ಪಂಪ್‌ ವೆಲ್‌ಗೆ ನಿರ್ಬಂಧ: ಜಿಲ್ಲಾಡಳಿತ ವಿರುದ್ಧ ಪ್ರತಿಭಟನೆ

KannadaprabhaNewsNetwork |  
Published : Jul 07, 2025, 11:48 PM IST
ದೇವರಾಜ್‌ ಶೆಟ್ಟಿಜಿಲ್ಲಾಧ್ಯಕ್ಷರು, ಬಿಜೆಪಿ | Kannada Prabha

ಸಾರಾಂಶ

ಚಿಕ್ಕಮಗಳೂರು, ವಿಶ್ವ ಹಿಂದೂ ಪರಿಷತ್‌ನ ಪ್ರಾಂತ ಸಹ ಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌ ಚಿಕ್ಕಮಗಳೂರು ಜಿಲ್ಲೆಗೆ ಭೇಟಿ ನೀಡುವುದನ್ನು ನಿರ್ಬಂಧಿಸಿ ಜಿಲ್ಲಾಡಳಿತ ಜು. 5 ರಂದು ಹೊರಡಿಸಿರುವ ಆದೇಶದ ವಿರುದ್ಧ ಸೋಮವಾರ ಬಿಜೆಪಿ, ವಿಶ್ವಹಿಂದೂ ಪರಿಷತ್‌ ಹಾಗೂ ಭಜರಂಗದಳ ಮುಖಂಡರು ಹಾಗೂ ಕಾರ್ಯಕರ್ತರು ಜಿಲ್ಲಾ ಪೊಲೀಸ್‌ ಇಲಾಖೆ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಡಿಸಿ ಕಚೇರಿಗೆ ಪೊಲೀಸರ ಸರ್ಪಗಾವಲು । ಮಧ್ಯಾಹ್ನದವರೆಗೆ ಬಿಗುವಿನ ವಾತಾವರಣ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ವಿಶ್ವ ಹಿಂದೂ ಪರಿಷತ್‌ನ ಪ್ರಾಂತ ಸಹ ಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌ ಚಿಕ್ಕಮಗಳೂರು ಜಿಲ್ಲೆಗೆ ಭೇಟಿ ನೀಡುವುದನ್ನು ನಿರ್ಬಂಧಿಸಿ ಜಿಲ್ಲಾಡಳಿತ ಜು. 5 ರಂದು ಹೊರಡಿಸಿರುವ ಆದೇಶದ ವಿರುದ್ಧ ಸೋಮವಾರ ಬಿಜೆಪಿ, ವಿಶ್ವಹಿಂದೂ ಪರಿಷತ್‌ ಹಾಗೂ ಭಜರಂಗದಳ ಮುಖಂಡರು ಹಾಗೂ ಕಾರ್ಯಕರ್ತರು ಜಿಲ್ಲಾ ಪೊಲೀಸ್‌ ಇಲಾಖೆ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್‌ ಶೆಟ್ಟಿ, ವಿಎಚ್‌ಪಿ ಜಿಲ್ಲಾಧ್ಯಕ್ಷ ಶ್ರೀಕಾಂತ್‌ ಪೈ ನೇತೃತ್ವದಲ್ಲಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಎಂ.ಜಿ. ರಸ್ತೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳುವ ವೇಳೆಯಲ್ಲಿ ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿ ವೃತ್ತದಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್‌ನಲ್ಲಿ ಪೊಲೀಸರು ತಡೆದರು. ಆ ವೇಳೆಯಲ್ಲಿ ಜಿಲ್ಲಾಡಳಿತ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಹಾಕಿದರು. ರಾಜ್ಯ ಸರ್ಕಾರದ ಅಣತಿಯಂತೆ ಪೊಲೀಸ್ ಇಲಾಖೆ ನಡೆದು ಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಇದನ್ನು ಪೊಲೀಸ್‌ ಅಧಿಕಾರಿಗಳು ಅರ್ಥ ಮಾಡಿಕೊಳ್ಳ ಬೇಕೆಂದು ಹೇಳಿದರು.

