ಹಳ್ಳಿಗಳಲ್ಲಿ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ: ಶಾಸಕ ಮಂಜುನಾಥ್‌

KannadaprabhaNewsNetwork |  
Published : Apr 09, 2026, 01:15 AM IST
೮ಕೆಎಲ್‌ಆರ್-೬ಕೋಲಾರದ ಜಿಪಂ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ಕೆಡಿಪಿ ಸಭೆಯಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಮಾತನಾಡುತ್ತಿರುವುದು. | Kannada Prabha

ಸಾರಾಂಶ

ಹಳ್ಳಿಗಳಲ್ಲಿ ಮದ್ಯ ಮಾರಾಟ ಹೆಚ್ಚುತ್ತಿರುವ ಬಗ್ಗೆ ಮಹಿಳೆಯರಿಂದ ದೂರುಗಳು ಬರುತ್ತಿವೆ. ಇದಕ್ಕೆ ಅಬಕಾರಿ ಇಲಾಖೆ ಅಧಿಕಾರಿಗಳು ನಿಯಂತ್ರಣ ಹಾಕಬೇಕು. ಇಲ್ಲದಿದ್ದರೆ ನಿಮ್ಮ ಮೇಲೆ ಕಾನುನು ಕ್ರಮ ವಹಿಸಬೇಕಾಗುತ್ತದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ಕೋಲಾರಹಳ್ಳಿಗಳಲ್ಲಿ ಮದ್ಯ ಮಾರಾಟ ಹೆಚ್ಚುತ್ತಿರುವ ಬಗ್ಗೆ ಮಹಿಳೆಯರಿಂದ ದೂರುಗಳು ಬರುತ್ತಿವೆ. ಇದಕ್ಕೆ ಅಬಕಾರಿ ಇಲಾಖೆ ಅಧಿಕಾರಿಗಳು ನಿಯಂತ್ರಣ ಹಾಕಬೇಕು. ಇಲ್ಲದಿದ್ದರೆ ನಿಮ್ಮ ಮೇಲೆ ಕಾನುನು ಕ್ರಮ ವಹಿಸಬೇಕಾಗುತ್ತದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ನಗರದ ಜಿಪಂ ಸಭಾಂಗಣದಲ್ಲಿ ತಾಲೂಕು ಮಟ್ಟದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿರುವ ದೂರುಗಳು ಬಂದಾಗ ದಾಳಿ ಮಾಡಲು ಹೋಗುತ್ತೀರಿ. ಅಷ್ಟರಲ್ಲಿ ತಮ್ಮ ಕಚೇರಿಯಲ್ಲಿರುವವರೇ ಮದ್ಯ ಮಾರಾಟಗಾರರಿಗೆ ಸುಳಿವು ನೀಡುತ್ತಾರೆ. ದಾಳಿ ಮಾಡಲು ಆ ಸ್ಥಳಕ್ಕೆ ಹೋದಾಗ ಏನೂ ಇರುವುದಿಲ್ಲ. ಇದರಲ್ಲಿ ಅಬಕಾರಿ ಇಲಾಖೆಯ ಕೆಲ ಅಧಿಕಾರಿಗಳು ಶಾಮೀಲಾಗಿರುವ ಮಾಹಿತಿಗಳು ಬರುತ್ತಿವೆ. ಹೀಗೆ ಮುಂದುವರಿದರೆ ನಾನು ಸುಮ್ಮನಿರುವುದಿಲ್ಲ. ದಾಳಿ ನಡೆಸಿ ಹಳ್ಳಿಗಳಲ್ಲಿ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು ಎಂದು ಸೂಚಿಸಿದರು.ಅಬಕಾರಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ಹೊಸದಾಗಿ ಬಂದಿರುವ ನೀವು ಏಕೆ ಇನ್ನೂ ಪರಿಚಯ ಮಾಡಿಕೊಂಡಿಲ್ಲ? ತಾಲ್ಲೂಕಿನಲ್ಲಿ ಎಷ್ಟು ಸಿಎಲ್‌ಗಳಿಗೆ? ಎಷ್ಟು ಮಂದಿ ಅರ್ಜಿ ಹಾಕಿದ್ದಾರೆ? ಅನುಮತಿ ನೀಡಲು ಏನೆಲ್ಲಾ ಮಾನದಂಡ ನಿಗದಿಪಡಿಸಿದ್ದೀರಿ? ಹಳ್ಳಿಗಳಲ್ಲಿ ಮಾರಾಟ ಮಾಡುತ್ತಿರುವ ಸಂಬಂಧ ಎಷ್ಟು ಪ್ರಕರಣ ದಾಖಲಿಸಿದ್ದೀರಿ ಎಂದು ಪ್ರಶ್ನಿಸಿದರು.