ಕಬ್ಬು ರೈತರ ಬೇಡಿಕೆಗೆ ಸ್ಪಂದಿಸಿ: ಕೇಂದ್ರಕ್ಕೆ ಸಿಎಂ

KannadaprabhaNewsNetwork |  
Published : Oct 20, 2026, 01:30 AM IST
ಡಿಕೆಶಿ | Kannada Prabha

ಸಾರಾಂಶ

ರಾಜ್ಯಾದ್ಯಂತ ಕಬ್ಬು ಬೆಳೆಗಾರರ ಹೋರಾಟ ತೀವ್ರಗೊಂಡಿದ್ದು, ಸದ್ಯದಲ್ಲೇ ಕಬ್ಬು ಅರೆಯುವ ಋತು ಆರಂಭವಾಗಲಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯಾದ್ಯಂತ ಕಬ್ಬು ಬೆಳೆಗಾರರ ಹೋರಾಟ ತೀವ್ರಗೊಂಡಿದ್ದು, ಸದ್ಯದಲ್ಲೇ ಕಬ್ಬು ಅರೆಯುವ ಋತು ಆರಂಭವಾಗಲಿದೆ. ಹೀಗಾಗಿ ರಾಜ್ಯ ಕಬ್ಬು ಬೆಳೆಗಾರರ ಬೇಡಿಕೆಗಳಿಗೆ ಸಂಬಂಧಿಸಿ ಕೇಂದ್ರ ಸರ್ಕಾರ ತುರ್ತಾಗಿ ಮಧ್ಯಪ್ರವೇಶಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಸಕ್ಕರೆಯ ಕನಿಷ್ಠ ಮಾರಾಟ ಬೆಲೆ ಪರಿಷ್ಕರಣೆ, ಗೃಹ ಮತ್ತು ವಾಣಿಜ್ಯ ಸಕ್ಕರೆಗೆ ಪ್ರತ್ಯೇಕ ಎಂಎಸ್ಪಿ ನಿಗದಿ, ಎಫ್ಆರ್‌ಪಿ ಮೂಲ ಇಳುವರಿಯನ್ನು ಶೇ.9.50ಕ್ಕೆ ಮರುನಿಗದಿ ಮಾಡುವುದು. ಕಬ್ಬು ಆಧಾರಿತ ಎಥನಾಲ್ ಬೆಲೆ ಹೆಚ್ಚಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ತುರ್ತಾಗಿ ಪರಿಗಣಿಸಿ ಈಡೇರಿಸುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಇದೇ ವೇಳೆ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ವಲಯದ ಸಮಸ್ಯೆ ಪರಿಶೀಲನೆಗೆ ಕೇಂದ್ರಮಟ್ಟದಲ್ಲಿ ಸಮಿತಿ ರಚಿಸಿರುವ ನಿರ್ಧಾರ ಸ್ವಾಗತಿಸಿದ್ದಾರೆ. ಸಮಿತಿಯಲ್ಲಿ ಸಂಪೂರ್ಣವಾಗಿ ಭಾಗವಹಿಸಿ ನಮ್ಮ ಅಂಕಿ-ಅಂಶ ಹಂಚಿಕೊಳ್ಳುತ್ತೇವೆ. ಆದರೆ ಕರ್ನಾಟಕದಲ್ಲಿ ಕಬ್ಬು ನುರಿಸುವ ಹಂಗಾಮು ಈಗಾಗಲೇ ವಿಳಂಬವಾಗಿದ್ದು, ರೈತರು ಕೇಂದ್ರ ಸರ್ಕಾರದಿಂದ ಶೀಘ್ರ ಭರವಸೆ ನಿರೀಕ್ಷಿಸುತ್ತಿದ್ದಾರೆ. ಹೀಗಾಗಿ ಕೆಲ ನಿರ್ಧಾರಗಳು ತುರ್ತಾಗಿ ಆಗಬೇಕು ಎಂದು ಗಮನ ಸೆಳೆದಿದ್ದಾರೆ.

ಸಕ್ಕರೆ ಬೆಲೆ ಪರಿಷ್ಕರಿಸಿ:

ಸಕ್ಕರೆಯ ಕನಿಷ್ಠ ಮಾರಾಟ ಬೆಲೆ 2019ರಿಂದಲೂ ಪ್ರತಿ ಕೆ.ಜಿ.ಗೆ ₹31ರಲ್ಲೇ ಉಳಿದಿದೆ. ಆದರೆ ಪ್ರತಿ ಟನ್‌ ಕಬ್ಬಿಗೆ ಎಫ್ಆರ್‌ಪಿ ದರ ₹2,750 ರಿಂದ ₹3,650ಕ್ಕೆ ಏರಿದೆ. 2019ರ ಸಕ್ಕರೆ ಬೆಲೆಯಲ್ಲಿ ಕಾರ್ಖಾನೆಗಳು ಕಬ್ಬಿಗೆ ನ್ಯಾಯಯುತ ಬೆಲೆ ಪಾವತಿಸಲು ಸಾಧ್ಯವಿಲ್ಲ. ಹೀಗಾಗಿ ಸಕ್ಕರೆಯ ಕನಿಷ್ಠ ಮಾರಾಟ ಬೆಲೆ ಪರಿಷ್ಕರಿಸಿ ಎಂದು ಶಿವಕುಮಾರ್‌ ಕೋರಿದ್ದಾರೆ. ಕಬ್ಬಿನ ಇಳುವರಿ ಈ ಹಿಂದೆ ಶೇ.9.50 ರಷ್ಟಿತ್ತು. ಅದನ್ನು ಹಂತ ಹಂತವಾಗಿ ಶೇ.10.25ಕ್ಕೆ ಹೆಚ್ಚಿಸಲಾಗಿದೆ. ಮೂಲ ಇಳುವರಿಯನ್ನು ಮತ್ತೆ ಶೇ. 9.50ಕ್ಕೆ ತರಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ಪರಿಸ್ಥಿತಿ ಗಂಭೀರವಾಗಿದೆ, ತುರ್ತಾಗಿ ಸ್ಪಂದಿಸಿ: ಸಿಎಂ

