ಕನ್ನಡಪ್ರಭ ವಾರ್ತೆ ಮೈಸೂರುಶಾಸ್ತ್ರೀಯ ಭಾಷೆಗಳ ಅಧ್ಯಯನಕ್ಕೆ ಶಿಸ್ತು ಇರಬೇಕು. ಸಂಶೋಧನೆಗೆ ಅಂತರ್ ಶಿಸ್ತೀಯ ಗುಣಗಳನ್ನು ಹೊಂದಿರಬೇಕು ಎಂದು ಸಂಸ್ಕೃತ ವಿವಿಯ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಹೇಳಿದರು.ನಗರದ ಭಾರತೀಯ ಭಾಷಾ ಸಂಸ್ಥಾನದ ಸಭಾಂಗಣದಲ್ಲಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಶಾಸ್ತ್ರೀಯ ಕನ್ನಡ ಭಾಷಾ ಮಾನ್ಯತಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಒಂದು ಸಂಸ್ಥೆಗೆ ಶಿಖರಪ್ರಾಯವಾದದ್ದು ಪುಸ್ತಕಗಳು, ಜ್ಞಾನವೇ ಪ್ರಧಾನವಾದದ್ದು ಎಂದು ಅಲ್ಲಮಪ್ರಭುಗಳು ಎಂದು ಹೇಳುತ್ತಿದ್ದರು. ಜ್ಞಾನ ಎಂಬುದು ಹರಿಯುವ ಶುದ್ಧ ತಿಳಿಯುವ ನೀರಾಗಿದ್ದು ಈ ಸ್ಥಳವನ್ನು ಮಾನಸ ಗಂಗೋತ್ರಿ ಎಂದು ಕರೆಯಲ್ಪಡಲಾಯಿತು. ಜ್ಞಾನವನ್ನು ಪುಸ್ತಕಗಳ ಪ್ರಕಟಣೆ ಕಾರ್ಯಾಗಾರದ ಮೂಲಕ ಪ್ರಸ್ತುತಪಡಿಸಬಹುದು. ಅರಿವು ಎನ್ನುವುದು ಜ್ಞಾನ ಎನ್ನುವುದು ಪುಸ್ತಕಗಳು ಎಂದು ಅವರು ಹೇಳಿದರು.ಕನ್ನಡ ಅಸ್ಮಿತೆಯನ್ನು ಯುವ ಸಂಶೋಧಕರು ಉಳಿಸಿಕೊಳ್ಳಬೇಕು. ಸಂಶೋಧಕರಿಗೆ ಎಲ್ಲಾ ವಿಷಯಗಳ ಬಗ್ಗೆ ಅರಿವು ಇರಬೇಕು. ಹೊಸ ಗ್ರಹಿಕೆಯನ್ನು ಕೊಡಬೇಕು. ಕನ್ನಡಕ್ಕೆ 2 ಸಾವಿರಕ್ಕೂ ಹೆಚ್ಚಿನ ವರ್ಷದ ಇತಿಹಾಸವಿದೆ. ಸಾವಿರ ವರ್ಷದಿಂದಲೂ ಅತ್ಯುನ್ನತ ಕೃತಿಗಳು ರಚನೆಯಾಗಿವೆ. ಇತರ ದ್ರಾವಿಡ ಭಾಷೆಗಳಲ್ಲದೇ, ಭಾರತೀಯ ಭಾಷೆಗಳನ್ನೂ ಪ್ರಭಾವಿಸಿದೆ. ಶಾಸ್ತ್ರೀಯ ಭಾಷಾ ಅಧ್ಯಯನವನ್ನು 1,500 ವರ್ಷಗಳಿಂದ 1,750ಕ್ಕೆ ವಿಸ್ತರಿಸಿದರೆ ಹಳೆಗನ್ನಡವಲ್ಲದೇ ನಡುಗನ್ನಡ ಕಾಲಘಟ್ಟವೂ ಸೇರಲಿದೆ. ಅದರಿಂದ ಸಂಶೋಧನೆಯೂ ವಿಸ್ತಾರವಾಗಲಿದೆ ಎಂದು ಅವರು ಹೇಳಿದರು.