ಆಗ ಅಧಿಕಾರಿಯು ತಾಲೂಕಿನಲ್ಲಿ 31 ಸಿಎಲ್‌ಗಳಿವೆ. ಈ ವರ್ಷದಲ್ಲಿ 3 ಆಗಿವೆ. ಬೇರೆ ಯಾವುದೇ ಅರ್ಜಿಗಳು ಬಾಕಿ ಇಲ್ಲ. 174 ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಿದ್ದೇವೆ ಎಂದು ಉತ್ತರಿಸಿದರು.ಸಣ್ಣ ನೀರಾವರಿ ಇಲಾಖೆ ಕಾಮಗಾರಿ ಕುರಿತು ಮಾತನಾಡಿದ ಶಾಸಕರು, ಕೋಲಾರ ವಿಧಾನಸಭೆ ಕ್ಷೇತ್ರವೊಂದಕ್ಕೇ 100ಕ್ಕೂ ಅಧಿಕ ಕೋಟಿ ರು.ಅನುದಾನ ಲಭಿಸಿದೆ. 10 ಕೋಟಿ ರು. ವೆಚ್ಚದಲ್ಲಿ ಕೋಡಿ ಕಣ್ಣೂರು ಕೆರೆ ಅಭಿವೃದ್ಧಿ ಮಾಡಲಾಗುತ್ತಿದೆ. ಲೋಕೋಪಯೋಗಿ ಇಲಾಖೆಯ ಕಾಮಗಾರಿಗೂ ೧೦೦ ಕೋಟಿಗೂ ಅಧಿಕ ಅನುದಾನ ಸಿಕ್ಕಿದೆ. ತಾಲೂಕಿನ ಬಹುತೇಕ ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಆದರೆ, ಕೆಲವರು ಅನುದಾನ ಎಲ್ಲಿ ಎಂದು ಹೇಳುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.ಕೃಷಿ ಇಲಾಖೆಗೆ ಸಂಬಂಧಿಸಿದಂತೆ ತಾಲೂಕಿನಲ್ಲಿ ಹಂಗಾಮಿನ ಕೃಷಿ ಚಟುವಟಿಕೆ ಪ್ರಗತಿ, ಬಿತ್ತನೆ ಬೀಜ, ಔಷಧ, ರಸಗೊಬ್ಬರದ ದಾಸ್ತಾನು ಬಗ್ಗೆ ಮಾಹಿತಿ ಕೇಳಿದರು.ಕೃಷಿಯಲ್ಲಿ ನಿಮಗಿಂತ ನನಗೆ ಹತ್ತರಷ್ಟು ಅನುಭವ ಇದೆ. ವಿವಿಧ ದೇಶಗಳಲ್ಲಿ ನೋಡಿದ್ದೇನೆ. ಇಸ್ರೇಲ್‌ನಲ್ಲಿ ನೀರಿನ ನಿರ್ವಹಣೆ ಚೆನ್ನಾಗಿದೆ. ಬರ್ಮಾದಲ್ಲಿ ಅತ್ಯುತ್ತಮ ಕೃಷಿ ಮಾಡುತ್ತಾರೆ. ಇಂಡೋನೇಷಿಯಾದಲ್ಲೂ ಚೆನ್ನಾಗಿದೆ. ರೈತರು ಅಲ್ಲಿ ಶ್ರೀಮಂತರಾಗಿದ್ದಾರೆ, ಉದ್ಯಮಿಗಳೇ ಬಡವರು. ನಮ್ಮಲ್ಲಿ ಏಕೆ ಈ ಸಮಸ್ಯೆ? ರೈತರು ಏಕೆ ಪದೇಪದೇ ತೊಂದರೆಗೆ ಒಳಗಾಗುತ್ತಾರೆ. ಆ ದೇಶಗಳಿಗೆ ಭೇಟಿ ನೀಡಿ ಅಧ್ಯಯನ ಮಾಡಬೇಕು. ಅಲ್ಲಿಯ ಪದ್ಧತಿಯನ್ನು ನಮ್ಮಲ್ಲೂ ಅಳವಡಿಸಿಕೊಳ್ಳಬೇಕು ಎಂದರು.ಕೆಡಿಪಿ ಸದಸ್ಯರು ಮಾತನಾಡಿ, ಟೊಮೆಟೋಗೆ ವೈರಾಣು ಸಮಸ್ಯೆಯಿಂದ ಬೆಳೆ ಕುಂಠಿತಗೊಳ್ಳುತ್ತಿದೆ ಎಂದು ದೂರಿದರು. ಆಗ ತೋಟಗಾರಿಕೆ ತಾಲ್ಲೂಕು ಅಧಿಕಾರಿ ಮಾತನಾಡಿ, ಪದೇಪದೇ ಒಂದೇ ಮಣ್ಣಿನಲ್ಲಿ ಬೆಳೆದು ಟೊಮೆಟೊ ಬೆಳೆಯಲ್ಲಿ ಸಮಸ್ಯೆ ಆಗಿದೆ. ಮಣ್ಣಿನ ಆರೋಗ್ಯ ಸರಿಪಡಿಸಿಕೊಳ್ಳಬೇಕು ಎಂದು ಸಮಜಾಯಿಷಿ ನೀಡಿದರು.

