ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ: ಕೆ.ಆರ್.ನಂದಿನಿ

KannadaprabhaNewsNetwork |  
Published : Jul 06, 2026, 02:00 AM IST
2ಕೆಎಂಎನ್ ಡಿ12 | Kannada Prabha

ಸಾರಾಂಶ

ಗ್ರಾಪಂನ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಕರ್ತವ್ಯ ಆಪ್ ಮೂಲಕ ಹಾಜರಾತಿ ದಾಖಲಿಸಬೇಕು. ಈ ಬಗ್ಗೆ ಯಾವುದೇ ತಾಂತ್ರಿಕ ಸಮಸ್ಯೆಗಳಿದ್ದಲ್ಲಿ ವಾರದೊಳಗೆ ಅವುಗಳನ್ನು ಪರಿಹರಿಸಿಕೊಂಡು ನಿಯಮಿತವಾಗಿ ಹಾಜರಾತಿ ದಾಖಲಿಸಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಓ) ಜನಸ್ನೇಹಿ ಆಡಳಿತ ನೀಡಬೇಕು ಎಂದು ಜಿಪಂ ಸಿಇಒ ಕೆ.ಆರ್.ನಂದಿನಿ ಸೂಚನೆ ನೀಡಿದರು.

ನಗರದ ಜಿಪಂ ಸಭಾಂಗಣದಲ್ಲಿ ನಡೆದ ವೀಡಿಯೋ ಸಂವಾದದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಿಡಿಒಗಳು ಸಾರ್ವಜನಿಕರಿಗೆ ಲಭ್ಯವಿಲ್ಲ ಹಾಗೂ ದೂರವಾಣಿ ಕರೆ ಸ್ವೀಕರಿಸುತ್ತಿಲ್ಲ ಎಂಬ ಅನೇಕ ದೂರುಗಳು ಜಿಪಂಗೆ ಸ್ವೀಕೃತವಾಗಿವೆ. ಸಾರ್ವಜನಿಕರೊಂದಿಗೆ ಸೌಹಾರ್ದಯುತವಾಗಿ ಸಂಪರ್ಕ ಕಾಯ್ದುಕೊಂಡು ಕೆಲಸ ಮಾಡಬೇಕು ಎಂದರು.

ಅಧಿಕಾರಿ ಮತ್ತು ಸಿಬ್ಬಂದಿ ಕಚೇರಿ ವೇಳೆಯಲ್ಲಿ ಸಾರ್ವಜನಿಕರಿಗೆ ಲಭ್ಯವಿಲ್ಲ ಎಂಬ ದೂರುಗಳು ಬರದಂತೆ ಗಮನ ಹರಿಸಬೇಕು. ಪ್ರಭಾರ ಹೊಂದಿರುವ ಪಿಡಿಒಗಳು ಗ್ರಾಪಂನಲ್ಲಿ ಲಭ್ಯವಿರುವ ದಿನಗಳ ಬಗ್ಗೆ ಮಾಹಿತಿಯನ್ನು ಫಲಕದಲ್ಲಿ ಪ್ರಕಟಿಸಿ ಯಾವ ದಿನ ಯಾವ ಗ್ರಾಪಂನಲ್ಲಿ ಲಭ್ಯವಿರುವುದಾಗಿ ತಿಳಿಸಿ ಜನರಿಗೆ ತೊಂದರೆಯಾಗದ ರೀತಿಯಲ್ಲಿ ಕರ್ತವ್ಯ ನಿರ್ವಹಿಸುವಂತೆ ತಾಕೀತು ಮಾಡಿದರು.

ಗ್ರಾಪಂನ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಕರ್ತವ್ಯ ಆಪ್ ಮೂಲಕ ಹಾಜರಾತಿ ದಾಖಲಿಸಬೇಕು. ಈ ಬಗ್ಗೆ ಯಾವುದೇ ತಾಂತ್ರಿಕ ಸಮಸ್ಯೆಗಳಿದ್ದಲ್ಲಿ ವಾರದೊಳಗೆ ಅವುಗಳನ್ನು ಪರಿಹರಿಸಿಕೊಂಡು ನಿಯಮಿತವಾಗಿ ಹಾಜರಾತಿ ದಾಖಲಿಸುವಂತೆ ತಾಕೀತು ಮಾಡಿದರು.

ಗ್ರಾಪಂಗಳಲ್ಲಿ ಆಡಳಿತ ಶಿಸ್ತು, ಪಾರದರ್ಶಕತೆ ಹಾಗೂ ಸಾರ್ವಜನಿಕ ಸೇವೆಗಳ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಸಾಕಷ್ಟು ಸಮಸ್ಯೆಗಳು ಕ್ಷೇತ್ರ ಮಟ್ಟದಲ್ಲಿಯೇ ಬಗೆಹರಿಯುತ್ತವೆ. ಈ ಬಗ್ಗೆ ಗಮನ ಹರಿಸುವಂತೆ ಸೂಚನೆ ನೀಡಿದರು.

