ಜನರನ್ನು ಅಲೆದಾಡಿಸದೇ, ಸಕಾಲಕ್ಕೆ ಕೆಲಸಗಳಿಗೆ ಸ್ಪಂದಿಸಿ ನೆರವಾಗಿ

KannadaprabhaNewsNetwork | Published : Apr 8, 2025 12:33 AM

ಸಾರಾಂಶ

ಸರ್ಕಾರಿ ನೌಕರರು ಅದರಲ್ಲೂ ವಿಶೇಷವಾಗಿ ಕಂದಾಯ ಇಲಾಖೆ ನೌಕರರು ಕೆಲಸ ಕಾರ್ಯಗಳಿಗಾಗಿ ಕಚೇರಿಗೆ ಬರುವ ರೈತರು, ಜನಸಾಮಾನ್ಯರ ಕೆಲಸಗಳನ್ನು ಅನಗತ್ಯವಾಗಿ ಕಚೇರಿಗೆ ಅಲೆದಾಡಿಸದೇ ಆದಷ್ಟು ಬೇಗ ಕೆಲಸ ಮಾಡಿಕೊಡಿ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೊನ್ನಾಳಿಯಲ್ಲಿ ಹೇಳಿದ್ದಾರೆ.

- ನವೀಕೃತ ತಾಲೂಕು ಕಚೇರಿ ಸಭಾಂಗಣ ಉದ್ಘಾಟಿಸಿ ಶಾಸಕ

- - -

ಹೊನ್ನಾಳಿ: ಸರ್ಕಾರಿ ನೌಕರರು ಅದರಲ್ಲೂ ವಿಶೇಷವಾಗಿ ಕಂದಾಯ ಇಲಾಖೆ ನೌಕರರು ಕೆಲಸ ಕಾರ್ಯಗಳಿಗಾಗಿ ಕಚೇರಿಗೆ ಬರುವ ರೈತರು, ಜನಸಾಮಾನ್ಯರ ಕೆಲಸಗಳನ್ನು ಅನಗತ್ಯವಾಗಿ ಕಚೇರಿಗೆ ಅಲೆದಾಡಿಸದೇ ಆದಷ್ಟು ಬೇಗ ಕೆಲಸ ಮಾಡಿಕೊಡಿ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.

ಸೋಮವಾರ ನವೀಕರಣಗೊಂಡ ತಾಲೂಕು ಕಚೇರಿ ಸಭಾಂಗಣವನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ಈ ಹಿಂದೆ ಸಭಾಂಗಣ ಮಳೆಗಾಲದಲ್ಲಿ ಸೋರುತ್ತಿದ್ದು, ಇದೀಗ ನವೀಕರಣಗೊಂಡಿದೆ. ಮುಂದಿನ ದಿನಗಳಲ್ಲಿ ಸಭಾಂಗಣದ ಮೇಲ್ಭಾಗದಲ್ಲಿ ₹20 ಲಕ್ಷ ವೆಚ್ಚದಲ್ಲಿ ದೊಡ್ಡ ಶೆಡ್ ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಇದರಿಂದ ಕೆಳಗಿನ ಕಟ್ಟಡಕ್ಕೂ ಸುರಕ್ಷತೆ ದೊರಕುತ್ತದೆಂದರು.

ತಾಲೂಕು ಕಚೇರಿ ಅವರಣದಲ್ಲಿ ಡಾ.ಅಂಬೇಡ್ಕರ್ ಪುತ್ಥಳಿ ನಿರ್ಮಿಸಬೇಕೆಂಬ ಬೇಡಿಕೆ ಇದೆ. ರಸ್ತೆ ಅಗಲೀಕರಣ ನಂತರ ಈ ಬಗ್ಗೆ ಕ್ರಮ ವಹಿಸಲಾಗುವುದು. ಮುಂದಿನ ದಿನಗಳಲ್ಲಿ ₹8.60 ಕೋಟಿ ವೆಚ್ಚದಲ್ಲಿ ಉಪವಿಭಾಗಾಧಿಕಾರಿ ಕಚೇರಿ ನಿರ್ಮಾಣಕ್ಕೆ ಹಣ ಮಂಜೂರಾಗಿದೆ. ಆಗಸ್ಟ್ 15ರೊಳಗೆ ಈ ಕೆಲಸ ಮಾಡುವ ಉದ್ದೇಶ ಹೊಂದಲಾಗಿದೆ ಎಂದರು.

ಬುದ್ದ, ಬಸವ, ಆಂಬೇಡ್ಕರ್ ಸೇರಿದಂತೆ ಅನೇಕ ಮಹಾಪುರುಷರು ರಾಷ್ಟ್ರದ ಆಸ್ತಿ ಇದ್ದಂತೆ. ಆದರೆ ಇವರನ್ನು ಕೇವಲ ಜಾತಿಗೆ ಸೀಮಿತಗೊಳಿಸುವ ಕೆಲಸವಾಗುತ್ತಿದೆ. ಜನರು ಇಂತಹ ಧೋರಣೆಗಳನ್ನು ಕೈಬಿಡಬೇಕು ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ ಮಾತನಾಡಿ, ಪ್ರಸುತ್ತ ಮುಖ್ಯಮಂತ್ರಿಯವರು ಕೂಡ ಬಸವಣ್ಣನವರ ತತ್ವ-ಸಿದ್ಧಾಂತಗಳಡಿ ಆಡಳಿತ ನಡೆಸಿಕೊಂಡು ಬರುತ್ತಿದ್ದಾರೆ. ಕೆಲಸ ಮಾಡುವ ಪರಿಸರ ಉತ್ತಮವಾಗಿದ್ದರೆ ಕೆಲಸಗಳು ಕೂಡ ಉತ್ತವಾಗುತ್ತವೆ ಎಂದು ಹೇಳಿದರು.

ತಹಸೀಲ್ದಾರ್ ಪಟ್ಟರಾಜ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಸಭಾಂಗಣದ ನವೀಕರಣಕ್ಕೆ ಉದ್ಯಮಿ ಧನಂಜಯ ಪಾಟೀಲ್ ಸಹಕರಿಸಿದ್ದಾರೆ. ಅವರಿಗೆ ಇಲಾಖೆ ವತಿಯಿಂದ ಧನ್ಯವಾದಗಳನ್ನು ಸಲ್ಲಿಸುವುದಾಗಿ ಹೇಳಿದರು.

ಉಪವಿಭಾಗಾಧಿಕಾರಿ ಅಭಿಷೇಕ್, ನವೀಕರಣ ವೆಚ್ಚದ ದಾನಿ ಹಾಗೂ ಉದ್ಯಮಿ ಧನಂಜಯ ಪಾಟೀಲ್ ಮಾತನಾಡಿದರು. ಅನಂತರ ಧನಂಜಯ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಇಒ ಪ್ರಕಾಶ್, ಉಪ ತಹಸೀಲ್ದಾರ್‌ ಸುರೇಶ್, ಶಿರಸ್ತೇದಾರ್ ಮಂಜುನಾಥ್, ಕಂದಾಯ ಇಲಾಖೆ ಸಿಬ್ಬಂದಿ ಇದ್ದರು.

- - -

-7ಎಚ್.ಎಲ್.ಐ1.ಜೆಪಿಜಿ:

ನವೀಕೃತ ತಾಲೂಕು ಕಚೇರಿ ಸಭಾಂಗಣವನ್ನು ಶಾಸಕ ಡಿ.ಜಿ.ಶಾಂತನಗೌಡ ಉದ್ಘಾಟಿಸಿದರು.

Share this article