ಈ ವಿಷಯ ಕುರಿತು ಜಿಲ್ಲಾಡಳಿತದೊಂದಿಗೆ ಮಾತನಾಡಬೇಕೆಂದು ಮುಖಂಡರು ಪಟ್ಟು ಹಿಡಿದರು. ಸುಮಾರು ಅರ್ಧ ತಾಸಿನ ಬಳಿಕ ಐದು ಮಂದಿ ಮುಖಂಡರನ್ನು ಪೊಲೀಸರು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಲು ಅವಕಾಶ ನೀಡಿದರು. ಜಿಲ್ಲಾಧಿಕಾರಿ ಮೀನಾ ನಾಗರಾಜ್‌ ಹಾಗೂ ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್‌ ಶೆಟ್ಟಿ, ವಿಎಚ್‌ಪಿ ಜಿಲ್ಲಾಧ್ಯಕ್ಷ ಶ್ರೀಕಾಂತ್‌ ಪೈ, ಭಜರಂಗದಳ ಜಿಲ್ಲಾ ಸಂಚಾಲಕ ಮಹೇಂದ್ರ ಅವರೊಂದಿಗೆ ಚರ್ಚೆ ನಡೆಸಿದರು.

ಸಭೆಯ ಬಳಿಕ ಮುಖಂಡರು ಜಿಲ್ಲಾಧಿಕಾರಿಗಳ ನಿಲುವು ಪ್ರತಿಭಟನಾಕಾರರ ಮುಂದೆ ಪ್ರಸ್ತಾಪಿಸಿ, ಜಿಲ್ಲಾಧಿಕಾರಿಗಳು ಆದೇಶವನ್ನು ಹಿಂಪಡೆಯುವುದಾಗಿ ಹೇಳಿದ್ದಾರೆ. ಇಲ್ಲದೆ ಹೋದರೆ ಜಿಲ್ಲಾಡಳಿತದ ವಿರುದ್ಧ ಹೋರಾಟ ರೂಪಿಸಲಾಗುವುದು ಎಂದು ಹೇಳಿದ ಬಳಿಕ ಪ್ರತಿಭಟನಾಕಾರರು ಸ್ಥಳದಿಂದ ತೆರಳಿದರು.

ಪ್ರತಿಭಟನೆಯ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸುತ್ತಮುತ್ತ ಬಿಗಿ ಪೊಲೀಸ್‌ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿತ್ತು.

--- ಬಾಕ್ಸ್‌ -----ಆಗಿದ್ದೇನು ?ವಿಎಚ್‌ಪಿ ಪ್ರಾಂತ ಸಹ ಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌ ಸೋಮವಾರ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸ ಕೈ ಗೊಂಡಿದ್ದರು. ಅವರು ಚಿಕ್ಕಮಗಳೂರು, ಆಲ್ದೂರು ಹಾಗೂ ಮೂಡಿಗೆರೆಯಲ್ಲಿ ಹಮ್ಮಿಕೊಂಡಿದ್ದ ಬೈಠಕ್‌ನಲ್ಲಿ ಪಾಲ್ಗೊಳ್ಳಬೇಕಾಗಿತ್ತು.

ಇದೊಂದು ಸೂಕ್ಷ್ಮ ಜಿಲ್ಲೆ. ಇಲ್ಲಿಗೆ ಶರಣ್‌ ಪಂಪ್‌ವೆಲ್ ಅವರು ಬಂದು ಬೈಠಕ್‌ನಲ್ಲಿ ಭಾಗವಹಿಸಿ ಪ್ರಚೋದನಕಾರಿ ಭಾಷಣ ಮಾಡಿದರೆ ಸೌಹಾರ್ದತೆಗೆ ದಕ್ಕೆಯಾಗುವ ಸಾಧ್ಯತೆ ಇದೆ. ಹಾಗಾಗಿ ಅವರು ಜಿಲ್ಲೆಗೆ ಪ್ರವೇಶ ಮಾಡುವುದನ್ನು ನಿರ್ಬಂಧಿಸ ಬೇಕೆಂದು ಜಿಲ್ಲಾ ಪೊಲೀಸ್ ಇಲಾಖೆ ಕೊಟ್ಟ ವರದಿ ಆಧಾರದ ಮೇಲೆ ಜಿಲ್ಲಾಡಳಿತ ಜು. 5 ರಿಂದ 30 ದಿನಗಳವರೆಗೆ ಅನ್ವಯ ವಾಗುವಂತೆ ಶರಣ್‌ ಪಂಪ್‌ವೆಲ್‌ ಜಿಲ್ಲಾ ಪ್ರವೇಶ ನಿರ್ಬಂಧಿಸಿ ಆದೇಶ ಹೊರಡಿಸಿದೆ.

