ಕನ್ನಡಪ್ರಭ ವಾರ್ತೆ ಸಾಗರ
ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಮೀಸಲಾತಿಗೆ ಕಾಂಗ್ರೆಸ್ ಸದಸ್ಯೆ ಎನ್.ಲಲಿತಮ್ಮ ನ್ಯಾಯಾಲಯದಿಂದ ತಡಯಾಜ್ಞೆ ತಂದಿರುವ ವಿಷಯ ಬುಧವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಆಡಳಿತ ಮತ್ತು ವಿಪಕ್ಷಗಳ ನಡುವೆ ತೀವ್ರ ಮಾತಿನ ಚಕಮಕಿಗೆ ಕಾರಣವಾಯಿತು.ಬಿಜೆಪಿ ಸದಸ್ಯರು ಲಲಿತಮ್ಮ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳುವುದರ ಜೊತೆಗೆ ನಗರದ 31 ವಾರ್ಡ್‌ಗಳ ಅಭಿವೃದ್ಧಿಗೆ ಲಲಿತಮ್ಮ ತಡೆಯಾಜ್ಞೆ ತಂದಿದ್ದು, ಜನರ ದೃಷ್ಟಿಯಲ್ಲಿ ಅವರು ಅಪರಾಧಿಯಾಗಿದ್ದಾರೆ. ಅವರನ್ನು ಸಭೆಯಿಂದ ಹೊರಗೆ ಕಳಿಸಿ ವಿಷಯ ಕುರಿತು ಚರ್ಚೆ ನಡೆಸಬೇಕು ಎಂದು ಒತ್ತಾಯಿಸಿದರು.
ಈ ವಿಷಯಕ್ಕೆ ಸಂಬಂಧಪಟ್ಟಂತೆ ನಾಮ ನಿರ್ದೇಶನ ಸದಸ್ಯರು ಲಲಿತಮ್ಮ ಪರ ನಿಂತಿದ್ದು ಬಿಟ್ಟರೆ, ಕಾಂಗ್ರೆಸ್ ಪಕ್ಷದ ಚುನಾಯಿತ ಸದಸ್ಯರು ನಿಲ್ಲದೆ ಇರುವುದು, ಇದು ಲಲಿತಮ್ಮ ಅವರ ವೈಯಕ್ತಿಕ ನಿರ್ಧಾರ ಎಂದು ಹೇಳಿದ್ದು ಬಿಜೆಪಿಗೆ ಅಸ್ತ್ರ ಸಿಕ್ಕಂತೆ ಆಯಿತು.ಬಿಜೆಪಿ ಸದಸ್ಯ ಟಿ.ಡಿ.ಮೇಘರಾಜ್ ಮಾತನಾಡಿ, ನಗರಸಭೆಯಲ್ಲಿ ಸುಮಾರು ಎರಡು ವರ್ಷದಿಂದ ಚುನಾಯಿತ ಸದಸ್ಯರ ಆಡಳಿತವಿಲ್ಲ. ರಾಜ್ಯ ಸರ್ಕಾರ ಮೀಸಲಾತಿ ಘೋಷಣೆ ಮಾಡಿ ಇನ್ನೇನು ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತದೆ ಎನ್ನುವ ಹೊತ್ತಿನಲ್ಲಿ ಕಾಂಗ್ರೆಸ್ ಸದಸ್ಯೆ ಲಲಿತಮ್ಮ ವೈಯಕ್ತಿಕ ಲಾಭಕ್ಕಾಗಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಇದರಿಂದ ನಗರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸಗಳು ನಿಂತು ಹೋಗಿದೆ. ಲಲಿತಮ್ಮ ಅವರು ತಡೆಯಾಜ್ಞೆ ತರುವ ಮೂಲಕ ನಗರದ ಜನರ ದೃಷ್ಟಿಯಲ್ಲಿ ಅಪರಾಧಿಯಾಗಿದ್ದಾರೆ. ಇಂಥವರನ್ನು ಸಭೆಯಲ್ಲಿ ಕೂರಿಸಿಕೊಂಡು ವಿಷಯ ಚರ್ಚೆ ಮಾಡಲು ಸಾಧ್ಯವಿಲ್ಲ, ಅವರನ್ನು ಹೊರಗೆ ಕಳಿಸಿ, ನ್ಯಾಯಾಲಯಕ್ಕೆ ಯಾವ ರೀತಿ ಮರುದಾವೆ ಹಾಕಬೇಕು ಎನ್ನುವ ಬಗ್ಗೆ ಚರ್ಚೆ ನಡೆಸಿ ಎಂದು ಒತ್ತಾಯಿಸಿದರು.
ಮೇಘರಾಜ್ ಮಾತಿಗೆ ಬಿಜೆಪಿ ಸದಸ್ಯರಾದ ಗಣೇಶಪ್ರಸಾದ್, ಮಧುರಾ ಶಿವಾನಂದ್, ಶ್ರೀನಿವಾಸ್ ಮೇಸ್ತ್ರೀ, ವಿ.ಮಹೇಶ್ ಇನ್ನಿತರರು ಸಾಥ್ ನೀಡಿದರು.ತಮ್ಮನ್ನು ಅಪರಾಧಿ ಎಂದಿರುವುದರಿಂದ ಕೆಂಡಮಂಡಲವಾದ ಲಲಿತಮ್ಮ ಬಿಜೆಪಿ ಸದಸ್ಯರು ಕ್ಷಮೆ ಕೋರಬೇಕು ಎಂದು ಒತ್ತಾಯಿಸುವ ಜೊತೆಗೆ ತಾವು ಪಕ್ಷದ ನಿಲುವಿನಂತೆ ತಡೆಯಾಜ್ಞೆ ತಂದಿರುವುದಾಗಿ ಸಮರ್ಥನೆ ಮಾಡಿಕೊಳ್ಳುವ ಪ್ರಯತ್ನ ನಡೆಸಿದರು.