ಕೇಂದ್ರದ ಯೋಜನಾ ನಿರ್ದೇಶಕ ಪ್ರೊ.ಎನ್.ಎಂ. ತಳವಾರ ಮಾತನಾಡಿ ಕನ್ನಡ ಭಾಷೆ ಸಾಹಿತ್ಯ ಪರಂಪರೆ ಬಹು ದೊಡ್ಡದು. ಒಂದು ಕೈಯಲ್ಲಿ ಪಂಪ ಭಾರತವನ್ನು ಇನ್ನೊಂದು ಕೈಯಲ್ಲಿ ಕುಮಾರ ವ್ಯಾಸ ಭಾರತವನ್ನು ಹಿಡಿದುಕೊಂಡು ಪ್ರಪಂಚದ್ಯಾಂತ ಸುತ್ತಿ ನಾನು ಕನ್ನಡವನ್ನು ಪ್ರತಿಷ್ಠಾಪಿಸಬಲ್ಲೆ ಆ ಮಾತು ಉತ್ಪ್ರೇಕ್ಷೆಯಲ್ಲ. ನಿಜ ಕನ್ನಡ ನಾಡಿನಲ್ಲಷ್ಟೇ ಅಲ್ಲ ಕನ್ನಡ ಗಡಿಯಾಚೆಗೂ ದೊರೆಯುವ ಶಾಸನಗಳು ಕನ್ನಡ ಅರಸರ ಶೌರ್ಯ ಪರಂಪರೆ ಮತ್ತು ಸಾಹಿತ್ಯ ಕಲೆ ಮೇಲಿನ ಪ್ರೀತಿಯನ್ನು ಸಾರುವ ಸ್ಮಾರಕಗಳು ಎಂದರು.ಕನ್ನಡಕ್ಕೆ ಶಾಸ್ತ್ರೀಯ ಮಾನ್ಯತೆ ದೊರೆತು ಇಂದಿಗೆ ಹಲವು ವರ್ಷಗಳೇ ತುಂಬಿದ್ದವು. ಈ ಸುದಿರ್ಘ ಅವಧಿಯಲ್ಲಿ ಅದು ಶಾಸ್ತ್ರೀಯ ಕನ್ನಡ ಅತ್ಯುನ್ನತ್ತ ಅಧ್ಯಯನ ಕೇಂದ್ರವು ತನಗೆ ದೊರೆತ ಪರಿಮಿತ ಅವಕಾಶದಲ್ಲಿ ಸುಮಾರು ವೈವಿಧ್ಯಮಯ ಕಾರ್ಯಕ್ರಮ ಆಯೋಜಿಸುವ ಮೂಲಕ ಮತ್ತು ಈಗಾಗಲೇ ಎಂಟು ಕೃತಿಗಳನ್ನು ಪ್ರಕಟಿಸಿ ಇಪ್ಪತೈದು ಕೃತಿಗಳನ್ನು ಬಿಡುಗಡೆಗೊಳಿಸುವ ಹಂತಕ್ಕೆ ತಲುಪಿದ ಎಂದು ಅವರು ತಿಳಿಸಿದರು.ಈ ಪೈಕಿ ವಿಶೇಷ ಉಪನ್ಯಾಸ, ವಿಚಾರ ಸಂಕೀರಣ, ಕಾರ್ಯಾಗಾರ, ತರಬೇತಿಗಳು ಮೊದಲಾದವು ಸೇರಿವೆ ಎಂದರು.ಕನ್ನಡಿಗರೆಲ್ಲಾ ಸಂಕಲ್ಪ ಶಕ್ತಿಯಿಂದ ಮತ್ತು ರಾಜ್ಯ ಹಾಗೂ ಕೇಂದ್ರದ ರಾಜಕಾರಣಿಗಳ ಇಚ್ಚಾಶಕ್ತಿಯಿಂದ ಆದಷ್ಟು ಬೇಗ ಕೇಂದ್ರ ಸರ್ಕಾರ ಶಾಸ್ತ್ರೀಯ ಕನ್ನಡ ಅತ್ಯುನ್ನತ್ತ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತತೆ ಘೋಷಿಸಲಿ ಎಂದು ಅವರು ಮನವಿ ಮಾಡಿದರು.ಪ್ರೊ.ಪಿ.ಆರ್. ಧರ್ಮೇಶ್ ಫರ್ನಾಂಡಿಸ್, ಚಿಂತಕ ಶಂಕರ್ ದೇವನೂರು, ವಿದ್ವಾಂಸ ಪ್ರೊ.ಎನ್.ಎಸ್. ತಾರನಾಥ್, ಸಂಸ್ಥಾನ ಪ್ರಭಾರ ನಿರ್ದೇಶಕ ಪ್ರೊ. ಉಮಾರಾಣಿ ಇದ್ದರು.