ಜಿಲ್ಲಾಡಳಿತದ ಈ ಕ್ರಮ ಖಂಡಿಸಿ ಸೋಮವಾರ ಜಿಲ್ಲಾಧಿಕಾರಿ ಭೇಟಿ ಮಾಡಲು ಹಿಂದೂ ಪರ ಸಂಘಟನೆಗಳ ಮುಖಂಡರು ಬರುವ ವೇಳೆಯಲ್ಲಿ ಅವರನ್ನು ತಡೆಯುವ ಕೆಲಸ ಪೊಲೀಸರು ಮಾಡಿದರು. ಜಿಲ್ಲಾಡಳಿತದ ಸುತ್ತ 200 ಮೀಟರ್‌ ವ್ಯಾಪ್ತಿ ಯಲ್ಲಿ ಯಾವುದೇ ಪ್ರತಿಭಟನೆ, ಮುಷ್ಕರ ನಡೆಸದಂತೆ ಈ ಹಿಂದೆಯೇ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

--- ಕೋಟ್‌ ---

ಶರಣ್ ಪಂಪ್ ವೆಲ್ ನಗರದಲ್ಲಿ ಬೈಠಕ್ ನಡೆಸಲು ಆಗಮಿಸಬೇಕಿತ್ತು ಆದರೆ ಜಿಲ್ಲಾಡಳಿತದ ನಿರ್ಧಾರದಿಂದ ಎಲ್ಲರಿಗೂ ನೋವುಂಟಾಗಿದೆ.

ಶರಣ್ ಹಿಂದೆಯೂ ಹಲವು ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳಲು ಜಿಲ್ಲೆಗೆ ಆಗಮಿಸಿದ್ದು ಎಂದೂ ಕೂಡ ಸಮಸ್ಯೆ ಆಗಿಲ್ಲ ವಾದರೂ ಜಿಲ್ಲಾಡಳಿತ ಈ ಕ್ರಮಕ್ಕೆ ಮುಂದಾಗಿದೆ. ಈ ನಿರ್ಧಾರ ಹಿಂಪಡೆಯುವ ಭರವಸೆ ಜಿಲ್ಲಾಧಿಕಾರಿ ನೀಡಿದ್ದು, ಅದು ಈಡೇರದಿದ್ದಲ್ಲಿ ಮುಂದಿನ ನಿರ್ಧಾರ ಕೈಗೊಳ್ಳಲು ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು.- ದೇವರಾಜ್‌ ಶೆಟ್ಟಿ

ಜಿಲ್ಲಾಧ್ಯಕ್ಷರು, ಬಿಜೆಪಿಪೋಟೋ ಫೈಲ್ ನೇಮ್‌ 7 ಕೆಸಿಕೆಎಂ 4

---

ಪೋಟೋ ಫೈಲ್‌ ನೇಮ್‌ 7 ಕೆಸಿಕೆಎಂ 5

ಶರಣ್ ಪಂಪ್ ವೆಲ್ ಅವರು ಜಿಲ್ಲೆಗೆ ಆಗಮಿಸುವುದನ್ನು ನಿರ್ಬಂಧಿಸಿ ಜಿಲ್ಲಾಡಳಿತ ಹೊರಡಿಸಿದ ಆದೇಶ ಹಿಂಪಡೆಯಬೇಕೆಂದು ಆಗ್ರಹಿಸಿ ವಿಎಚ್‌ಪಿ, ಬಿಜೆಪಿ ಹಾಗೂ ಭಜರಂಗದಳ ಕಾರ್ಯಕರ್ತರು ಚಿಕ್ಕಮಗಳೂರಿನ ಪೊಲೀಸ್‌ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

PREV