ಕನ್ನಡಪ್ರಭ ವಾರ್ತೆ ಮಡಿಕೇರಿ
ಕ್ರೀಡಾಪಟು ಹಾಗೂ ಮಡಿಕೇರಿ ಶ್ರೀ ಓಂಕಾರೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಸಿ. ದೇವಯ್ಯ ಮಾತನಾಡಿ, ಹಲವಾರು ಅಂತರಾಷ್ಟ್ರೀಯ ಹಾಕಿ ಆಟಗಾರರನ್ನು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಡುಗೆಯಾಗಿ ನೀಡಿರುವ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ ಪ್ರಸ್ತುತ, ಕನಿಷ್ಟ ಕಾಳಜಿಯೂ ಇಲ್ಲದೆ ಶೋಚನೀಯ ಸ್ಥಿತಿಯಲ್ಲಿದೆ ಎಂದು ಖೇದ ವ್ಯಕ್ತಪಡಿಸಿದರು.
ಬಾಸ್ಕೆಟ್ ಬಾಲ್ ಕೋರ್ಟ್‌ಗಳ ನಿರ್ಮಾಣ:ಇದಕ್ಕೆ ಮುಡಾ ಅಧ್ಯಕ್ಷ ರಾಜೇಶ್ ಯಲ್ಲಪ್ಪ ಪ್ರತಿಕ್ರಿಯಿಸಿ, ಜಿಲ್ಲೆಯ ಶಾಸಕರು ಈ ನಿಟ್ಟಿನಲ್ಲಿ ಆಸಕ್ತಿ ವಹಿಸಿದ್ದು, 1.5 ಕೋಟಿ ರು. ವೆಚ್ಚದಲ್ಲಿ ಸಿಂಥೆಟಿಕ್ ಲೇನ್, 2.50 ಕೋಟಿ ವೆಚ್ಚದಲ್ಲಿ ಬಾಸ್ಕೆಟ್ ಬಾಲ್ ಕೋಟ್೯ಗಳ ನಿರ್ಮಾಣವಾಗಲಿದೆಯೆಂದು ಮಾಹಿತಿ ನೀಡಿದರು.
ವೈದ್ಯರ ಕೊರತೆಯಿದೆ:
ಲಯನ್ಸ್ ಸಂಸ್ಥೆಯ ಅಧ್ಯಕ್ಷ ಮದನ್ ಮಾತನಾಡಿ, ನಗರದಲ್ಲಿ ಒಂದು ಲೀಟರ್ ನೀರಿನ ಬಾಟಲ್ ಮಾರಾಟ ನಿಷೇಧಿಸಲಾಗಿದೆ. ಇದೊಂದು ಒಳ್ಳೆಯ ಕ್ರಮವಾಗಿದ್ದರೂ, ಅರ್ಧ, ಒಂದು ಲೀಟರ್‌ನಲ್ಲಿ ಬರುವ ಜ್ಯೂಸ್ ಬಾಟಲ್‌ಗಳನ್ನು ಪ್ರಸ್ತುತ ಎಲ್ಲೆಂದರಲ್ಲಿ ಬಳಸಿ ಎಸೆಯಲಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಅನಿಸಿಕೆ ವ್ಯಕ್ತಪಡಿಸಿದರು.
