ಮುಂಡರಗಿ: ಶಿಕ್ಷಣ ಸಚಿವನಾಗಿ ಎರಡೂವರೆ ವರ್ಷದಲ್ಲಿ ಶಿಕ್ಷಕರ ಹಾಗೂ ಶೈಕ್ಷಣಿಕ ಸಂಸ್ಥೆಗಳ ಸಮಸ್ಯೆಗಳಿಗೆ ಸಾಕಷ್ಟು ಪ್ರಾಮಾಣಿಕವಾಗಿ ಸ್ಪಂದಿಸಿ ಹಲವಾರು ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕೈಗೊಂಡಿದ್ದೇನೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಖಾಸಗಿ ಶಿಕ್ಷಣ ಸಂಸ್ಥೆಗಳ ನೋಂದಣಿ ನವೀಕರಣ, ಖಾಲಿ ಹುದ್ದೆಗಳ ನೇಮಕ, ಹಳೆಯ ಪಿಂಚಣಿ ಪದ್ಧತಿ ಮುಂದುವರಿಸುವುದು, ಅನುದಾನರಹಿತ ಕನ್ನಡ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸುವುದು ಸೇರಿದಂತೆ ಹಲವಾರು ಸಮಸ್ಯೆಗಳು ನಮ್ಮ ಮುಂದಿವೆ. ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಈಗಾಗಲೇ ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದೇನೆ ಎಂದರು.ಸರ್ಕಾರಿ ಶಾಲೆಗಳಲ್ಲಿ ಸಿಗುವ ಎಲ್ಲ ಸೌಲಭ್ಯಗಳನ್ನು ಖಾಸಗಿ ಶಾಲೆಗಳ ಶಿಕ್ಷಕರಿಗೆ ಹಾಗೂ ಮಕ್ಕಳಿಗೂ ಸಿಗುವಂತೆ ನೋಡಿಕೊಳ್ಳುವುದು ನನ್ನ ಪ್ರಮುಖ ಜವಾಬ್ದಾರಿಯಾಗಿದೆ. ಆ ನಿಟ್ಟಿನಲ್ಲಿ ಹೆಚ್ಚು ಕೆಲಸ ಮಾಡುತ್ತಿರುವುದಾಗಿ ತಿಳಿಸಿದರು.
ಮುಂಡರಗಿಯ ಜ. ಅನ್ನದಾನೇಶ್ವರ ವಿದ್ಯಾ ಸಮಿತಿ ತನ್ನ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಸಂಗತಿ ಖುಷಿ ತಂದಿದೆ, ಒಂದು ಜವಾಬ್ದಾರಿಯುತ ಸರ್ಕಾರ ಮಾಡುವ ಕೆಲಸವನ್ನು ಮಠ-ಮಾನ್ಯಗಳು ಮಾಡುವ ಮೂಲಕ ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸಿದ್ದು ಹೆಮ್ಮೆಯ ಸಂಗತಿ. ಹೀಗಾಗಿ ಮಠಕ್ಕೆ ಸರ್ಕಾರ ಸದಾಕಾಲ ಚಿರಋಣಿಯಾಗಿದೆ. ಶ್ರೀಗಳ ನಿರಂತರ ಪರಿಶ್ರಮದಿಂದಾಗಿ ಲಕ್ಷಾಂತರ ಮಕ್ಕಳಿಗೆ ಅನ್ನದಾನ, ಅಕ್ಷರ ದಾಸೋಹದ ಮೂಲಕ ಅಕ್ಷರದ ಹಸಿವು ಇಂಗಿಸಿದ ವಿದ್ಯಾ ಸಮಿತಿಯ ಶತಮಾನೋತ್ಸವದ ಸಂಭ್ರಮದ ಕಾರ್ಯಕ್ರಮದಲ್ಲಿ ಅತ್ಯಂತ ಖುಷಿಯಿಂದ ಭಾಗವಹಿಸುವುದಾಗಿ ಹೇಳಿದರು.ಈ ವೇಳೆ ಶತಮಾನೋತ್ಸವ ಸಮಿತಿ ಗೌರವಾಧ್ಯಕ್ಷ, ಶಾಸಕ ಡಾ. ಚಂದ್ರು ಲಮಾಣಿ, ಡಾ. ಬಸವರಾಜ ಧಾರವಾಡ, ಅನ್ನದಾನೇಶ್ವರ ವಿದ್ಯಾ ಸಮಿತಿಯ ಆಡಳಿತಾಧಿಕಾರಿ ಡಾ. ಬಿ.ಜಿ. ಜವಳಿ, ಎಂ.ಎಸ್. ಡಂಬಳ, ಎಂ.ಎಸ್. ಶಿವಶೆಟ್ಟಿ, ಎಸ್.ಎಂ. ಅಗಡಿ, ಅವಿನಾಶ್ ಸಾಲ್ಮನಿ ಇದ್ದರು.