ಕಬ್ಬು ಬೆಳೆಗಾರರು ಹುಬ್ಬಳ್ಳಿಗೆ ಪಾದಯಾತ್ರೆ ಮಾಡುತ್ತಿದ್ದಾರೆ. ಅ.17 ರಂದು ಕಿತ್ತೂರಿನಲ್ಲಿ ಕಬ್ಬು ಬೆಳೆಗಾರರ ಮನವೊಲಿಸಲು ಪ್ರಯತ್ನಿಸಿದೆ. ತಮ್ಮ ಮುಖ್ಯ ಬೇಡಿಕೆಗಳು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಒಳಪಡುವ ವಿಷಯಗಳಾಗಿದ್ದು, ಕೇಂದ್ರದಿಂದ ಭರವಸೆ ಸಿಗದ ಹೊರತು ಹೋರಾಟ ಹಿಂಪಡೆಯುವುದಿಲ್ಲ ಎಂದು ರೈತರು ತಿಳಿಸಿದ್ದಾರೆ. ಪರಿಸ್ಥಿತಿ ಗಂಭೀರವಾಗಿದೆ. ಹೀಗಾಗಿ ತುರ್ತಾಗಿ ಸ್ಪಂದಿಸಬೇಕು ಎಂದು ಶಿವಕುಮಾರ್‌ ಪತ್ರದಲ್ಲಿ ಕೋರಿದ್ದಾರೆ.

==

ಗೃಹ ಮತ್ತು ವಾಣಿಜ್ಯ ಸಕ್ಕರೆಗೆ ಪ್ರತ್ಯೇಕ ಎಂಎಸ್ಪಿ ನಿಗದಿಪಡಿಸಬೇಕು. ಈ ಕ್ರಮ ಗೃಹಬಳಕೆ ಗ್ರಾಹಕರನ್ನು ರಕ್ಷಿಸುತ್ತದೆ. ಬೃಹತ್ ವಾಣಿಜ್ಯ ಖರೀದಿದಾರರು ನ್ಯಾಯಯುತ ಬೆಲೆ ಪಾವತಿಸುವಂತೆ ಮಾಡುತ್ತದೆ ಎಂದಿದ್ದಾರೆ.

2026-27ರಲ್ಲಿ ತೈಲ ಮಾರಾಟ ಕಂಪನಿಗಳು ಬಿಡುಗಡೆ ಮಾಡಿದ ಟೆಂಡರ್‌ನಲ್ಲಿ ಕಬ್ಬಿನ ಹಾಲು, ಸಕ್ಕರೆ ಸಿರಪ್ ಮತ್ತು ಬಿ-ಹೆವಿ ಮೋಲಾಸಿಸ್‌ಗಳಿಂದ ಉತ್ಪಾದಿಸುವ ಎಥನಾಲ್ ಅನ್ನು ಹೊರಗಿಡಲಾಗಿದೆ. ಕರ್ನಾಟಕವು ವರ್ಷಕ್ಕೆ 225 ಕೋಟಿ ಲೀಟರ್ ಕಬ್ಬು ಆಧಾರಿತ ಎಥನಾಲ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ. ಈ ಕಚ್ಚಾವಸ್ತುಗಳನ್ನು ಹೊರಗಿಡುವುದರಿಂದ ಸಕ್ಕರೆ ಕಾರ್ಖಾನೆಗಳ ಆದಾಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದೆ. ಹೀಗಾಗಿ ಇವುಗಳನ್ನು ಪರಿಗಣಿಸಬೇಕು. ಜತೆಗೆ ಕಬ್ಬು ಆಧಾರಿತ ಎಥನಾಲ್‌ ಬೆಲೆ ಹೆಚ್ಚಿಸಬೇಕು ಎಂದು ಗಮನ ಸೆಳೆದಿದ್ದಾರೆ.

ಈ ಪ್ರತಿಭಟನೆಗಳಿಂದಾಗಿ ಉತ್ತರ ಕರ್ನಾಟಕದಲ್ಲಿ ಕಬ್ಬು ನುರಿಸುವ ಹಂಗಾಮು ಆರಂಭವಾಗಿಲ್ಲ. ಕಟಾವಿಗೆ ಬಂದ ಕಬ್ಬು ಗದ್ದೆಗಳಲ್ಲೇ ನಿಂತಿದ್ದು, ವಿಳಂಬವಾಗುವ ಪ್ರತಿದಿನವೂ ಕಬ್ಬಿನ ತೂಕ ಮತ್ತು ಸಕ್ಕರೆ ಪ್ರಮಾಣದಲ್ಲಿ ನಷ್ಟ ಉಂಟಾಗುತ್ತಿದೆ. ನಿರಂತರ ರಸ್ತೆ ತಡೆಯಿಂದಾಗಿ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆಯಾಗುತ್ತಿದ್ದು, ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾನು ಜನ ಸೇವಕ, ರಾಜ್ಯ ಸರ್ಕಾರದ ಸಾಧನೆ ಶ್ರೀರಕ್ಷೆ
ಸಂಧಾನ ಯಶಸ್ವಿ: ಶಾಂತವಾದ ಕಬ್ಬಿನ ಕಿಚ್ಚು!