ಹೊರಜಿಲ್ಲೆಯ ಪೋಷಕರ ವಿಶ್ವಾಸ ಉಳಿಸಿಕೊಳ್ಳ‍ಿ : ತನ್ವೀರ್ ಸೇಠ್

KannadaprabhaNewsNetwork |  
Published : Nov 05, 2026, 02:45 AM IST
ಹಿಂವರ್ಗ - ಅಸಂ ಕಲ್ಯಾಣ ಸಮಿತಿ ಅಧ್ಯಕ್ಷ ತನ್ವೀರ್ ಸೇಠ್ ಪ್ರಗತಿ ಪರಿಶೀಲನಾ ಸಭೆ ನಡೆಸಿದರು | Kannada Prabha

ಸಾರಾಂಶ

ಉಡುಪಿ ಜಿಲ್ಲೆ ಶೈಕ್ಷಣಿಕವಾಗಿ ಮುಂದಿರುವುದರಿಂದ ಹೊರಜಿಲ್ಲೆಗಳ ಪೋಷಕರು ತಮ್ಮ ಮಕ್ಕಳನ್ನು ಇಲ್ಲಿನ ವಸತಿ ಶಾಲೆಗಳಲ್ಲಿ, ವಿದ್ಯಾರ್ಥಿನಿಲಯಗಳಿಗೆ ಕಳುಹಿಸುತಿದ್ದಾರೆ. ಅಧಿಕಾರಿಗಳು ಹಾಗೂ ಹಾಸ್ಟೆಲ್ ಸಿಬ್ಬಂದಿ ಆ ವಿಶ್ವಾಸವನ್ನು ಕಳೆದುಕೊಳ್ಳದೇ ಕೆಲಸ ಮಾಡಬೇಕು ಎಂದು ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಅಧ್ಯಕ್ಷ ತನ್ವೀರ್ ಸೇಠ್ ಹೇಳಿದರು.

ಉಡುಪಿ : ಉಡುಪಿ ಜಿಲ್ಲೆ ಶೈಕ್ಷಣಿಕವಾಗಿ ಮುಂದಿರುವುದರಿಂದ ಹೊರಜಿಲ್ಲೆಗಳ ಪೋಷಕರು ತಮ್ಮ ಮಕ್ಕಳನ್ನು ಇಲ್ಲಿನ ವಸತಿ ಶಾಲೆಗಳಲ್ಲಿ, ವಿದ್ಯಾರ್ಥಿನಿಲಯಗಳಿಗೆ ಕಳುಹಿಸುತಿದ್ದಾರೆ. ಅಧಿಕಾರಿಗಳು ಹಾಗೂ ಹಾಸ್ಟೆಲ್ ಸಿಬ್ಬಂದಿ ಆ ವಿಶ್ವಾಸವನ್ನು ಕಳೆದುಕೊಳ್ಳದೇ ಕೆಲಸ ಮಾಡಬೇಕು ಎಂದು ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಅಧ್ಯಕ್ಷ ತನ್ವೀರ್ ಸೇಠ್ ಹೇಳಿದರು.ರಜತಾದ್ರಿಯ ಜಿಪಂ ಸಭಾಂಗಣದಲ್ಲಿ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಸಮುದಾಯಗಳ ಕಲ್ಯಾಣ ಯೋಜನೆ, ಕಾರ್ಯಕ್ರಮ, ಸೌಲಭ್ಯಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಹೆಚ್ಚಾಗುತ್ತಿದ್ದು, ಹಾಸ್ಟೆಲ್‌ಗಳಲ್ಲಿ ಸೀಟು ಸಿಗುತ್ತಿಲ್ಲ ಎಂಬ ದೂರುಗಳು ಇವೆ. ಇದರ ಪರಿಹಾರಕ್ಕೆ ಅಧಿಕಾರಿಗಳು ಕ್ರಮವಹಿಸಬೇಕು ಎಂದರು. ವಿಧಾನಪರಿಷತ್ತಿನ ಸದಸ್ಯ ಕೇಶವ ಪ್ರಸಾದ್ ಎಸ್. ಮಾತನಾಡಿ, ಮುಸ್ಲಿಂ, ಕ್ರಿಶ್ಚಿಯನ್ ಹೊರತುಪಡಿಸಿ, ಉಳಿದ ಅಲ್ಪಸಂಖ್ಯಾತ ಸಮುದಾಯದವರಿಗೆ ಸರ್ಕಾರದ ಯೋಜನೆಗಳು ತಲುಪಿದೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಬೇಕು ಎಂದರು.