ಆಗ ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ರಾಜಕಾರಣಿಗಳು ಕೆ.ಸಿ.ವ್ಯಾಲಿ ನೀರು ಕಾರಣ ಎಂದು ಹೇಳುತ್ತಿದ್ದಾರೆ. ಇದಕ್ಕೆ ಏನು ಹೇಳುತ್ತೀರಿ ಎಂದು ಪ್ರಶ್ನಿಸಿದರು. ಆಹಾರ ಇಲಾಖೆ ಕುರಿತು ಮಾಹಿತಿ ಪಡೆದ ಕೊತ್ತೂರು ಮಂಜುನಾಥ್, ತಾಲ್ಲೂಕಿನಲ್ಲಿ ಸುಮಾರು ೩,೫೦೦ ಬಿಪಿಎಲ್ ಚೀಟಿಗಳು ಎಪಿಎಲ್‌ಗೆ ಬದಲಾವಣೆ ಆಗಿರುವುದನ್ನು ಕೇಳಿ ಅಶ್ಚರ್ಯಚಕಿತರಾದರು. ಕೆಲವೊಂದು ಕಾರಣಗಳಿಂದ ಸಮಸ್ಯೆ ಆಗಿದ್ದು, ಅರ್ಹರು ಮತ್ತೆ ಬಿಪಿಎಲ್ ಪಡೆಯಲು ಅವಕಾಶ ಮಾಡಿಕೊಡಿ ಎಂದು ನಿರ್ದೇಶನ ನೀಡಿದರು.

ಎಲ್‌ಪಿಜಿ ಸಿಲಿಂಡರ್ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಯು, ತಾಲೂಕಿನಲ್ಲಿ ಶೇ.80ರಷ್ಟು ಗೃಹ ಬಳಕೆ ಸಿಲಿಂಡರ್ ಹಾಗೂ ಶೇ. 40ರಷ್ಟು ವಾಣಿಜ್ಯ ಬಳಕೆ ಸಿಲಿಂಡರ್‌ಗಳು ಪೂರೈಕೆ ಆಗುತ್ತಿವೆ. ಆದರೆ, ಗೃಹ ಬಳಕೆ ಸಿಲಿಂಡರ್ ಬುಕ್ ಮಾಡುತ್ತಿರುವ ಸಂಖ್ಯೆ ಹೆಚ್ಚಿದೆ ಎಂದು ಹೇಳಿದರು. ಆಗ ಶಾಸಕರು, ಸಿಲಿಂಡರ್ ವಿಚಾರವಾಗಿ ಯಾವುದೇ ಕಾರಣಕ್ಕೂ ಜನರು ಗಾಬರಿ ಆಗಬಾರದು. ಈ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಜಂಬಗಿ ರೇಣುಕಾ ಪ್ರಸಾದ್ ದಿಲೀಪ್, ತಹಸೀಲ್ದಾರ್ ಡಾ.ನಯನಾ, ಇಒ ಮಂಜುನಾಥ್, ತಾಲೂಕು ಗ್ಯಾರಂಟಿ ಅಧ್ಯಕ್ಷ ಮುನಿಯಪ್ಪ, ಕೆಡಿಪಿ ಸದಸ್ಯರಾದ ಯಲವಾರ ರಾಜಕುಮಾರ್, ವರಲಕ್ಷ್ಮೀ, ಜಯರಾಮ್, ಮುರಳಿ, ಮಂಜುನಾಥ್ ಗೌಡ, ಸೈಯದ್ ಪಾಷ ಹಾಜರಿದ್ದರು.