ನಗರಸಭಾ ಸದಸ್ಯ ಅರುಣ್ ಶೆಟ್ಟಿ ಮಾತನಾಡಿ, ನಗರದ ಅನೇಕ ಅಂಗಡಿಗಳಲ್ಲಿ ಸ್ಥಳೀಯದಲ್ಲದ ಸ್ಪೆಸಸ್ ತಂದು ಮಾರಾಟಮಾಡಲಾಗುತ್ತಿದೆ. ಈ ಬಗ್ಗೆ ನಗರಸಭೆ ಸೂಕ್ತ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದರು. ಪ್ರವಾಸೋದ್ಯಮ ಸ್ವರೂಪ ಬದಲಾಗಲಿ:
ಕೊಡಗು ಪತ್ರಕರ್ತರ ಸಂಘದ ಗೌರವ ಸಲಹೆಗಾರರಾದ ಟಿ.ಪಿ.ರಮೇಶ್ ಮಾತನಾಡಿ, ಮಡಿಕೇರಿ ನಗರ ಯಾವುದೇ ಕ್ರಮಬದ್ಧವಾದ ಯೋಜನೆಗಳಿಲ್ಲದೆ ಬೆಳೆದಿದೆ. ಇದರಿಂದ ಸಮರ್ಪಕವಾದ ರಸ್ತೆ , ಫುಟ್ ಪಾತ್‌ಗಳು ಇಲ್ಲದೆ ಸ್ಥಳೀಯರು ನರಕಯಾತನೆ ಪಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ 25 ವರ್ಷಗಳ ದೂರದೃಷ್ಟಿಯ ಯೋಜನಗಳ ನೀಲಿ ನಕಾಶೆಯನ್ನು ನಗರಸಭೆ ಮತ್ತು ಮುಡಾ ರೂಪಿಸಿ, ಆ ನಿಟ್ಟಿನಲ್ಲಿ ಮುಂದಡಿಯಿಡಬೇಕಾದ ಅಗತ್ಯವಿರುವುದಾಗಿ ಸಲಹೆ ನೀಡಿದರು.
ನಗರಠಾಣಾ ಎಸ್‌ಐ ಶ್ರೀಧರ್ ಮಾತನಾಡಿ, ನಗರ ವ್ಯಾಪ್ತಿಯಲ್ಲಿ ಮಧ್ಯವರ್ತಿಗಳ ಹಾವಳಿಗೆ ಮುಂದಿನ ಹದಿನೈದು ದಿನಗಳಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ಕಡಿವಾಣ ಹಾಕುವುದಾಗಿ ದೃಢವಾಗಿ ನುಡಿದರು.
ಪ್ರವಾಸೋದ್ಯಮ ಇಲಾಖೆಯ ಅಧಿಕಾರಿ ಜತಿನ್ ಮಾತನಾಡಿ ನಗರವ್ಯಾಪ್ತಿಯಲ್ಲಿ ಹೋಂಸ್ಟೇಗಳಿಗೆ ನಿರಪೇಕ್ಷಣಾ ಪತ್ರ ನೀಡುವ ಸಂದರ್ಭದಲ್ಲಿಯೇ ಆ ಹೋಂಸ್ಟೇಗಳಲ್ಲಿ ಆ ಮನೆಯ ಮಾಲೀಕರೇ ವಾಸಿಸುತ್ತಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಂಡು ನಿರಪೇಕ್ಷಣಾ ಪತ್ರ ನೀಡಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭ ಮಾಜಿ ನಗರಸಭಾ ಸದಸ್ಯೆ ವೀಣಾಕ್ಷಿ ನಗರದಲ್ಲಿ ಸ್ವಚ್ಛತೆಯ ನಾಮಫಲಕಗಳ ಅಳವಡಿಕೆ ಮಾಡಬೇಕು. ಪ್ರಸ್ತುತ ಪ್ರವಾಸಿಗರು ಕಸವನ್ನು ನಗರದ ಖಾಲಿ ಇರುವ ಸ್ಥಳಗಳಲ್ಲಿ ಎಸೆದು ಹೋಗುತ್ತಿರುವುದು ಸರ್ವೇ ಸಾಮಾನ್ಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಭಾರತೀಯ ವಿದ್ಯಾ ಭವನದ ಪ್ರಮಖರಾದ ಬಾಲಾಜಿ ಕಾಶ್ಯಪ್, ಪ್ರವಾಸೋದ್ಯಮಿ ಮೋಹನ್ ದಾಸ್, ಕೊಡಗು ಹೋಟೇಲ್ ರೆಸಾರ್ಟ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ನಾಜಿರ್, ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷೆ ಮೋಂತಿ ಗಣೇಶ್, ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷ ಅಂಬೆಕಲ್ಲು ನವೀನ್, ಮಡಿಕೇರಿ ನಗರಸಭೆಯ ಮಾಜಿ ಅಧ್ಯಕ್ಷೆ ಅನಿತಾ ಪೂವಯ್ಯ, ಪತ್ರಕರ್ತ ಕುಲ್ಲೇಟಿರ ಅಜಿತ್ ನಾಣಯ್ಯ, ಪ್ರವಾಸೋದ್ಯಮಿ ಪಿ.ಟಿ. ಉಣ್ಣಿಕೃಷ್ಣ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪುರಸಭೆಯ ಮಾಜಿ ಸದಸ್ಯರಾದ ಡಾ. ಎಂ.ಜಿ. ಪಾಟ್ಕರ್ , ಕೊಡಗು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ, ಖಜಾಂಚಿ ಟಿ.ಕೆ. ಸಂತೋಷ್, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ, ಕಾರ್ಯದರ್ಶಿ ಬಿ.ಕೆ. ಕಾರ್ಯಪ್ಪ, ಕೊಡಗು ಅಭಿವೃದ್ಧಿ ಸಮಿತಿಯ ಪ್ರಸನ್ನ ಭಟ್, ರೋಟರಿ ವುಡ್ಸ್ ಕಾರ್ಯದರ್ಶಿ ಪ್ರಮೀಳಾ ಶೆಟ್ಟಿ , ನಗರಸಭಾ ಮಾಜಿ ಅಧ್ಯಕ್ಷೆ ಜುಲೈಕಾಬಿ, ಸದಸ್ಯರಾದ ಶ್ವೇತಾ ಪ್ರಶಾಂತ್, ಮೇರಿ ವೇಗಸ್, ಶಾರದಾ ನಾಗರಾಜ್, ಚಿತ್ರಾವತಿ, ಮಿನಾಜ್ ಪ್ರವೀಣ್ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಪಾಲ್ಗೊಂಡಿದ್ದರು. ಕೊಡಗು ಪತ್ರಕರ್ತರ ಸಂಘದ ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ಜಿ.ವಿ. ರವಿ ಕುಮಾರ್ ವಂದಿಸಿದರು. ಹಿರಿಯ ಪತ್ರಕರ್ತ ಜಿ. ಚಿದ್ವಿಲಾಸ್ ಅನೇಕ ಸಲಹೆಗಳೊಂದಿಗೆ ಸಂವಾದ ನಿರೂಪಿಸಿದರು. ನಿತ್ಯಾ ಪ್ರವೀಣ್ ಪ್ರಾಥಿ೯ಸಿದರು.ನಗರದಲ್ಲಿ 1250 ಬೀದಿ ನಾಯಿ!ಮಡಿಕೇರಿ ನಗರದಲ್ಲಿ ಅಂದಾಜು 1250 ಬೀದಿ ನಾಯಿಗಳು ಇರುವುದನ್ನು ಈಗಾಗಲೇ ಗುರುತಿಸಲಾಗಿದೆಯೆಂದು ತಿಳಿಸಿದ ಪೌರಾಯುಕ್ತ ರಮೇಶ್, ಸುಪ್ರೀಂ ಕೊರ್ಟ್ ಆದೇಶದಂತೆ ಇವುಗಳಿಗೆ ಆಹಾರ ಒದಗಿಸಲು ನಗರದ 9 ಸ್ಥಳಗಳನ್ನು ಗುರುತಿಸಲಾಗಿದೆ. ಇದರೊಂದಿಗೆ ಇವುಗಳನ್ನು ಒಂದು ಪ್ರದೇಶದಲ್ಲಿರಿಸುವ ಸಲುವಾಗಿ ಕರ್ಣಂಗೇರಿ ಬಳಿಯಲ್ಲಿ ಜಾಗವನ್ನು ಗುರುತಿಸಲಾಗಿದೆ. ಅಲ್ಲಿ 222*122 ಅಡಿ ವಿಸ್ತೀರ್ಣದಲ್ಲಿ 6 ಅಡಿ ಕಾಂಪೌಂಡ್ ವಾಲ್ ನಿರ್ಮಿಸಿ ಅದರಲ್ಲಿ ನಾಯಿಗಳನ್ನು ಬಿಡಲಾಗುತ್ತದೆ ಎಂದು ಮಾಹಿತಿ ನೀಡಿದರು.