ಮತದಾನದ ಹಕ್ಕನ್ನು ತಪ್ಪದೆ ಪಾಲಿಸಿ ಸಂವಿಧಾನ ಗೌರವಿಸಿ: ನ್ಯಾ.ಎಚ್.ಆರ್.ಹೇಮಾ

KannadaprabhaNewsNetwork | Published : Jan 26, 2025 1:32 AM

ಸಾರಾಂಶ

Respect the Constitution by exercising your right to vote: Justice H.R. Hema

-ಚಳ್ಳಕೆರೆ ನಗರದ ತಾಲೂಕು ಕಚೇರಿ ಮುಂಭಾಗ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ

-----

ಕನ್ನಡಪ್ರಭವಾರ್ತೆ ಚಳ್ಳಕೆರೆ

ಸಂವಿಧಾನಕ್ಕೆ ಪರಮೋಚ್ಚ ಅಧಿಕಾರವಿದೆ. ಪ್ರತಿಯೊಬ್ಬ ಮತದಾರರನ್ನೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯ ಬಗ್ಗೆ ಮಾಹಿತಿ ಪಡೆದು ಹೆಸರು ನೊಂದಾಯಿಸಿಕೊಳ್ಳುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಬೇಕೆಂದು ಜೆಎಂಎಫ್‌ಸಿ ನ್ಯಾಯಾಧೀಶೆ ಎಚ್.ಆರ್.ಹೇಮಾ ತಿಳಿಸಿದರು.

ಅವರು ತಾಲೂಕು ಕಚೇರಿ ಮುಂಭಾಗದಲ್ಲಿ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ರಾಜ್ಯ ಚುನಾವಣಾ ಇಲಾಖೆ ಎಲ್ಲೆಡೆ ಮತದಾರರ ಜಾಗೃತಿ ಅಭಿಯಾನವನ್ನು ಕೈಗೊಂಡಿದೆ. ಮತದಾರರು ತಮ್ಮ ಹೆಸರು ಸೇರ್ಪಡೆಗೆ ನಿಗದಿತ ಅರ್ಜಿ ನಮೂನೆ ಸಲ್ಲಿಸಬೇಕಿದೆ. ಪ್ರತಿಯೊಬ್ಬ ಮತದಾರನ ಹಕ್ಕು ರಕ್ಷಿಸುವಲ್ಲಿ ಚುನಾವಣ ಆಯೋಗ ಈ ಕ್ರಮ ಕೈಗೊಂಡಿದೆ. ಯಾರೂ ಸಹ ನಿರ್ಲಕ್ಷೆವಹಿಸದೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಿ ಹಕ್ಕು ಚಲಾಯಿಸುವಂತೆ ಮನವಿ ಮಾಡಿದರು.

ಮತದಾನಪಟ್ಟಿ ಪರಿಷ್ಕರಣೆ ಹಾಗೂ ಸಿದ್ಧತೆಯ ಬಗ್ಗೆ ತರಬೇತುದಾರ ಸತೀಶ್ ಮಾತನಾಡಿ, ಈಗಾಗಲೇ ಚಳ್ಳಕೆರೆಯಲ್ಲಿ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ಬಗ್ಗೆ ಯಾರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿಕೊಳ್ಳಬೇಕು, ಎಂತಹ ಸಂದರ್ಭದಲ್ಲಿ ಸೇರ್ಪಡೆಮಾಡಿಕೊಳ್ಳಬೇಕು, ಮತದಾರರ ಪಟ್ಟಿಯಲ್ಲಿ ಲೋಪದೋಷವಾಗದಂತೆ ಎಚ್ಚರಿಕೆ ವಹಿಸುವ ಬಗ್ಗೆ ತಿಳಿಸಿದರು.

ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಮತಗಟ್ಟೆ ಅಧಿಕಾರಿಗಳು ಸಾಕಷ್ಟು ಮಾಹಿತಿಗಳನ್ನು ಸಂಬಂಧಪಟ್ಟ ಚುನಾವಣೆ ಶಾಖೆಯಿಂದ ಪಡೆದು ಪೂರ್ಣಗೊಳಿಸಬೇಕು, ಯಾವುದೇ ಸಮಸ್ಯೆ ಇದ್ದರೂ ನೇರವಾಗಿ ಸಂಪರ್ಕಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದರು.

ತಹಸೀಲ್ದಾರ್‌ ರೇಹಾನ್‌ಪಾಷ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್, ಸಮಾಜಕಲ್ಯಾಣ ಇಲಾಖೆ ಅಧಿಕಾರಿ ದೇವ್ಲಾನಾಯ್ಕ, ವಕೀಲರ ಸಂಘದ ತಾಲೂಕು ಅಧ್ಯಕ್ಷ ಕೆ.ಎಂ.ನಾಗರಾಜು ಉಪಸ್ಥಿತರಿದ್ದರು.

----

ಪೋಟೋ: ಚಳ್ಳಕೆರೆ ನಗರದ ತಾಲೂಕು ಕಚೇರಿ ಮುಂಭಾಗದಲ್ಲಿ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ನಡೆಸಲಾಯಿತು.

೨೫ಸಿಎಲ್‌ಕೆ೧

Share this article