ಕನ್ನಡಪ್ರಭ ವಾರ್ತೆ ವಿಜಯಪುರ: ಆಲಮಟ್ಟಿ ಆಣೆಕಟ್ಟಿ 524,256 ಮೀಟರ್‌ಗೆ ನೀರು ಹಿಡಿದಿಡುವುದು, ಸಂಖ-ಭುಯ್ಯಾರ ಏತ ನೀರಾವರಿ ಹಾಗೂ ಮುಳವಾಡ ಏತ ನೀರಾವರಿಯಿಂದ ಕೆರೆ, ಹಳ್ಳಿಗಳಿಗೆ ನೀರು ಬಿಡುವುದು. ಡೋಣಿ ನದಿ ಪೂರ್ಣ ಹೂಳೆತ್ತುವುದು, ಕಂದಾಯ, ಶಿಕ್ಷಣ, ವಿದ್ಯುತ್, ವಿಮೆ ಹಾಗೂ ಕಬ್ಬು ಮುಂತಾದ ಬೇಡಿಕೆಗಳ ಕುರಿತು ಭಾರತೀಯ ಕಿಸಾನ್ ಸಂಘ, ಕರ್ನಾಟಕ ಪ್ರದೇಶ ಕರ್ನಾಟಕ ಉತ್ತರ ಪ್ರಾಂತದಿಂದ ಜಿಲ್ಲಾಧಿಕಾರಿ ಡಾ.ಆನಂದ.ಕೆ ಅವರಿಗೆ ಮನವಿ ಸಲ್ಲಿಸಲಾಯಿತು.ಭಾರತೀಯ ಕಿಸಾನ ಸಂಘ ಕರ್ನಾಟಕ ಪ್ರದೇಶ ಜಿಲ್ಲಾ ಅಧ್ಯಕ್ಷ ಐ.ರವೀಂದ್ರನಾಥ ಮೇಡೆಗಾರ ಮಾತನಾಡಿ, ಅಲಮಟ್ಟಿ ಆಣೆಕಟ್ಟು ಎತ್ತರ 524.256 ಮೀಟರ್‌ಗೆ ನೀರನ್ನು ಹಿಡಿದಿಟ್ಟು ಎಲ್ಲ ನೀರಾವರಿ ಯೋಜನೆಗಳಿಂದ ಭೂಮಿಗೆ ನೀರು ಹರಿಸಲು ಅನುಕೂಲವಾಗುತ್ತದೆ. ಕೃಷ್ಣಾ ಕೊಳ್ಳದ 3ನೇ ಹಂತದ ಎಲ್ಲ ಕಾಮಗಾರಿಗಳನ್ನು ಸಮರೋಪಾದಿಯಲ್ಲಿ ಪೂರ್ಣಗೊಳಿಸಿ ಅದರಂತೆ ಮುಳುಗಡೆ ಪ್ರದೇಶದ ರೈತರಿಗೆ ಪುನರ್ವಸತಿ ಹಾಗೂ ಯೋಗ್ಯ ಪರಿಹಾರವನ್ನು ನೀಡಿ ರಾಜ್ಯ ಸರ್ಕಾರ ಕೊಟ್ಟ ಭರವಸೆಯನ್ನು ಈಡೇರಿಸಬೇಕು. ತಿಡಗುಂದಿ ಶಾಖಾ ಕಾಲುವೆಯ ಜಮೀನುಗಳಿಗೆ ನೀರು ಹರಿಸಲು ಡಿಸ್ಟ್ರಿಬ್ಯೂಟರ್, ಲ್ಯಾಟರಲ್ ಗಳನ್ನು ನಿರ್ಮಾಣ ಮಾಡಲು ಶೀಘ್ರ ಟೆಂಡರ್ ಕರೆದು ಕಾಮಗಾರಿ ಆರಂಭಿಸಬೇಕು ಎಂದು ಆಗ್ರಹಿಸಿದರು.ಉಪಾಧ್ಯಕ್ಷ ಮಲ್ಲನಗೌಡ ಪಾಟೀಲ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡಿ ರೈತರ ಬೆಳೆಗಳಿಗೆ ಸೂಕ್ತ ಬೆಲೆ ನೀಡಬೇಕು. ಸರ್ಕಾರ ಈಗಾಗಲೇ ಹೊಲಗಳಿಗೆ ಹೋಗುವ ರಸ್ತೆಗಳಿಗೆ ಆದೇಶ ಹೊರಡಿಸಿತ್ತು. ಆದರೆ ಕಾರ್ಯರೂಪದಲ್ಲಿ ಜಿಲ್ಲಾಧಿಕಾರಿಗಳಾಗಲೀ, ಉಪ ವಿಭಾಗಾಧಿಕಾರಿಗಳಾಗಲೀ, ತಹಸೀಲ್ದಾರಗಳಾಗಲೀ ಸರಿಯಾಗಿ ಸ್ಪಂದನೆ ನೀಡುತ್ತಿಲ್ಲ. ಈಗಲಾದರೂ ಜಮೀನಿಗೆ ಹೋಗಲು ರಸ್ತೆ ಯಾವುದೇ ನಿರ್ಬಂಧ ಇರದಂತೆ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಗುರುನಾಥ ಬಗಲಿ, ಈರಪ್ಪ ಗೋಟ್ಯಾಳ, ಚನ್ನಪ್ಪ ಮಿರಗಿ, ಈರಪ್ಪ ಬಿರಾದಾರ, ಮಲ್ಲಿಕಾರ್ಜುನ ನೇಕಾರ, ಸಿದ್ದರಾಯ ತೇಲಿ, ಮಳಸಿದ್ದ ನೇಕಾರ, ಚಿದಾನಂದ ಮದರಿ, ಶರಣಪ್ಪ ತಾರಾಪುರ, ಅರುಣಗೌಡ ತೇರದಾಳ, ಭೀಮರಾಯ ಬುಕಣಿ, ಗುರುನಾಥ ತಾರಾಪುರ, ಪೀರಗೌಡ ಪಾಟೀಲ, ಮೊಮ್ಮದರಫೀಕ ಇನಾಮದಾರ, ಸಂತೋಷ ಸುಧಾಮ, ಚಂದಪ್ಪ ಮಿರಗಿ ಉಪಸ್ಥಿತರಿದ್ದರು.