ಕೂಸಿನ ಮನೆ ಯಶಸ್ವಿಗೆ ಮಕ್ಕಳ ಆರೈಕೆದಾರರ ಜವಾಬ್ದಾರಿ ಮುಖ್ಯ: ಗರಿಮಾ ಪನ್ವಾರ

KannadaprabhaNewsNetwork | Published : Jan 9, 2024 2:00 AM

ಸಾರಾಂಶ

ಗ್ರಾಮೀಣ ಭಾಗದ ಕೂಲಿ ಕಾರ್ಮಿಕ ಮಹಿಳೆಯರ ಮಕ್ಕಳನ್ನು ಪಾಲನೆ-ಪೋಷಣೆ ಮಾಡಲು ಸರಕಾರ ಜಾರಿಗೆ ತಂದ ಕೂಸಿನ ಮನೆ ಯೋಜನೆಯ ಯಶಸ್ವಿಗೆ ಕೂಸಿನ ಮನೆಯ ಮಕ್ಕಳ ಆರೈಕೆದಾರರ ಜವಾಬ್ದಾರಿ ಪ್ರಮುಖವಾಗಿದೆ.

ಕನ್ನಡಪ್ರಭ ವಾರ್ತೆ ಶಹಾಪುರ

ನಿತ್ಯ ದುಡಿದು ಜೀವನ ನಿರ್ವಹಣೆ ಮಾಡುವ ಗ್ರಾಮೀಣ ಭಾಗದ ಕೂಲಿ ಕಾರ್ಮಿಕ ಮಹಿಳೆಯರ ಮಕ್ಕಳನ್ನು ಪಾಲನೆ-ಪೋಷಣೆ ಮಾಡಲು ಸರಕಾರ ಜಾರಿಗೆ ತಂದ ಕೂಸಿನ ಮನೆ ಯೋಜನೆಯ ಯಶಸ್ವಿಗೆ ಕೂಸಿನ ಮನೆಯ ಮಕ್ಕಳ ಆರೈಕೆದಾರರ ಜವಾಬ್ದಾರಿ ಪ್ರಮುಖವಾಗಿದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗರಿಮಾ ಪನ್ವಾರ ಹೇಳಿದರು.

ಕೂಸಿನ ಮನೆಯ ಮಕ್ಕಳ ಆರೈಕೆ ಮಾಡುವ ಕುರಿತು ಆರೈಕೆದಾರರಿಗಾಗಿ ಶಹಾಪುರ ನಗರದ ತಾ.ಪಂ. ಸಭಾಂಗಣದಲ್ಲಿ ನಡೆದ 7 ದಿನಗಳ ತರಬೇತಿ ಕಾರ್ಯಾಗಾರದ ಭಾಗವಾಗಿ ತಾಲೂಕಿನ ದಿಗ್ಗಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ ನೋಂದಾಯಿತ ಕೂಲಿ ಕಾರ್ಮಿಕರ ಮಕ್ಕಳ ಆರೈಕೆ ಮಾಡಲು ಅನುಷ್ಟಾನ ಮಾಡಿದ ಕೂಸಿನ ಮನೆಗೆ ದಿಢೀರ್ ಭೇಟಿ ನೀಡಿ ವೀಕ್ಷಿಸಿ, ಮಕ್ಕಳ ಆರೈಕೆದಾರರೊಂದಿಗೆ ಮಾತನಾಡಿದರು.

ಗ್ರಾಮೀಣ ಪ್ರದೇಶದ ಕೂಲಿ ಕಾರ್ಮಿಕ ಮಹಿಳೆಯರ ಮೂರು ವರ್ಷದೊಳಗಿನ ಮಕ್ಕಳನ್ನು ಆರೈಕೆ ಮಾಡುವ ಮೂಲಕ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಲು ಸರಕಾರ ಕೂಸಿನ ಮನೆ ಎಂಬ ಮಹತ್ವಾಕಾಂಕ್ಷಿ ಯೋಜನೆ ಜಾರಿಗೊಳಿಸಿದ್ದು, ಈ ಯೋಜನೆ ಸಮರ್ಪಕವಾಗಿ ಅನುಷ್ಟಾನ ಮಾಡುವ ಮೂಲಕ ಮಕ್ಕಳ ಬೌದ್ಧಿಕ, ಮಾನಸಿಕ ಹಾಗೂ ದೈಹಿಕ ಆರೋಗ್ಯದ ಸಮಗ್ರ ಬೆಳವಣಿಗೆ ನೋಡಿಕೊಳ್ಳುವುದು ಆರೈಕೆದಾರರ ಜವಾಬ್ದಾರಿ ಎಂದರು.