ಆದರೆ ಕಾಂಗ್ರೆಸ್ ಸದಸ್ಯರಾದ ಮಧುಮಾಲತಿ, ವಿ.ಶಂಕರ್ ಇನ್ನಿತರರು ಇದು ಲಲಿತಮ್ಮ ಅವರ ವೈಯಕ್ತಿಕ ನಿಲುವು, ಪಕ್ಷಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದಾಗ ಬಿಜೆಪಿ ಸದಸ್ಯರು ಲಲಿತಮ್ಮ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.ಅಧ್ಯಕ್ಷತೆ ವಹಿಸಿದ್ದ ಆಡಳಿತಾಧಿಕಾರಿ ಯತೀಶ್ ಆರ್, ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಸ್ಥಳೀಯ ವಿಷಯ ಕುರಿತು ಯಾವುದೇ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಿಲ್ಲ. ವಿಚಾರಣೆಯು ಅ.14ರಂದು ನಡೆಯಲಿದೆ. ವಿಷಯವನ್ನು ಇಲ್ಲಿಗೆ ಸಮಾಪ್ತಿಗೊಳಿಸುವಂತೆ ಮನವಿ ಮಾಡಿದರು.
ಸಭಾತ್ಯಾಗಕ್ಕೆ ಮುಂದಾದ ಪೌರಾಯುಕ್ತ:
ಸೇಲ್ ಸರ್ಟಿಫಿಕೇಟ್ ಹಗರಣ ಮತ್ತು ಆಡಿಟ್ ವರದಿ ಬಗ್ಗೆ ಅರ್ಜಿ ಸಲ್ಲಿಸಲು ಕಾಂಗ್ರೆಸ್ ಸದಸ್ಯರು ಅಧ್ಯಕ್ಷರ ಬಳಿ ಬಂದಾಗ ನಾಮ ನಿರ್ದೇಶನ ಸದಸ್ಯ ರವಿ ಲಿಂಗನಮಕ್ಕಿ ಪೌರಾಯುಕ್ತ ಎಚ್.ಕೆ.ನಾಗಪ್ಪ ಅವರಿಗೆ ಬೆರಳು ತೋರಿಸಿ ಮಾತನಾಡುವ ಜೊತೆಗೆ ಸಭೆಗೆ ವಿಷಯ ತರದೆ ಇರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಇದರಿಂದ ಆಕ್ರೋಶಗೊಂಡ ಪೌರಾಯುಕ್ತ ಎಚ್.ಕೆ.ನಾಗಪ್ಪ ನಾಮ ನಿರ್ದೇಶನ ಸದಸ್ಯರು ತಮ್ಮ ಜವಾಬ್ದಾರಿ ಅರಿತು ಮಾತನಾಡುತ್ತಿಲ್ಲ. ನಗರಸಭೆ ಕಚೇರಿಗೆ ಬಂದು ಪದೇಪದೇ ಕಿರಿಕಿರಿ ಮಾಡುವ ಜೊತೆಗೆ ಸಾಮಾನ್ಯ ಸಭೆಯಲ್ಲಿ ಕೈತೋರಿಸಿ ಮಾತನಾಡಿದ್ದಾರೆ. ಇದರಿಂದ ನನ್ನ ಹುದ್ದೆಗೆ ಅಗೌರವ ಸೂಚಿಸಿದಂತೆ ಆಗಿದೆ. ನಾನು ಸಭಾತ್ಯಾಗ ಮಾಡುತ್ತೇನೆ ಎಂದರು.
ಬಿಜೆಪಿ ಸದಸ್ಯ ಟಿ.ಡಿ.ಮೇಘರಾಜ್ ಮತ್ತಿತರರು ಪೌರಾಯುಕ್ತರಿಗೆ ಅಪಮಾನ ಮಾಡಿರುವುದನ್ನು ಸಭೆಯಲ್ಲಿ ಖಂಡಿಸಿದರು. ಆಡಳಿತಾಧಿಕಾರಿಗಳ ಪ್ರವೇಶದ ನಂತರ ಪ್ರಕರಣ ಸುಖಾಂತ್ಯ ಕಂಡಿತು. ಆಡಳಿತಾಧಿಕಾರಿಗಳು ಸೇಲ್ ಸರ್ಟಿಫಿಕೇಟ್ ಹಗರಣ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದು, ವಿಶೇಷ ತಂಡ ರಚನೆ ಮಾಡಿ ತನಿಖೆ ನಡೆಸುತ್ತಾರೆ. ತನಿಖೆ ವರದಿ ಬಂದ ನಂತರ ಕ್ರಮ ಕೈಗೊಳ್ಳುವುದಾಗಿ ಸಭೆಗೆ ತಿಳಿಸಿದರು.