ಕೆಲಸ ಮಾಡದವರ ಗುತ್ತಿಗೆ ರದ್ದುಪಡಿಸಿ

ತಾಲೂಕಿನಲ್ಲಿ ಎಲ್ಲಾ ರಸ್ತೆಗಳ ಅಭಿವೃದ್ಧಿ ಕೆಲಸ ನಡೆಯುತ್ತಿದೆ. ಶೀಘ್ರದಲ್ಲಿ ಕಾಮಗಾರಿ ಮುಗಿಸಬೇಕು. ಕೆಲ ಗುತ್ತಿಗೆದಾರರು ಇನ್ನೂ ಕಾಮಗಾರಿಯನ್ನೇ ಶುರು ಮಾಡಿಲ್ಲ. ಅಂಥ ಗುತ್ತಿಗೆದಾರರ ಟೆಂಡರ್ ರದ್ದು ಮಾಡಿ. ನರಸಾಪುರ ರಸ್ತೆಗೆ ಬರಿ ಡಾಂಬಾರ್ ಹಾಕಿ ಬಿಟ್ಟರೆ ಸಾಲದು; ಚರಂಡಿಯನ್ನೂ ನಿರ್ಮಿಸಬೇಕು. ಮಾಲೂರು ರಸ್ತೆಯಲ್ಲಿ ಎಪಿಎಂಸಿ ಮುಂದೆ ೧೦ ಕೋಟಿಯಲ್ಲಿ ಸಿಮೆಂಟ್ ರಸ್ತೆ ನಿರ್ಮಿಸುತ್ತಿದ್ದು, ಒಂದು ಬದಿಯಲ್ಲಿ ಮಾತ್ರ ಕೆಲಸ ಆಗಿದೆ ಎಂದು ಹೇಳಿದರು.

ಮುಂದಿನ ಸಭೆಗೆ ಯಾರು ಗೈರಾಗಬಾರದು

ಸಭೆಗೆ ಗೈರಾಗಿದ್ದ ಆರ್‌ಟಿಒ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಶಾಸಕ, ಕಳೆದ ಸಭೆಗೆ ಬೇರೆ ಯಾರನ್ನೋ ಕಳಿಸಿದ್ದರು. ಈ ಬಾರಿಯೂ ಬಂದಿಲ್ಲ. ನೋಟಿಸ್ ನೀಡಿ ಅಮಾನತಿಗೆ ಶಿಫಾರಸು ಮಾಡಿ ಎಂದು ಸೂಚಿಸಿದರು. ಮುಂದಿನ ಕೆಡಿಪಿ ಸಭೆಯನ್ನು ಜುಲೈ ಎರಡನೇ ವಾರಕ್ಕೆ ನಿಗದಿ ಮಾಡಿ. ಅಧಿಕಾರಿಗಳು ಯಾರೂ ಯಾರೂ ತಪ್ಪಿಸಿಕೊಳ್ಳಬಾರದು, ಯಾವುದೇ ಕೆಲಸ ಇಟ್ಟುಕೊಳ್ಳಬಾರದು ಎಂದು ಹೇಳಿದರು.ಇದೇ ವೇಳೆ ನೂತನವಾಗಿ ನೇಮಕಗೊಂಡ ಕೆಡಿಪಿ ಸದಸ್ಯರನ್ನು ಸನ್ಮಾನಿಸಲಾಯಿತು. ಶಾಸಕರ ವೇತನದಲ್ಲಿನ ಹಣದಲ್ಲಿ ಇಬ್ಬರಿಗೆ ಆರೋಗ್ಯ ವೆಚ್ಚಕ್ಕಾಗಿ ತಲಾ 50 ಸಾವಿರ ರು.ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

700 ಅಹವಾಲು ಸ್ವೀಕರಿಸಿದ ಸಚಿವ ಡಾ: ಜಿ. ಪರಮೇಶ್ವರ
ಜನಪದ ಪೂರ್ವಜನರು ನೀಡಿರುವ ದೊಡ್ಡ ಕೊಡುಗೆ