತು ಅಹವಾಲು ಸಲ್ಲಿಸಿದಾಗ, ತಹಸೀಲ್ದಾರ್ ಎಂ.ಜಿ. ಸಂತೋಷ್ ಕುಮಾರ್ ಅವರು ಕಾನೂನು ವ್ಯಾಪ್ತಿಯಲ್ಲಿ ಪರಿಹಾರ ನೀಡುವ ಭರವಸೆ ನೀಡಿದರು. ಅಲ್ಲದೇ ದೊಡ್ಡಮೇಟಿ ಕುರ್ಕೆ ಗ್ರಾಮದ ಸರ್ಕಾರಿ ಶಾಲೆಗೆ ಆಟದ ಮೈದಾನ ಒದಗಿಸುವುದು ಹಾಗೂ ಶಾಲಾ ಭೂಮಿಯ 6 ಗುಂಟೆ ಒತ್ತುವರಿ ತೆರವುಗೊಳಿಸುವಂತೆ ಗ್ರಾಮಸ್ಥ ಭೈರಪ್ಪ ಮನವಿ ಸಲ್ಲಿಸಿದರು. ಸಂಬಂಧಿಸಿದ ಪಿಡಿಒ, ತಹಸೀಲ್ದಾರ್, ಇಒ ಮತ್ತು ಬಿಇಒ ಅವರಿಗೆ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತ ಉಪಾಧೀಕ್ಷರು ನಿರ್ದೇಶಿಸಿದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ಎಂ.ಜಿ. ಸಂತೋಷ್ ಕುಮಾರ್, ಬಿಇಒ ಮೋಹನ್ ಕುಮಾರ್, ನಗರ ವೃತ್ತ ನಿರೀಕ್ಷಕ ಕೃಷ್ಣ ಕುಮಾರ್, ಪೌರಾಯುಕ್ತ ಕೃಷ್ಣಮೂರ್ತಿ, ತಹಸೀಲ್ದಾರ್ ಗ್ರೇಡ್-2 ಪಾಲಾಕ್ಷ, ಶಿರಸ್ತೇದಾರ್ ಶಿವಶಂಕರ್, ಅರಣ್ಯ ವಲಯಾಧಿಕಾರಿ ಹೇಮಂತ್, ಲೋಕಾಯುಕ್ತ ಸಿಬ್ಬಂದಿಯಾದ ಯದುಕುಮಾರ್, ಉಮೇಶ್, ವಿರೇಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಪಿಡಿಒಗಳು, ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.