ಪ್ರತೀ ವಾರ ಕನಿಷ್ಠ ಒಂದೊಂದು ಗ್ರಾಪಂಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ತಾಪಂ ಇಒ ಮತ್ತು ಸಹಾಯಕ ನಿರ್ದೇಶಕರು, ಲೆಕ್ಕಾಕಾರಿಗಳಿಗೆ ಸೂಚಿಸಿದ ಕೆ.ಆರ್.ನಂದಿನಿ ಅವರು, ವಿವಿಧ ಅಭಿವೃದ್ಧಿ ಯೋಜನೆಗಳು ಮತ್ತು ಸರ್ಕಾರದ ಕಾರ್ಯಕ್ರಮಗಳ ಅನುಷ್ಠಾನದ ಪ್ರಗತಿ ಪರಿಶೀಲಿಸಿ ವರದಿ ಸಲ್ಲಿಸಬೇಕು. ಈ ಕಾರ್ಯದ ಪ್ರಗತಿಯನ್ನು ಜಿಲ್ಲಾ ಮಟ್ಟದಲ್ಲಿ ಪ್ರತಿ ವಾರ ಪರಿಶೀಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಎಚ್‌ಪಿವಿ ಲಸಿಕೆ ಬಗ್ಗೆ ಪ್ರಚಾರ ಮಾಡಲು ಸೂಚನೆ:

ಗರ್ಭಕಂಠ ಕ್ಯಾನ್ಸರ್ ತಡೆಗೆ 14ರಿಂದ 15.5 ವಯೋಮಾನದ ಹೆಣ್ಣು ಮಕ್ಕಳಿಗೆ ಎಚ್‌ಪಿವಿ ಲಸಿಗೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಎಚ್‌ಪಿವಿ ಲಸಿಕಾ ಅಭಿಯಾನ ಯಶಸ್ವಿಯಾಗಿ ಅನುಷ್ಠಾನಗೊಳ್ಳಲು ಗ್ರಾಪಂಗಳಲ್ಲಿ ವ್ಯಾಪಕ ಜನಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಸಲಹೆ ನೀಡಿದರು.

ಈ ಬಗ್ಗೆ ಪ್ರಚಾರ ಸಾಮಗ್ರಿಗಳನ್ನು ಎಲ್ಲಾ ಗ್ರಾಪಂಗಳಿಗೆ ಒದಗಿಸಲಾಗುವುದು. ಕಾರ್ಯಾಚರಣೆಯಲ್ಲಿ ಪಾರದರ್ಶಕತೆ, ಜವಾಬ್ದಾರಿತನ ಹಾಗೂ ಸೇವಾ ಮನೋಭಾವಕ್ಕೆ ಆದ್ಯತೆ ನೀಡುವ ಮೂಲಕ ಸಾರ್ವಜನಿಕರಿಗೆ ಗುಣಮಟ್ಟದ ಸೇವೆ ಒದಗಿಸಬೇಕು ಎಂದರು.

ಸಭೆಯಲ್ಲಿ ಜಿಪಂ ಉಪಕಾರ್ಯದರ್ಶಿ (ಆಡಳಿತ) ಶಿವಲಿಂಗಯ್ಯ, ಉಪಕಾರ್ಯದರ್ಶಿ (ಅಭಿವೃದ್ಧಿ) ಲಕ್ಷ್ಮಿ, ಮುಖ್ಯ ಲೆಕ್ಕಾಕಾರಿ ಶ್ರೀನಿವಾಸ್ ನಾಯಕ್, ಸಹಾಯಕ ಯೋಜನಾಧಿಕಾರಿ ಶ್ರೀಹರ್ಷ, ಆರೋಗ್ಯ ಇಲಾಖೆ ರ್‌ಸಿಎಚ್ ಅಧಿಕಾರಿ ಡಾ.ಆಶಾಲತಾ, ಜಿಲ್ಲೆಯ ಎಲ್ಲಾ ತಾಪಂಗಳ ಇಒಗಳು, ಗ್ರಾಪಂಗಳ ಪಿಡಿಒಗಳು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಬೆಳಗಾವಿಗೆ ಆರ್‌ಎಸ್‌ಎಸ್‌ಸರಸಂಘಚಾಲಕ ಭಾಗವತ್‌
ಕಡೂರು ತಾಲೂಕು ಕಚೇರಿಗೆ ರಾಜೇಂದ್ರಕುಮಾರ್ ಕಠಾರಿಯಾ ಭೇಟಿ