ವಿಧಾನಸಭೆ ಸದಸ್ಯ ಚನ್ನಬಸಪ್ಪ ಮಾತನಾಡಿ, ಇಲ್ಲಿ ವಿದ್ಯಾಭ್ಯಾಸಕ್ಕಾಗಿ ಉತ್ತರ ಕರ್ನಾಟಕದ ಮಕ್ಕಳು ಹೆಚ್ಚು ಬರುತ್ತಿದ್ದು, ವಿದ್ಯಾರ್ಥಿಗಳ ಸಂಖ್ಯೆನುಗುಣವಾಗಿ ಹೆಚ್ಚುವರಿ ಹಾಸ್ಟೆಲ್‌ಗಳ ನಿರ್ಮಾಣ ಮಾಡಬೇಕು ಎಂದು ಸಲಹೆ ನೀಡಿದರು.

ವಿಧಾನಸಭೆ ಸದಸ್ಯರಾದ ಹೆಚ್.ಎ ಇಕ್ಬಾಲ್ ಹುಸೇನ್ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಖಾಸಗಿ ದಾನಿಗಳ ಸಂಖ್ಯೆ ಹೆಚ್ಚಿದ್ದು, ಇನ್ನಷ್ಟು ದಾನಿಗಳನ್ನು ಸಂಪರ್ಕಿಸಿ, ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದರು. ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಮಾತನಾಡಿ, ಜಿಲ್ಲೆಯಲ್ಲಿ ಸರ್ಕಾರದ ಜೊತೆಗೆ ಹೆಚ್ಚಾಗಿ ಖಾಸಗಿ ಉದ್ದಿಮೆಗಳ ಸಿ.ಆರ್.ಎಸ್. ಅನುದಾನ ಸಿಗುತ್ತಿದೆ. ಹಳೆ ವಿದ್ಯಾರ್ಥಿಗಳು ಸಹಾಯ ಮಾಡುತಿದ್ದಾರೆ. 29 ಸರ್ಕಾರಿ ಶಾಲೆಗಳ ಶೌಚಾಲಯಗಳ ಶುಚಿತ್ವಕ್ಕೆ ದಾನಿಯೊಬ್ಬರು ವ್ಯವಸ್ಥೆ ಮಾಡಿದ್ದಾರೆ. ಈ ಎಲ್ಲಾ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಫಲಿತಾಂಶವು ಉತ್ತಮ ವಾಗಿದೆ ಎಂದು ಸಮಿತಿಯ ಗಮನಕ್ಕೆ ತಂದರು. ಜಿಲ್ಲಾ ಪಂಚಾಯತ್ ಸಿಇಓ ಪ್ರತೀಕ್ ಬಾಯಲ್, ಹೊರ ಜಿಲ್ಲೆಯಿಂದ ಬರುವ ವಿದ್ಯಾರ್ಥಿಗಳಿಗೆ 7 ರಿಂದ 9 ನೇ ತರಗತಿಯವರೆಗೆ ಅಕ್ಷರಾಭ್ಯಾಸ, ಓದು, ಬರಹ ಸೇರಿದಂತೆ ತಳಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿದೆ. ಶಾಲಾ ಶಿಕ್ಷಕರು ವಿಶೇಷ ಕಾಳಜಿ ವಹಿಸಿ, ಈ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದರು. ಸಭೆಯಲ್ಲಿ ವಿಧಾನಸಭೆ ಸದಸ್ಯರುಗಳಾದ ಕಟಕದೊಂಡ ವಿಠ್ಠಲ್ ದೊಂಡಿಬಾ, ಬಿ.ಪಿಹರೀಶ್, ರಾಜೇಶ್ ನಾಯಕ್ ಯು. ಹಾಗೂ ಕರೆಮ್ಮ ಜಿ. ನಾಯ್ಕ, ವಿಧಾನಪರಿಷತ್ತಿನ ಸದಸ್ಯರುಗಳಾದ ಕೆ. ಅಬ್ದುಲ್ ಜಬ್ಬರ್, ಇಲಾಖೆಯ ಕಾರ್ಯದರ್ಶಿ ಡಾ. ಎನ್.ವಿ. ಪ್ರಸಾದ್, ಆಯುಕ್ತರಾದ ಸುರಳ್ಕರ್ ವಿಕಾಸ್ ಕಿಶೋರ್, ಜಂಟಿ ಕಾರ್ಯದರ್ಶಿ ಶಿವರಾಮಾಚಾರಿ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಗಳನ್ನು ಲವ್‌ ಮಾಡಿದ್ದಕ್ಕೆ ಕೆಲಸಗಾರನ ಹತ್ಯೆ
ಡೇಟಿಂಗ್‌ ಆ್ಯಪಲ್ಲಿ ಪರಿಚಯವಾದಯುವಕನ ದರೋಡೆ: ನಾಲ್ವರ ಸೆರೆ