ಕೂಸಿನ ಮನೆಯಲ್ಲಿ ಮಕ್ಕಳನ್ನು ಆರೈಕೆ ಮಾಡುವುದನ್ನು ನೋಡಿದ ತಾಯಂದಿರು ಖುಷಿ ಪಡುವಂತಿರಬೇಕು. ತಾಯಂದಿರು ತಮ್ಮ ಮಕ್ಕಳನ್ನು ನಿರ್ಭೀತಿಯಿಂದ ಕೂಸಿನ ಮನೆಯಲ್ಲಿ ತಂದು ಬಿಡುವ ವಾತಾವರಣ ಸೃಷ್ಟಿಯಾಗಬೇಕು. ಆ ನಿಟ್ಟಿನಲ್ಲಿ ಆರೈಕೆದಾರರು ತರಬೇತಿಯಲ್ಲಿ ಪಡೆದ ಅನುಭವದ ಮೇಲೆ ಮಕ್ಕಳ ಪೋಷಣೆಯ ಕೆಲಸ ಮಾಡಬೇಕು ಎಂದರು.

ಮಕ್ಕಳ ಪ್ರಾರಂಭಿಕ ಬೆಳವಣಿಗೆಗೆ ಪೌಷ್ಠಿಕ ಆಹಾರ ಪ್ರಮುಖ ಪಾತ್ರವಹಿಸುತ್ತದೆ. ಹೀಗಾಗಿ ಕೂಸಿನ ಮನೆಯಲ್ಲಿ ಪ್ರತಿ ದಿನ ಮಕ್ಕಳಿಗೆ ಮೂರು ಭಾರಿ ಹಾಲು, ಗೋಧಿ ಪಾಯಸ, ದಾಲ್ ಕಿಚಡಿ, ಕೊಳಿ ಮೊಟ್ಟೆ, ಜೋಳದ ನುಚ್ಚಿನ ಗಂಜಿ, ಉಪ್ಪಿಟ್ಟು ಹಾಗೂ ಶೇಂಗಾ ಉಂಡೆ ನೀಡಲಾಗುತ್ತದೆ. ಅಲ್ಲದೆ, ಮಕ್ಕಳ ಬೆಳವಣಿಗೆಗೆ ಉತ್ತಮ ವಾತಾವರಣ ರೂಪಿಸಲಿದ್ದು, ಗ್ರಾಮೀಣ ಮಹಿಳಾ ಕೂಲಿ ಕಾರ್ಮಿಕರ ಮಕ್ಕಳ ಆರೈಕೆಯಾಗಲಿದೆ ಎಂದು ತಿಳಿಸಿದರು.

ತಾ.ಪಂ. ಅಧಿಕಾರಿ ಸೋಮಶೇಖರ ಬಿರಾದಾರ್, ಸಹಾಯಕ ನಿರ್ದೇಶಕ ಭೀಮಣ್ಣಗೌಡ ಬಿರಾದಾರ್, ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೀನಾಕ್ಷಿ ಪಾಟೀಲ್, ಪಿಡಿಒ ಮಡಿವಾಳಪ್ಪ, ಕಾರ್ಯದರ್ಶಿ ಮಹಾದೇವಪ್ಪ, ಮೊಬೈಲ್ ಕ್ರಚ್ಛೆಸ್ ಸಂಸ್ಥೆಯ ಟ್ರೇನರ್ ರಾಜೇಶ್ವರಿ, ಶಿಶು ಅಭಿವೃದ್ಧಿ ಇಲಾಖೆಯ ತರಬೇತುದಾರರಾದ ಕವಿತಾ ಕುಲಕರ್ಣಿ, ಶಿಶು ಆರೈದಾರರು ಸೇರಿದಂತೆ ಇತರರಿದ್ದರು.

Share this article